More

    ಕಠಿಣ ಪರಿಶ್ರಮದಿಂದ ಯಶಸ್ಸು

    ಉಳ್ಳಾಲ: ಜೀವನದಲ್ಲಿ ಪ್ರತಿದಿನವೂ ಪರೀಕ್ಷೆ ಇರುತ್ತದೆ, ಆದರೆ ಸಿಲೆಬಸ್ ಇರುವುದಿಲ್ಲ. ಪ್ರತಿದಿನ ಕಲಿಸಲು ಶಿಕ್ಷಕರೂ ಇರುವುದಿಲ್ಲ. ಪೈಪೋಟಿಯ ಜಗತ್ತಿನಲ್ಲಿ ದಿನನಿತ್ಯ ಸವಾಲುಗಳು ಎದುರಾಗುತ್ತದೆ, ಅದನ್ನು ನಾವೇ ಪರಿಹರಿಸಲು ಪ್ರಯತ್ನಿಸಬೇಕು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಮಂಗಳೂರು ವಿಶ್ವವಿದ್ಯಾಲಯ 39ನೇ ಘಟಿಕೋತ್ಸವ ಪ್ರಯುಕ್ತ ಶನಿವಾರ ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿಶಾಲ ಜಗತ್ತಿನಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಪರಿಶ್ರಮವೇ ಪರಮ ಪಾಠ. ನಿರಂತರ ಪರಿಶ್ರಮ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಹೆಚ್ಚು ಜ್ಞಾನ ಪಡೆದಂತೆ ಪರಿಣತರಾಗಬಹುದು. ಇತರರಿಗೆ ಸಹಾಯ, ಸಹಕಾರ, ಪ್ರೀತಿ ತೋರ್ಪಡಿಸುವ ಗುಣವೂ ಮುಖ್ಯ ಎಂದರು. ಮಂಗಳೂರು ವಿವಿ ಘಟಿಕೋತ್ಸವಕ್ಕೆ ಬರಬೇಕೆಂಬ ಆಸೆ ಇತ್ತು, ಆದರೆ ಕರೊನಾ ಅಡ್ಡಿಯಾಯಿತು. ಹಲವು ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ ವಿಚಾರ ಹೊಂದಿರುವ ಕರಾವಳಿ ಭಾಗದ ಜನ ಬಹಳ ಪರಿಶ್ರಮಿಗಳು ಎಂದರು.

    ಸೀಮಿತ ಸಂಖ್ಯೆಯ ಉಪಸ್ಥಿತಿ: ಘಟಿಕೋತ್ಸವ ಶನಿವಾರ ಕೋವಿಡ್ ನಿಯಮದಂತೆ ಸರಳವಾಗಿ, ಸೀಮಿತ ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ನೆರವೇರಿತು. 117 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ, 10 ಮಂದಿ ಚಿನ್ನದ ಪದಕ ಮತ್ತು ವಿವಿಧ ಕೋರ್ಸ್‌ಗಳಲ್ಲಿ 188 ರ‌್ಯಾಂಕ್ ಪಡೆದಿದ್ದು ಪ್ರಥಮ ರ‌್ಯಾಂಕ್ ಪಡೆದ 69 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕುಲಾಧಿಪತಿಯಾಗಿರುವ ರಾಜ್ಯಪಾಲರು, ಕುಲಪತಿಯಾಗಿರುವ ಶಿಕ್ಷಣ ಸಚಿವರು ಗೈರಾಗಿದ್ದರು. ಹಿಂದಿನ ಘಟಿಕೋತ್ಸವಗಳ ವೈಭವ ವೂ ಇರಲಿಲ್ಲ. ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಘಟಿಕೋತ್ಸವ ನಡೆಸಿಕೊಟ್ಟರು. ಪ್ರಭಾರ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು.

    ಇತಿಹಾಸದಲ್ಲಿ ಎರಡು ಸ್ವರ್ಣ ಪದಕ: ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸುಕನ್ಯಾ ಇತಿಹಾಸ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ನಾಲ್ಕು ನಗದು ಬಹುಮಾನ ಪಡೆದುಕೊಂಡಿದ್ದಾರೆ. ಈಕೆ ರಾಜೀವ್ ಪೂಜಾರಿ-ಮಾಲತಿ ದಂಪತಿ ಪುತ್ರಿ. ಎಂ.ಎಸ್.ಡಬ್ಲುೃ ಪೂರೈಸಿರುವ ಇವರಿಗೆ ಇತಿಹಾಸ ಪ್ರಾಧ್ಯಾಪಿಕೆಯಾಗುವ ಬಯಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts