More

    ಮೋಕ್ಷದ ಮೆಟ್ಟಿಲು ‘ವೈಕುಂಠ ಏಕಾದಶಿ’

    ರಾಜಗುರು ಬಿ.ಎಸ್.ದ್ವಾರಕನಾಥ ಬೆಂಗಳೂರು : ಹಿಂದು ಪಂಚಾಂಗದ ಪ್ರಕಾರ ಪ್ರತಿಯೊಂದು ಹಬ್ಬ,ವ್ರತಗಳಿಂದ ವಿವಿಧ ಲಗಳಿವೆ. ಅಂತೆಯೇ ವರ್ಷ ಒಂದರಲ್ಲಿ 23 ಏಕಾದಶಿಗಳು ಬರಲಿದ್ದು, ಅವುಗಳಲ್ಲಿ ಧನುರ್ಮಾಸದಲ್ಲಿ ಬರುವ ಏಕಾದಶಿ ಅತ್ಯಂತ ಮಹತ್ವದ್ದಾಗಿದೆ. ಇದನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಭಾರತೀಯರ ನಂಬಿಕೆ ಪ್ರಕಾರ ಪೌರ್ಣಿಮೆ, ಅಮಾವಾಸ್ಯೆಯನ್ನು ಆಧರಿಸಿ ಕೃಷ್ಣಪಕ್ಷ ಮತ್ತು ಶುಕ್ಲಪಕ್ಷಗಳನ್ನು ನಿರ್ಧರಿಸಲಾಗುತ್ತದೆ. ಆ ಎರಡು ಪಕ್ಷದಲ್ಲೂ ಬರುವ ತಿಥಿ ಪ್ರಕಾರ ಆಯಾ ದಿನದ ಮಹತ್ವವನ್ನು ಹೇಳಲಾಗಿದೆ. ಅದರಂತೆ ವರ್ಷದಲ್ಲಿ ಒಟ್ಟು 23 ಏಕಾದಶಿಗಳು ಬರುತ್ತವೆ. ಅವುಗಳಲ್ಲಿ ಧನುರ್ಮಾಸದಲ್ಲಿ ಬರುವ ಏಕಾದಶಿಯು ಬಹಳ ಪವಿತ್ರವಾಗಿದ್ದು, ಇದನ್ನು ವೈಕುಂಠ ಏಕಾದಶಿ ಎಂಬುದಾಗಿ ಕರೆಯಲಾಗುತ್ತದೆ. ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯನು ಮೋಕ್ಷವನ್ನು ಪಡೆಯಬೇಕೆಂಬ ಉತ್ಕಟ ಇಚ್ಛೆಯನ್ನು ಹೊಂದಿರುತ್ತಾನೆ. ಅಂತಹವರ ಇಚ್ಛೆ ಕೈಗೂಡಲು ಇರುವ ಮೋಕ್ಷದ ಮೆಟ್ಟಿಲೇ ‘ವೈಕುಂಠ ಏಕಾದಶಿ’. ಈ ಪವಿತ್ರ ದಿನದಂದು ವೆಂಕಟೇಶ್ವರ ಅಥವಾ ವಿಷ್ಣು ಅವತಾರದ ಯಾವುದೇ ದೇವರ ದರ್ಶನ ಮಾತ್ರದಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶಾಸಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆಷಾಡ ಮಾಸದ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯುತ್ತಾರೆ. ಅಂದು ಮಹಾವಿಷ್ಣುವು ಯೋಗನಿದ್ರೆಗೆ ಜಾರಲಿದ್ದು, ವೈಕುಂಠ ಏಕಾಶಿಯಂದು ಭಗವಂತ ಎಚ್ಚರಾಗುತ್ತಾನೆ ಎಂಬುದು ನಂಬಿಕೆ. ಆದ್ದರಿಂದ ದೇವರು ಜಾಗೃತಗೊಳ್ಳುವ ಏಕಾಶಿಯಂದು ಆತನ ದರ್ಶನ ಮಾಡಿ ಉತ್ತರ ದಿಕ್ಕಿನ ಬಾಗಿಲಿನಿಂದ ಹೊರ ಬರುವುದರಿಂದ ಜೀವನದಲ್ಲಿ ಉತ್ತರೋತ್ತರ ಅಭಿವೃದ್ಧಿ ಪಡೆಯಬಹುದು. ಹಾಗೂ ಅಂತಿಮ ಗುರಿಯಾಗಿರುವ ಮೋಕ್ಷವನ್ನು ಸಂಪಾದಿಸಬಹುದೆಂದು ಹೇಳಲಾಗಿದೆ. ಈ ಮಾತಿಗೆ ಪೂರಕವೆಂಬಂತೆ ದಕ್ಷಿಣದ ತುದಿಯಲ್ಲಿದ್ದ ದುಷ್ಟರಾಕ್ಷಸ ರಾವಣನನ್ನು ಸಂಹರಿಸಿದ ಶ್ರೀರಾಮನು ಉತ್ತರದ ಅಯೋಧ್ಯೆಗೆ ಮರಳಿ ಬಂದು ಅಖಂಡ ಭಾರತವನ್ನು ಸಹಸ್ರಾರು ವರ್ಷ ಆಳಿದ್ದಾನೆ. ಭಾರತದ ಉತ್ತರ ಭಾಗದಲ್ಲಿ ಕಾಶಿ, ಕೇದಾರ, ಬದರಿ, ಗಯಾ, ಮಥುರ, ಅಯೋಧ್ಯೆ, ಹೀಗೆ ಅನೇಕ ಪುಣ್ಯಕ್ಷೇತ್ರಗಳಿವೆ. ಗಂಗಾ, ಯಮುನಾ, ಸರಸ್ವತಿ ಮುಂತಾದ ಪುಣ್ಯತೀರ್ಥಗಳಿರುವುದರಿಂದ ಉತ್ತರ ಭಾರತವನ್ನು ಮೋಕ್ಷಭೂಮಿ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ತಿರುಪತಿಯಲ್ಲಿರುವ ಪಾಪವಿನಾಶಿ ತೀರ್ಥದಲ್ಲಿ ಮಿಂದು ಕಲಿಯುಗ ವೈಕುಂಠ ಎಂದೇ ಪ್ರಸಿದ್ಧವಾಗಿರುವ ಸಪ್ತಗಿಗಿರಿಯ ವೆಂಕಟೇಶ್ವರನ ದರ್ಶನ ಮಾಡುವುದರಿಂದ ಜನ್ಮಜನ್ಮಾಂತರದ ಪಾಪ ನಾಶವಾಗಿ ಸಕಲ ಸಂಪತ್ತು ದೊರೆಯುವುದರಲ್ಲಿ ಸಂದೇಹವಿಲ್ಲ. ಕುಭೇರನ ಮೂಲ ಸ್ಥಾನ ಇದಾಗಿರುವುದರಿಂದ ಲಕ್ಷ್ಮೀ ಕಟಾಕ್ಷದೊಂದಿಗೆ ದಾರಿದ್ರ್ಯ ನಾಶವಾಗಿ ಜೀವನದಲ್ಲಿ ಶ್ರೇಯಸ್ಸು ದೊರೆಯಲಿದೆ. ಜ್ಞಾನವಿಜ್ಞಾನ ಸಮ್ಮತ ಏಕಾದಶಿ ಆಚರಣೆ : ಭಾರತೀಯ ಋಷಿಮುನಿಗಳು ಆಚರಣೆಗೆ ತಂದಿರುವ ಪ್ರತಿಯೊಂದು ಸಂಪ್ರದಾಯಗಳು ಕೂಡಾ ಜ್ಞಾನವಿಜ್ಞಾನದ ಸಮ್ಮಿಳಿತವಾಗಿವೆ. ಪ್ರತಿ ತಿಂಗಳಿಗೆ ಎರಡು ಬಾರಿ ಬರುವ ಏಕಾದಶಿ ವ್ರತದಿಂದ ದೇಹಶುದ್ಧಿಯ ಜೊತೆಗೆ ಜಡತ್ವ ನಿವಾರಣೆಯಾಗಿ ಮಾನಸಿಕ ಏಕಾಗ್ರತೆ ಬರುತ್ತದೆ. ವರ್ಷಪೂರ್ತಿ ಎಲ್ಲ ಏಕಾದಶಿಗಳನ್ನು ಆಚರಿಸಲು ಸಾಧ್ಯವಾಗದವರು ಕೊನೆಪಕ್ಷ ಪುಷ್ಯಮಾಸದ ಶುಕ್ಷಪಕ್ಷದ ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿಯೊಂದನ್ನಾದರೂ ಆಚರಿಸಿದಲ್ಲಿ ಪೂರ್ಣಲ ಪಡೆಯಬಹುದು. ಈ ಬಾರಿ ವೈಕುಂಠ ಏಕಾದಶಿಯು ಭರಣಿ ನಕ್ಷತ್ರದಲ್ಲಿದ್ದು, ಸೂರ್ಯೋದಯ ಕಾಲಕ್ಕೆ ಬಂದಿರುವುದರಿಂದ ಬಹಳ ಶ್ರೇಷ್ಠವಾಗಿದೆ. ಬೆಳಗಿನ ಜಾವ 3.30ರ ನಂತರ ಸ್ನಾನ ಮಾಡಿಕೊಂಡು ಯಾವುದೇ ವಿಷ್ಣು ದೇವಾಲಯಕ್ಕೆ ಹೋಗಿ ದೇವರಿಗೆ ಎಳನೀರು, ಬಾಳೇಹಣ್ಣು ಮತ್ತಿತರ ಫಲ ಸಹಿತ ಪಂಚಾಮೃತ ಅಭಿಷೇಕ ಮಾಡಿಸಿ ದರ್ಶನ ಮಾಡುವುದು ಶ್ರೇಯಸ್ಕರ. ಏಕಾದಶಿಯಂದು ನಾರಾಯಣ ನವಾಕ್ಷರಿ ಮಂತ್ರ ಅಥವಾ ವಿಷ್ಣು ಸಹಸ್ರನಾಮ ಅಥವಾ ಶ್ರೀಕೃಷ್ಣಾಷ್ಟೋತ್ತರ ಅಥವಾ ರಾಮಾಯಣ ಪಾರಾಯಣ ಮಾಡುವುದರಿಂದ 42 ತಲೆಮಾರು ಮೋಕ್ಷ ಪ್ರಾಪ್ತಿ ಹಾಗೂ ಶಕ್ತ್ಯಾನುಸಾರ ದಾನ ನೀಡುವುದರಿಂದ ಕುಲಕೋಟಿಗೆ ಪುಣ್ಯಪ್ರಾಪ್ತಿಯಾಗಲಿದೆ ಎಂದು ಧರ್ಮಗ್ರಂಥದಲ್ಲಿ ಉಲ್ಲೇಖವಿದೆ. ಗೀತಾ ಜಯಂತಿ ವಿಶೇಷ ವೈಕುಂಠ ಏಕಾದಶಿಯ ಪರ್ವಕಾಲದಲ್ಲಿಯೇ ಗೀತಾ ಜಯಂತಿ ಬಂದಿರುವುದು ಈ ವರ್ಷದ ವಿಶೇಷ. ಧರ್ಮದ ಪರವಾಗಿ ಸ್ವತಃ ಸಾರಥ್ಯ ವಹಿಸಿದ ಶ್ರೀಕೃಷ್ಣನು ಭೂಮಿಯ ಮೇಲೆ ಅಧರ್ಮವನ್ನು ನಾಶ ಮಾಡಿದ ಮಹಾಭಾರತ ಕಾವ್ಯವು ಇಡೀ ಜಗತ್ತಿನಲ್ಲೇ ಮಾನ್ಯವಾಗಿದೆ. ಮಹಾವಿಷ್ಣುವು ದಶಾವತಾರಗಳಲ್ಲಿ ಒಂದಾದ ಕೃಷ್ಣಾವತಾರದ ಮೂಲಕ ಅರ್ಜುನನ್ನು ನಿಮಿತ್ತ ಮಾಡಿಕೊಂಡು ಯುದ್ಧಭೂಮಿಯಲ್ಲಿ ಉಪದೇಶಿಸದ ಧರ್ಮದ ಸಾರವೇ ಭಗವದ್ಗೀತೆ. ಸಮಸ್ತ ಹಿಂದುಗಳ ಧರ್ಮಗ್ರಂಥವಾಗಿರುವ ಭಗವದ್ಗೀತೆಯನ್ನು ಭಕ್ತಿಯಿಂದ ನಿತ್ಯ ಪಠಣ, ಪಾರಾಯಣ, ಸ್ತೋತ್ರ ಮಾಡುವವರಿದ್ದಾರೆ. ವರ್ಷಕ್ಕೆ ಒಂದು ದಿನವಾದರೂ ಭಗವದ್ಗೀತೆಯನ್ನು ಸ್ಮರಿಸಬೇಕೆಂಬ ಉದ್ದೇಶಕ್ಕೆ ‘ಗೀತಾ ಜಯಂತಿ’ಯನ್ನು ಆಚರಿಸಲಾಗುತ್ತದೆ. ಈ ಬಾರಿ ವೈಕುಂಠ ಏಕಾದಶಿ ಮತ್ತು ಗೀತಾ ಜಯಂತಿ ಒಂದೇ ದಿನ ಸಮಾಗಮಗೊಂಡಿರುವುದು ಭಗವಾನ್ ವಿಷ್ಣುವನ್ನು ಒಂದೇ ದಿನ ಎರಡು ಪ್ರಮುಖ ಕಾರಣಗಳಿಂದ ಅರ್ಚಿಸಿ, ಆರಾಧಿಸಲು ಶ್ರೇಷ್ಠವಾಗಿದೆ. ಶ್ರೀಕೃಷ್ಣ ಪಾಂಡವರ ಕೈಯಿಂದ ಅನಂತ ವ್ರತವನ್ನು ಮಾಡಿಸಿ ಕಳೆದು ಹೋದ ರಾಜ್ಯವನ್ನು ಮರಳಿ ಪಡೆಯುವಂತೆ ಮಾಡಿರುವುದು ಮಹಾಭಾರತದಿಂದ ತಿಳಿದುಬರುತ್ತದೆ. ವಿಶ್ವದಲ್ಲಿ ಶ್ರೇಷ್ಠಭಾರತದ ಪರಿಕಲ್ಪನೆ ಗಟ್ಟಿಗೊಳ್ಳಲು ಮಹಾಭಾರತದ ಪಾಲು ಪ್ರಮುಖವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts