More

    ಅವೈಜ್ಞಾನಿಕ ಆದೇಶ ಡೇಟಾ ಎಂಟ್ರಿ ಸಿಬ್ಬಂದಿ ಅತಂತ್ರ: 5980 ಹುದ್ದೆ ನೇಮಕ ಗೋಜಲು, ಈಗಿರುವವರಿಗೆ ಕಾಯಂ ಭಾಗ್ಯ ಇಲ್ಲ

    | ವಿಲಾಸ ಮೇಲಗಿರಿ ಬೆಂಗಳೂರು

    ಅಧಿಕಾರ ವಿಕೇಂದ್ರೀಕರಣದ ಮೊದಲ ಮೆಟ್ಟಿಲಾದ ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಸೇವೆ ಒದಗಿಸಲು ಸರ್ಕಾರ ಪ್ರತಿ ಗ್ರಾ.ಪಂ.ಗೆ ಒಬ್ಬರಂತೆ ಹೊಸದಾಗಿ 5980 ಡೇಟಾ ಎಂಟ್ರಿ ಆಪರೇಟರ್ ನೇರ ನೇಮಕಕ್ಕೆ ಆದೇಶಿಸಿದೆ. ಆದರೆ ಆದೇಶ ಹೊರಡಿಸಿ ಎರಡು ತಿಂಗಳು ಕಳೆದರೂ ತುಮಕೂರು, ಚಿಕ್ಕಮಗಳೂರು ಸೇರಿ ಒಂದೆರಡು ಜಿಲ್ಲೆಯಲ್ಲಿ ಮಾತ್ರ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ನೇಮಕಾತಿ ಸಮಿತಿ ರಚನೆಯಾಗಿವೆ.

    ಈಗಾಗಲೇ 700-800 ಗ್ರಾ.ಪಂ.ಗಳಲ್ಲಿ ಡೇಟಾ ಎಂಟ್ರಿ ಆಪರೇಟರ್​ಗಳು ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತ ಬಂದಿದ್ದು, ಅವರ ಕಾಯಂ ಬಗ್ಗೆಯಾಗಲಿ, ಹೊಸ ನೇಮಕ ಸಂದರ್ಭದಲ್ಲಿ ಆದ್ಯತೆ ನೀಡುವ ಬಗ್ಗೆಯಾಗಲಿ ಯಾವುದೇ ಸ್ಪಷ್ಟತೆ ಆದೇಶದಲ್ಲಿ ಇಲ್ಲ. ಹೀಗಾಗಿ 2007 ರಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಡೇಟಾ ಎಂಟ್ರಿ ಆಪರೇಟರುಗಳು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ.

    ವೇತನ ನಿಗದಿ ಮಾಡದೇ ನೇಮಕ!: ಯಾವುದೇ ನೇಮಕ ಮಾಡುವ ಮುನ್ನ ನೌಕರರಿಗೆ ವೇತನ ನಿಗದಿ ಮಾಡಲಾಗುತ್ತದೆ. ಸಂಪನ್ಮೂಲವನ್ನು ಸ್ಪಷ್ಟಪಡಿಸಲಾಗುತ್ತದೆ. ಬಜೆಟ್ ಬೆಂಬಲ ಖಚಿತಪಡಿಸಲಾಗುತ್ತದೆ. ಆದರೆ ಈ ನೇಮಕ ಸಂದರ್ಭದಲ್ಲಿ ವೇತನ ನಿಗದಿಪಡಿಸಿಲ್ಲ ಕನಿಷ್ಠ ವೇತನವನ್ನೂ ಉಲ್ಲೇಖಿಸಿಲ್ಲ. ಬದಲಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನ ಪಾವತಿಸುವಂತೆ ಸೂಚಿಸಲಾಗಿದೆ! ಪಂಚತಂತ್ರ 2.0 ತಂತ್ರಾಂಶದ ಬಲದೊಂದಿಗೆ ಈಗ ಗ್ರಾಪಂ ಬಾಪೂಜಿ ಸೇವಾ ಕೇಂದ್ರದಲ್ಲಿ ಆದಾಯ ಪ್ರಮಾಣ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಸೇರಿ 44 ಸೇವೆಗಳನ್ನು ನೀಡಲಾಗುತ್ತದೆ. ಈ ಸೇವೆಯಡಿ ಪ್ರತಿ ಅರ್ಜಿಗೆ 40 ರೂ.ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕದಲ್ಲಿ 30 ರೂ.ಗಳನ್ನು ಕಂದಾಯ ಇಲಾಖೆಗೆ ಸಂದಾಯ ಮಾಡಬೇಕಾಗುತ್ತದೆ. ಉಳಿಯುವ 10 ರೂ. ಗ್ರಾ.ಪಂ.ಗೆ ಸೇರುತ್ತದೆ. ಒಂದು ದಿನಕ್ಕೆ (ಬೆಂಗಳೂರು ಮತ್ತಿತರ ಮಹಾನಗರಗಳ ಸುತ್ತಮುತ್ತಲಿನ ಗ್ರಾಪಂ ಹೊರತುಪಡಿಸಿ) ಅಬ್ಬಬ್ಬಾ ಎಂದರೂ ದಿನಕ್ಕೆ ಸರಾಸರಿ 20 ರಿಂದ 30 ಅರ್ಜಿ ಬರುವುದಿಲ್ಲ. ಈ ಅರ್ಜಿ ಶುಲ್ಕದಲ್ಲಿ ಗ್ರಾ.ಪಂ. ಪಾಲು 200 ರಿಂದ 300 ರೂ.ಲಭಿಸುತ್ತದೆ. ಇದರಲ್ಲಿ ಇಂಟರ್ ನೆಟ್ ಬಿಲ್, ಕಂಪ್ಯೂಟರ್ ಕಾರ್ಟ್​ರಿಡ್ಜ್ , ಸ್ಟೇಷನರಿ ವೆಚ್ಚ ಕಳೆದರೆ ಉಳಿಯುವುದು ಅತ್ಯಲ್ಪ ಹಣ. ಇದರಲ್ಲಿ ಡೇಟಾ ಎಂಟ್ರಿ ಆಪರೇಟರ್​ಗೆ ಸಂಬಳ ಕೊಡಲು ಹೇಗೆ ಸಾಧ್ಯ ? ಎಂಬ ಪ್ರಶ್ನೆ ತಲೆ ಎತ್ತಿದೆ.

    ಸಂಘದ ಬೇಡಿಕೆಗಳೇನು?

    * 2007ರಿಂದ 2023ರ ನಡುವೆ ನೇಮಕಗೊಂಡು ಗ್ರಾ.ಪಂ.ಗಳಲ್ಲಿ ಸೇವೆ ಸಲ್ಲಿಸುವ ಎಲ್ಲ ಡೇಟಾ ಎಂಟ್ರಿ ಅಪರೇಟರ್​ಗಳ ಸೇವೆಯನ್ನು ಕಾಯಂಗೊಳಿಸಬೇಕು.

    * ಹೊಸ ನೇಮಕಕ್ಕೆ ವೇತನ ನಿಗದಿಪಡಿಸಬೇಕು.

    * ಸರ್ಕಾರದಿಂದಲೇ ಶಾಸನಬದ್ಧ ವೇತನ ನೀಡಬೇಕು.

    ಗ್ರಾ.ಪಂ.ಗಳಲ್ಲಿ ಕೆಲವು ಕಡೆ ಹಿಂದಿನಿಂದಲೇ ಡೇಟಾ ಎಂಟ್ರಿ ಅಪರೇಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪೈಕಿ ಅನುಮೋದನೆ ಆಗದೇ ಆರೇಳು ನೂರು ಜನ ಕರ್ತವ್ಯ ನಿರ್ವಹಿಸುತ್ತಿರುವ ಮಾಹಿತಿ ಇದೆ. ಅವರ ಸೇವೆಯನ್ನು ಅನುಮೋದನೆ ಮಾಡಬೇಕು ಎಂಬ ಬೇಡಿಕೆ ಈಗ ನಮ್ಮ ಮುಂದಿದೆ. ಈ ಕುರಿತು ಚರ್ಚೆ ನಡೆಯುತ್ತಿದೆ.

    | ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ

    ಗ್ರಾ.ಪಂ. ನೌಕರರಿಗೆ ಸೇವಾ ಹಿರಿತನ ವೇತನ, ವೇತನ ನಿಗದಿ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್ ಕಾಯಂಗೊಳಿಸುವ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರ ಗಮನ ಸೆಳೆಯಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜನವರಿ ಅಂತ್ಯದವರೆಗೆ ಕಾದು ನೋಡುತ್ತೇವೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇದ್ದರೆ ಎಲ್ಲ ನೌಕರರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ.

    | ಭೀಮರೆಡ್ಡಿ ಪಾಟೀಲ್, ರಾಜ್ಯಧ್ಯಕ್ಷ, ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್ ನೌಕರರ ಸಂಘ

    ಹಳಬರಿಗೆ ಉರುಳು
    ಗ್ರಾ.ಪಂ.ಗಳು ಕಾರ್ಯ ಬಾಹುಳ್ಯದ ಕಾರಣ 2007ರಿಂದ ಈಚೆಗೆ ತಮ್ಮ ಸ್ವಂತ ಸಂಪನ್ಮೂಲದಲ್ಲಿ 700-800 ಡೇಟಾ ಎಂಟ್ರಿ ಅಪರೇಟರ್​ಗಳನ್ನು ನೇಮಕ ಮಾಡಿಕೊಂಡಿವೆ. ತೀರಾ ಕಡಿಮೆ ಸಂಬಳಕ್ಕೆ ಈ ನೌಕರರು ಹತ್ತಾರು ವರ್ಷದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಇತ್ತೀಚಿಗಷ್ಟೇ ಈ ಆಪರೇಟರುಗಳಿಗೆ ಕನಿಷ್ಠ ವೇತನ ಸೌಲಭ್ಯ ಕಲ್ಪಿಸಿ, ನಿಧಿ 1ರ ಅಡಿ ಸರ್ಕಾರ ಶಾಸನಬದ್ಧ ವೇತನ ನೀಡುತ್ತಿದೆ. ಇನ್ನೇನು ತುಸು ನೆಮ್ಮದಿ ಸಿಕ್ಕಿತೆನ್ನುವಾಗಲೇ ಹೊಸ ನೇಮಕಾತಿ ಹಳಬರಿಗೆ ಉರುಳಾಗಿದೆ.

    ವೈಜ್ಞಾನಿಕವಾಗಿ ಲೆಕ್ಕ ಹಾಕದೇ ಆದೇಶ
    ಈಗಾಗಲೇ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಸಿಎಸ್​ಸಿ ಸೆಂಟರ್, ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಜನಸೇವೆ ನೀಡುತ್ತಿವೆ. ಬಾಪೂಜಿ ಸೇವಾ ಕೇಂದ್ರ ಗಳಿಗೆ ಎಷ್ಟು ಅರ್ಜಿ ಬರ ಬಹುದು? ಎಷ್ಟು ಶುಲ್ಕ ಸಂಗ್ರಹ ವಾಗಬಹುದು ಎಂಬುದನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕದೆ ಆದೇಶ ಹೊರ ಡಿಸಲಾಗಿದೆ ಎಂಬ ಆಕ್ಷೇಪ ಕೇಳಿ ಬರುತ್ತಿವೆ.

    ಸಮಸ್ಯೆಗಳೇನು?
    ಗ್ರಾಪಂಗಳಲ್ಲಿ ವಿದ್ಯುತ್, ಇಂಟರ್​ನೆಟ್, ಸರ್ವರ್ ಸಮಸ್ಯೆಗಳು ಎಡಬಿಡದೇ ಕಾಡು ತ್ತಿವೆ. ಈ ನಡುವೆ ಬಾಪೂಜಿ ಕೇಂದ್ರಗಳಲ್ಲಿ ಸೇವಾ ಸಂಖ್ಯೆ ಹೆಚ್ಚಿಸಿದರೆ ನಿರ್ವಹಣೆ ಹೇಗೆ? ಪ್ರತಿ ದಿನ ಗ್ರಾಹಕರ ಜತೆ ಜಗಳ ಕಾಯುವುದೇ ಕೆಲಸವಾಗುತ್ತದೆ ಎಂದು ಡೇಟಾ ಎಂಟ್ರಿ ಅಪರೇಟರ್ ಒಬ್ಬರು ಅಲವತ್ತುಕೊಳ್ಳುತ್ತಾರೆ.

    ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರುವ ನಾಯಿಯನ್ನು ಪತ್ತೆಹಚ್ಚಿದ್ರೆ ನಿಮಗೆ ನೀವೇ ಸಾಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts