More

    ಉಳವಿ ಮಹಾ ರಥೋತ್ಸವ ಸಂಪನ್ನ

    ಜೊಯಿಡಾ:ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ಉಳವಿಯ ಚನ್ನಬಸವೇಶ್ವರ ಮಹಾ ರಥೋತ್ಸವವು ಶುಕ್ರವಾರ ಲಕ್ಷಾಂತರ ಭಕ್ತರ ಶ್ರದ್ಧೆ, ಭಕ್ತಿಯ ಪರಾಕಾಷ್ಠೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.
    ಉಳವಿ ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಧ್ಯಕ್ಷ ಗಂಗಾಧರ ಕಿತ್ತೂರ ಅವರು ಸಾಯಂಕಾಲ 4 ಗಂಟೆಯ ಸುಮಾರಿಗೆ ಮಹಾರಥಕ್ಕೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಬೃಹತ್ ರಥವನ್ನು ಬೀದಿಯಿಂದ ವೀರಭದ್ರ ದೇವಸ್ಥಾನದವರೆಗೆ ಎಳೆದು, ವಾಪಸ್ ಚನ್ನಬಸವೇಶ್ವರ ದೇವಸ್ಥಾನದ ಮಹಾದ್ವಾರದವರೆಗೆ ಎಳೆದು ಪುನೀತರಾದರು.ಬಾಳೆಹಣ್ಣು,ಉತ್ತತ್ತಿ, ಮುಸಂಬಿಗಳನ್ನು ರಥಕ್ಕೆ ಎಸೆದು, ತಮ್ಮ ಇಷ್ಟಾರ್ಥಸಿದ್ದಿಗೆ ಚನಬಸವೇಶ್ವರನಲ್ಲಿ ಬೇಡಿಕೊಂಡರು. `ಚೆನ್ನಬಸವೇಶ್ವರ ಮಹಾರಾಜ ಕೀ ಜೈ’ ಜಯಘೋಷ ಎಲ್ಲೆಡೆ ಮೊಳಗಿತು.
    ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರ, ಪ್ರಕಾಶ ಕಿತ್ತೂರ, ಬಿ.ಸಿ ಉಮಾಪತಿ, ಅಶ್ವಿತ ಕೊತಂಬ್ರಿ,ವಿರೇಶ ಕಂಬಳಿ,ಉಳವಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮೋಖಾಶಿ, ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ, ಆಡಳಿತ ಮಂಡಳಿಯವರು ರಥ ಪೂಜೆಯ ವೇಳೆ ಹಾಜರಿದ್ದು, ಸಮರ್ಪಕವಾಗಿ ವಿಧಿಗಳು ನಡೆಯುವಂತೆ ನೋಡಿಕೊಂಡರು. ಎಲ್ಲ ಭಕ್ತರಿಗೆ ನಿತ್ಯ ದಾಸೋಹ ನಡೆಯಿತು.
    ಎಲ್ಲೆಡೆಯ ಭಕ್ತರು:
    ಫೆ.16 ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿದ್ದು, ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವಗಳು ನಿಗದಿಯಂತೆ ನಡೆದವು. 25 ರಂದು ಬಯಲು ಕುಸ್ತಿಗಳು ನಡೆಯಲಿವೆ. ಫೆ. 26 ರಂದು ಓಕುಳಿ ಸಣ್ಣ ರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
    ಬೆಳಗಾವಿ, ಬಾಗಲಕೋಟ, ಧಾರವಾಡ, ಹಾವೇರಿ ಹೀಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಚಕ್ಕಡಿ ಗಾಡಿಗಳಲ್ಲಿ ನೂರಾರು ಕಿಮೀ ದೂರದಿಂದ ಈ ಜಾತ್ರೆಗೆ ವರ್ಷವೂ ಬರುತ್ತಾರೆ. ತಮ್ಮ ಬಸವ(ಎತ್ತುಗಳಿಗೆ) ರೋಗ ಬಾರದೇ ಕೃಷಿ ಕಾರ್ಯಗಳು ಸಾಂಗವಾಗಿ ನೆರವೇರಲಿ ಎಂದು ಚನ್ನ ಬಸವೇಶ್ವರನ ಜಾತ್ರೆಯಲ್ಲಿ ಹರಕೆ ಹೊತ್ತುಕೊಳ್ಳುವುದು ವಾಡಿಕೆ.`ಅಡಕೇಶ್ವರ, ಮಡಕೇಶ್ವರ, ಉಳವಿ ಶ್ರೀ ಚನ್ನ ಬಸವೇಶ್ವರ’ ಎಂದು ಜಪಿಸುತ್ತ ಈ ವರ್ಷವೂ 1300 ಕ್ಕೂ ಅಽಕ ಎತ್ತಿನ ಗಾಡಿಗಳು ನಾಲ್ಕು ದಿನಗಳ ಮುಂಚೆಯೇ ಬಂದು ಉಳವಿಯ ಬಯಲಿನಲ್ಲಿ ಬೀಡು ಬಿಟ್ಟಿದ್ದವು.ಭಕ್ತರು ಟೆಂಟ್ ಹಾಕಿಕೊಂಡು ಸ್ವತಃ ಅಡುಗೆ ಮಾಡಿ, ಊಟ ಮಾಡಿ ಜಾತ್ರೆಗೆ ಸಜ್ಜಾಗಿದ್ದರು.
    ಪೊಲೀಸ್ ಬಂದೋಬಸ್ತ್: ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಎಂ. ನೇತೃತ್ವದಲ್ಲಿ 7 ಸಿಪಿಐ, 29 ಪಿಎಸ್‌ಐಗಳ ನೇತೃತ್ವದಲ್ಲಿ 300 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಜಾತ್ರೆಗಾಗಿ ನಿಯೋಜಿಸಲಾಗಿತ್ತು. ಜೊಯಿಡಾ ಸಿಪಿಐ ಚಂದ್ರಶೇಕರ ಹರಿಹರ ,ಕಾರವಾರ ಸಿಪಿಐ ರಮೇಶ ಹೂಗಾರ ಮತ್ತು ಜೊಯಿಡಾ ಪಿಎಸ್‌ಐ ಮಹೇಶ ಮಾಳಿ ಮುಂತಾದವರು ಸುಗಮ ಸಂಚಾರ ನಡೆಸಲು ಮುತುವರ್ಜಿ ವಹಿಸಿದ್ದರು.
    ಇಲಾಖೆಯಿಂದಲೇ ಬೆತ್ತ ಮಾರಾಟ
    ಬಳೆಗಳು, ವಿಭೂತಿ ಗಟ್ಟಿಗಳ ಮಾರಾಟ ಉಳವಿ ಜಾತ್ರೆಯ ವಿಶೇಷ. ಈ ಬಾರಿಯೂ ಫಲ ಪುಷ್ಪ,ತೆಂಗಿನಕಾಯಿ, ಕುಂಕುಮ, ವಿವಿದ ಬಗೆಯ ರಂಗು ರಂಗಿನ ದೇವರ ಚಿತ್ರಗಳಿರುವ ಹಾರಗಳು, ಮಕ್ಕಳ ಆಟಿಕೆಯ ಸಾಮಗ್ರಿಗಳ ಅಂಗಡಿಗಳು ಜಾತ್ರೆಯ ರಂಗು ಹೆಚ್ಚಿಸಿದ್ದವು. ಸುತ್ತಲಿನ ಕಾಡಿನಲ್ಲಿ ಭಕ್ತರು ಸ್ವತಃ ತೆರಳಿ ಮರಮಟ್ಟುಗಳನ್ನು ಕಡಿಯುವುದನ್ನು ತಪ್ಪಿಸಲು ಅರಣ್ಯ ಇಲಾಖೆಯಿಂದಲೇ ಬೆತ್ತದ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
    ಇದನ್ನೂ ಓದಿ: ಸಿದ್ದಿ ಹೋಂಸ್ಟೇಗೆ ವಿವಾದದ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts