More

    7 ಕೇಂದ್ರಗಳಲ್ಲಿ 364 ನೋಂದಾಯಿತರಿಗೆ ಲಸಿಕೆ

    ಧಾರವಾಡ: ಕರೊನಾ ನಿರೋಧಕ ಲಸಿಕಾಕರಣಕ್ಕೆ ಜಿಲ್ಲೆಯ ವಿವಿಧೆಡೆ ಶನಿವಾರ ಚಾಲನೆ ನೀಡಲಾಯಿತು. ಇಲ್ಲಿನ ಪುರೋಹಿತನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಬ್ಬಳ್ಳಿಯ ಕಿಮ್್ಸ, ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯ, ಗರಗ, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳಲ್ಲಿ ಮೊದಲ ಹಂತವಾಗಿ ನೋಂದಾಯಿತ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು.

    ಕಿಮ್್ಸ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ 100, ಕಲಘಟಗಿ ಆಸ್ಪತ್ರೆಯಲ್ಲಿ 70, ಕುಂದಗೋಳ 90, ನವಲಗುಂದ 70, ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 100, ಗರಗ ಆರೋಗ್ಯ ಕೇಂದ್ರದಲ್ಲಿ 80 ಮತ್ತು ಧಾರವಾಡ ಪುರೋಹಿತನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಸೇರಿ ಒಟ್ಟು 560 ಜನ ನೋಂದಾಯಿಸಿಕೊಂಡಿದ್ದರು. ಆದರೆ, ಸಂಜೆ 5ರವರೆಗೆ 7 ಲಸಿಕಾ ಕೇಂದ್ರಗಳಲ್ಲಿ 364 ವೈದ್ಯರು, ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು.

    ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಎಲ್ಲ ಹಂತದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಲಸಿಕೆ ಪಡೆದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಿಮ್್ಸ ಆಸ್ಪತ್ರೆ, ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಧಾರವಾಡದ ಪುರೋಹಿತನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಸಿಕಾಕರಣ ಕಾರ್ಯ ಪರಿಶೀಲಿಸಿದರು. ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು.

    ಹಿಂಜರಿಕೆ ಬೇಡ

    ಧಾರವಾಡ ಪುರೋಹಿತನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಶಿಯನ್ ನವೀನಕುಮಾರ ಈಳಗೇರ ಕೋವಿಶೀಲ್ಡ್ ಲಸಿಕೆ ಪಡೆದ ಮೊದಲಿಗ. ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಡೋಸ್ ಪಡೆದ ನಂತರ ಅರ್ಧ ಗಂಟೆ ನಿಗಾದಲ್ಲಿದ್ದೆ. ಯಾವುದೇ ರಿಯಾಕ್ಷನ್ ಆಗಿಲ್ಲ. ಇಂಜೆಕ್ಷನ್ ಮಾಡಿಸಿಕೊಂಡಾಗ ಆಗುವಂತೆ ಸಣ್ಣ ನೋವು ಮಾತ್ರ ಕಂಡುಬಂತು. ಇದು ಸುರಕ್ಷಿತವಾಗಿದ್ದು, ಎಲ್ಲರೂ ಹಿಂಜರಿಕೆ ಇಲ್ಲದೆ ಲಸಿಕೆ ಪಡೆಯಬಹುದು ಎಂದರು.

    40 ನಿಮಿಷ ವಿಳಂಬ

    ತಾಲೂಕಿನ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾಕರಣ 40 ನಿಮಿಷ ವಿಳಂಬವಾಗಿ ಆರಂಭಗೊಂಡಿತು. ಕೋವಿನ್ ಸಾಫ್ಟ್​ವೇರ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿತು. ಸಾಫ್ಟ್​ವೇರ್ ಲಾಗಿನ್​ನಲ್ಲಿ ನೋಂದಾಯಿತ ಫಲಾನುಭವಿಯ ಡಾಟಾ ತೋರಿಸದ ಹಿನ್ನೆಲೆಯಲ್ಲಿ ಕೆಲಕಾಲ ಕಾಯಬೇಕಾಯಿತು. ತಾಂತ್ರಿಕ ತೊಂದರೆಯನ್ನು ಸರಿಪಡಿಸಿದ ನಂತರ ಕೇಂದ್ರದ ಫಾರ್ಮಸಿ ಅಧಿಕಾರಿ ರಾಚಯ್ಯ ಮಠ ಮೊದಲಿಗರಾಗಿ ಕೋವಿಶೀಲ್ಡ್ ಲಸಿಕೆ ಪಡೆದರು.

    ಜ. 18ರಿಂದ 18 ಕಡೆ ಲಸಿಕೆ

    ಜಿಲ್ಲೆಗೆ ಮೊದಲ ಹಂತವಾಗಿ 11,000 ಕೋವಿಶೀಲ್ಡ್ ಲಸಿಕೆ ಬಂದಿದೆ. ನೋಂದಾಯಿತ 10,653 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ. 18ರಿಂದ ಜಿಲ್ಲೆಯ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾಸ್ಪತ್ರೆಯಲ್ಲಿ 3, ಹುಬ್ಬಳ್ಳಿಯ ಕಿಮ್ಸ್​ನಲ್ಲಿ 10 ಮತ್ತು ಹುಬ್ಬಳ್ಳಿಯ ಇಎಸ್​ಐ ರೈಲ್ವೆ ಆಸ್ಪತ್ರೆ ಸೇರಿ 70 ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕಾಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದ್ದಾರೆ.

    ಕೋವಿಡ್ ವಿರುದ್ಧ ಸೆಣಸುವಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದೆ. ಇಂದು ಆರೋಗ್ಯ ಸಿಬ್ಬಂದಿಗೆ ಅತ್ಯಂತ ಸಂತೋಷದ ದಿನ. ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಿಂಜರಿಕೆ ಇಲ್ಲದೆ ಪಡೆಯಬಹುದು.
    – ರಾಚಯ್ಯ ಮಠ, ಫಾರ್ಮಸಿಸ್ಟ್, ಗರಗ ಪ್ರಾ. ಆರೋಗ್ಯ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts