ಲಖನೌ: ಉತ್ತರ ಪ್ರದೇಶ ಸರ್ಕಾರದ ಸಾರಿಗೆ ಸಚಿವ ದಯಾ ಶಂಕರ್ ಸಿಂಗ್ ತಮ್ಮ ಪತ್ನಿ ಮಾಜಿ ಸಚಿವೆ ಸ್ವಾತಿ ಸಿಂಗ್ಗೆ ಡಿವೋರ್ಸ್ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
90ರ ದಶಕದಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿದ್ದ ಸ್ವಾತಿ ಸಿಂಗ್ ಅಂದಿನ ರಾಜಕೀಯ ನಾಯಕರಾಗಿದ್ದ ದಯಾಶಂಕರ್ ಸಿಂಗ್ ಪರ ಪ್ರಚಾರ ಮಾಡಿದ್ದರು. ಕಾಲಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಗಿ ಈ ಇಬ್ಬರು ನಾಯಕರು 2001ರಲ್ಲಿ ವಿವಾಹವಾಗಿದ್ದರು.
ಇದನ್ನೂ ಓದಿ: ಪದವಿಯ ಆಧಾರದ ಮೇಲೆ ಜನತೆ ಪ್ರಧಾನಿಗೆ ಮತ ಹಾಕಿಲ್ಲ: ಅಜಿತ್ ಪವಾರ್
ಯುಪಿ ವಿಧಾನಪರಿಷತ್ ಚುನಾವಣೆ ಸಮಯದಲ್ಲಿ BSP ಅಧಿನಾಯಕಿ ಮಾಯಾವತಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿ BJPಯಿಂದ ಉಚ್ಚಾಟನೆಗೊಂಡಿದ್ದ ದಯಾಶಂಕರ್ ಸಿಂಗ್ ಬೆಂಬಲಕ್ಕೆ ಪತ್ನಿ ಸ್ವಾತಿ ಸಿಂಗ್ ನಿಂತಿದ್ದರು ಮತ್ತು ತಮ್ಮ ಪತಿಯ ವಿರುದ್ಧ ವ್ಯಕ್ತವಾದ ಟೀಕೆ ಟಿಪ್ಪಣಿಗಳಿಗೆ ಸಮರ್ಥವಾಗಿ ಪ್ರತಿಕ್ರಿಯಿಸುವ ಮೂಲಕ ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾಗಿದ್ದರು.
ಇದರ ಪರಿಣಾಮ 2017ರಲ್ಲಿ ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಸ್ವಾತಿ ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವೆ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಇದೀಗ ಈ ಇಬ್ಬರು ನಾಯಕರ ನಡುವೆ ರಾಜಕೀಯ ವಿಚಾರಕ್ಕೆ ಉಂಟಾದ ಮನಸ್ತಾಪದಿಂದ ಇವರ 22 ವರ್ಷಗಳ ದಾಂಪತ್ಯ ಜೀವನ ಇಬ್ಭಾಗವಾಗಿದೆ.