More

    ಮೀನುಗಾರರಿಗೆ ಆಸರೆಯಾಗದ ಶೆಡ್

    ಕಾರವಾರ: ಸಾಂಪ್ರದಾಯಿಕ ಮೀನುಗಾರರ ಸಾಮಗ್ರಿಗಳನ್ನು ಇಡಲು 2015ರಲ್ಲಿ ನಿರ್ಮಾಣ ಮಾಡಿದ ಶೆಡ್​ಗಳು ಪ್ರಯೋಜನಕ್ಕೆ ಬಾರದಂತಾಗಿವೆ.

    ನಗರದ ಲಂಡನ್ ಬ್ರಿಜ್ ಹಾಗೂ ದಿವೇಕರ ಕಾಲೇಜ್ ಸಮೀಪ ಕಬ್ಬಿಣದ ಸರಳು ಹಾಗೂ ತಗಡು ಬಳಸಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕಡೆ ಶೆಡ್ ನಿರ್ಮಾಣ ಮಾಡಲಾಗಿತ್ತು. ಲಂಡನ್ ಬ್ರಿಜ್ ಬಳಿ ಶೆಡ್​ನ ಮೇಲ್ಛಾವಣಿ ಅರ್ಧ ಹಾರಿ ಹೋಗಿವೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಯಾವಾಗ ತಲೆಯ ಮೇಲೆ ಹಾರಿ ಬೀಳುವುದೋ ಎಂಬ ಆತಂಕ ಎದುರಾಗಿದೆ.

    ಗುಡಿಸಲು ತೆರವು: ಈ ಹಿಂದೆ ಕಾರವಾರ ಲಂಡನ್ ಬ್ರಿಜ್​ನಿಂದ ಕೋಡಿ ಬಾಗವರೆಗೆ 4 ಕಿಮೀ ವ್ಯಾಪ್ತಿಯಲ್ಲಿ ರವೀಂದ್ರನಾಥ ಟ್ಯಾಗೋರ ಕಡಲತೀರ ಗುಂಟ ಮೀನುಗಾರರು ಸಾಂಪ್ರದಾಯಿಕ ಶೈಲಿಯಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಅದರಲ್ಲಿ ಮಳೆಗಾಲದಲ್ಲಿ ದೋಣಿ, ಬಲೆ ಇಡುತ್ತಿದ್ದರು. ಕಡಲಿಗೆ ಹೋಗಿ ಬಂದವರು ವಿಶ್ರಾಂತಿ ಪಡೆಯುತ್ತಿದ್ದರು. ಕೆಲ ಕಾರ್ವಿುಕರು ಇಲ್ಲೇ ವಾಸ್ತವ್ಯ ಹೂಡಿದ್ದರು. ಆದರೆ, ಈ ಗುಡಿಸಲುಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಕಾರಣ ನೀಡಿ ಆಗಿನ ಜಿಲ್ಲಾಧಿಕಾರಿ ಉಜ್ವಲಕುಮಾರ ಘೊಷ್ 2014ರ ನವೆಂಬರ್​ನಲ್ಲಿ ತೆರವು ಮಾಡಿಸಿದ್ದರು. ಸುಮಾರು 180 ಗುಡಿಸಲುಗಳನ್ನು ನೆಲಸಮ ಮಾಡಲಾಗಿತ್ತು. ಆಗ ಮೀನುಗಾರರಿಂದ ತೀವ್ರ ಪ್ರತಿರೋಧ ಎದುರಾಗಿತ್ತು. ಹೀಗಾಗಿ ಮೀನುಗಾರರಿಗೆ ದೋಣಿ ಬಲೆ ಇಡಲು ಸ್ಥಳಾವಕಾಶ ಕಲ್ಪಿಸುವ ಸಲುವಾಗಿ 2015 ರ ಏಪ್ರಿಲ್​ನಲ್ಲಿ ಪ್ರವಾಸೋದ್ಯಮ ಅನುದಾನ ಬಳಸಿ ಕೆಆರ್​ಡಿಸಿಎಲ್ ಶೆಡ್ ನಿರ್ಮಾಣ ಮಾಡಿತ್ತು.

    ಅವೈಜ್ಞಾನಿಕ ಶೆಡ್

    ಸಮುದ್ರಕ್ಕೆ ಅಭಿಮುಖವಾಗಿ ಶೆಡ್ ನಿರ್ಮಾಣ ಮಾಡಲಾಗಿದ್ದು, ಅದು ಮಳೆ ನೀರಿನಿಂದ ದೋಣಿ, ಬಲೆಗಳಿಗೆ ಅಥವಾ ಮೀನುಗಾರರಿಗೆ ರಕ್ಷಣೆ ನೀಡುವಂತಿಲ್ಲ. ಅಲ್ಲದೆ, 100 ಕ್ಕೂ ಅಧಿಕ ಮೀನುಗಾರರ ದೋಣಿಗಳು ಟ್ಯಾಗೋರ ಕಡಲ ತೀರದಲ್ಲಿದ್ದು, ಶೆಡ್​ನಲ್ಲಿ 20 ದೋಣಿ ಇಡಲೂ ಅವಕಾಶವಿರಲಿಲ್ಲ ಎಂಬುದು ಮೀನುಗಾರರ ಅಸಮಾಧಾನವಾಗಿತ್ತು.

    ಶೆಡ್ ಮೀನುಗಾರರ ಪ್ರಯೋಜನಕ್ಕೆ ಬರುವಂತಿಲ್ಲ. ಸಂಪೂರ್ಣ ತುಕ್ಕು ಹಿಡಿದಿದ್ದು, ಈ ಮಳೆಗಾಲದಲ್ಲಿ ತಲೆಯ ಮೇಲೆ ಹಾರಿ ಬೀಳುವ ಆತಂಕವಿದೆ.

    | ಸೀತಾರಾಮ ಉಳ್ವೇಕರ ಮೀನುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts