More

    ಕಾವ್ಯ ತಪಸ್ವಿ ಎಚ್ಚೆಸ್ವಿ; ಸಹನೆಯ ಮೂರ್ತಿ 

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.

    ಎಚ್ಚೆಸ್ವಿ ಅವರೊಂದಿಗೆ ಸುಮಾರು 15 ವರ್ಷಗಳ ಒಡನಾಟ ನನ್ನದು. ಅವರು ಅಧ್ಯಕ್ಷತೆ ವಹಿಸಿದ ಹತ್ತಾರು ಕವಿಸಮ್ಮೇಳನಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದೇನೆ. ಅದರಲ್ಲಿಯೂ ಅವರು ನನಗೆ ಹೆಚ್ಚು ಆಪ್ತರಾದದ್ದು ‘ರಾಷ್ಟ್ರಕವಿ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಾಗ (2006).

    ಕಾವ್ಯ ತಪಸ್ವಿ ಎಚ್ಚೆಸ್ವಿ; ಸಹನೆಯ ಮೂರ್ತಿ ಅದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮುಂತಾದ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮ. ಟಿವಿಯಲ್ಲಿ ನೇರಪ್ರಸಾರ ಬೇರೆ ಇತ್ತು. ನಿರೂಪಣೆಯಲ್ಲಿ ಒಂಚೂರೂ ತಪ್ಪಾಗುವಂತಿರಲಿಲ್ಲ. ಅದಕ್ಕೆ ಬೇಕಾದ ಸ್ಕ್ರಿಪ್ಟ್ ರೆಡಿ ಮಾಡಿಕೊಳ್ಳಲು ಎಚ್ಚೆಸ್ವಿಯವರ ಮಾರ್ಗದರ್ಶನ ಪಡೆಯುವಂತೆ ಐ.ಎಂ. ವಿಠ್ಠಲಮೂರ್ತಿಯವರು ಸಲಹೆ ನೀಡಿದರು. ಅದರಂತೆ ಎಚ್ಚೆಸ್ವಿ ಅವರ ಬಳಿ ಹೋದಾಗ ಸಂತೋಷದಿಂದ ನನಗೆ ಬೇಕಾದ ಮಾಹಿತಿಯನ್ನೆಲ್ಲ ನೀಡಿ ಸಹಾಯ ಮಾಡಿದರು.

    ನಂತರ ಈಟಿವಿಯ ಕ್ಲಾಸಿಕಲ್ ಸಿರೀಸ್ ಚಿತ್ರೀಕರಣ ಹಂಪಿಯಲ್ಲಿ ನಡೆದಾಗಲೂ ಅತ್ಯುತ್ತಮ ಸ್ಕ್ರಿಪ್ಟ್ ರೂಪುಗೊಂಡಿದ್ದು ಎಚ್ಚೆಸ್ವಿಯವರ ಸಹಾಯದಿಂದಲೇ. ಅವರಿಗೆ 75 ತುಂಬಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿಯೂ ಸಭಿಕರಿಗೆ ಅವರನ್ನು ಪರಿಚಯಿಸುವ ಸೌಭಾಗ್ಯ ನನಗೆ ಒದಗಿಬಂದಿತ್ತು. ಆ ಕಾರ್ಯಕ್ರಮದಲ್ಲಿ ಎಚ್ಚೆಸ್ವಿಯವರ ಪ್ರಾಣಸ್ನೇಹಿತ ಬಿ.ಆರ್. ಲಕ್ಷ್ಮಣರಾಯರೂ ಇದ್ದರು. (ಅವರಿಬ್ಬರ ಜೋಡಿಯನ್ನು ನಾನು ‘ಮಂಟೇಸ್ವಾಮಿ-ಮಲೆಮಹದೇಶ್ವರ’ ಅಂತ ತಮಾಷೆ ಮಾಡುವುದುಂಟು.)

    ಎಚ್ಚೆಸ್ವಿಯವರ ಜತೆಗಿನ ಇನ್ನೊಂದು ಸ್ಮರಣೀಯ ಒಡನಾಟವೆಂದರೆ ‘ಅಮೃತವಾಹಿನಿ’ ಚಲನಚಿತ್ರದಲ್ಲಿ ನಾನು ಅವರ ಪತ್ನಿಯಾಗಿ ಅಭಿನಯಿಸಿದ್ದು! ರಾಘವೇಂದ್ರ ಪಾಟೀಲರ ಕಾದಂಬರಿ ಆಧಾರಿತ ಚಿತ್ರ ಅದು. ಎಚ್ಚೆಸ್ವಿಯವರೇ ಹಾಡುಗಳನ್ನು ಬರೆದು ಸಂಭಾಷಣೆಗೆ ಸಹಾಯ ಮಾಡಿದ್ದಲ್ಲದೆ ಒಂದು ಪಾತ್ರದಲ್ಲಿ ಅಭಿನಯವನ್ನೂ ಮಾಡಿದರು. 3-4 ದಿನಗಳ ಶೂಟಿಂಗ್ ಅದು. ನಾವಿಬ್ಬರೂ ದಂಪತಿಯಾಗಿ ಮತ್ತಿಕೆರೆ ಸಮೀಪದ ಪಾರ್ಕ್​ನಲ್ಲಿ ಎಳೆಮಗುವೊಂದನ್ನು ಆಟ ಆಡಿಸುವ ದೃಶ್ಯ ಇತ್ತು.

    ನನ್ನ ವಯಸ್ಸಿಗೆ ಅವರನ್ನು ಮ್ಯಾಚ್ ಮಾಡಬೇಕಲ್ಲ? ಅದಕ್ಕಾಗಿ ಅವರಿಗೆ ವಿಗ್ ಹಾಕಿ ಮೇಕಪ್ ಮಾಡಿ ಅಣಿಗೊಳಿಸುತ್ತಿದ್ದರು! ಒಮ್ಮೆಯಂತೂ ಸಂಜೆಯಿಂದ ಬೆಳಗಿನ ಜಾವದವರೆಗೂ ಶೂಟಿಂಗ್ ನಡೀತು. ಎಚ್ಚೆಸ್ವಿ ಇಳಿವಯಸ್ಸಿನಲ್ಲೂ ಒಂಚೂರೂ ಕೋಪಿಸಿಕೊಳ್ಳದೆ ಬೇಸರಿಸಿಕೊಳ್ಳದೆ ತಮ್ಮ ಪಾಲಿನ ಅಭಿನಯವನ್ನು ಸಮಾಧಾನಚಿತ್ತರಾಗಿ ಮುಗುಳ್ನಗುತ್ತ ನಿರ್ವಹಿಸಿದರು. ಅಷ್ಟೊಂದು ತಾಳ್ಮೆಯ ಸ್ವಭಾವ ಅವರದು. ನನ್ನ ಬದುಕಿನಲ್ಲಿ ಮರೆಯಲಾಗದ ಮಾರ್ಗದರ್ಶಕ ಅವರು.

    | ವತ್ಸಲಾ ಮೋಹನ್ ನಟಿ, ನಿರೂಪಕಿ, ಉಪನ್ಯಾಸಕಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts