More

    ಭಕ್ತರ ಅಭೀಷ್ಟೆಗಳನ್ನು ಈಡೇರಿಸುವ ಮಾಯಮ್ಮ ದೇವಿ

    ಉಜ್ಜಿನಿ: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಉಜ್ಜನಿ ಸಮೀಪ ಇರುವ ಗಾಣಗಟ್ಟೆ ಗ್ರಾಮದ ಮಾಯಮ್ಮ ದೇವಿ ಹಣದ ದೇವತೆಯಾಗಿ ಹೊರಹೊಮ್ಮಿದ್ದಾಳೆ.

    ಈ ತಾಯಿಗೆ ನೋಟುಗಳಿಂದ ಅಲಂಕಾರ ಮಾಡುವುದು ವಿಶೇಷ. 10 ರೂಪಾಯಿಯಿಂದ ಹಿಡಿದು 2,000 ರೂಪಾಯಿ ವರೆಗೆ ವಿವಿಧ ಕರೆನ್ಸಿಗಳಿಂದ ಹಾರ ಮಾಡಿ ದೇವಿಗೆ ತೊಡಿಸಲಾಗುತ್ತದೆ. ದೇಗುಲದ ಗರ್ಭಗುಡಿಯನ್ನೂ ನೋಟಿನಿಂದಲೇ ಶೃಂಗಾರ ಮಾಡಲಾಗುತ್ತದೆ. ಭಕ್ತರು ಹಣವನ್ನು ಅರ್ಪಿಸಿದರೆ ಒಲಿಯುತ್ತಾಳೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನ ದೇವಿಯ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ನಿತ್ಯ ಸಂಜೆ 6.30ಕ್ಕೆ ದೇವಿಯನ್ನು ಗದ್ದುಗೆಯಿಂದ ಎಬ್ಬಿಸಿ ಊರು ಸುತ್ತಿಸಿ ರಾತ್ರಿ 8 ಗಂಟೆಗೆ ಪುನಃ ದೇವಸ್ಥಾನಕ್ಕೆ ಕರೆತರುವ ಸಂಪ್ರದಾಯವಿದೆ.

    ಚೀಟಿ ಬರೆದಿಡುವ ಸಂಪ್ರದಾಯ: ಭಕ್ತರು ತಮ್ಮ ಬೇಡಿಕೆಯನ್ನು ಒಂದು ಚೀಟಿಯಲ್ಲಿ ಬರೆದು ದೇವಸ್ಥಾನದ ಮೂಲೆಯಲ್ಲಿ ಮಣ್ಣಿನ ಕೆಳಗೆ ಮುಚ್ಚಿಡುತ್ತಾರೆ. ದೇವಿ ಮೂರ್ತಿ ಹೊತ್ತ ಅರ್ಚಕರು ಚೀಟಿ ಇರುವ ಸ್ಥಳವನ್ನು ಪತ್ತೆಹಚ್ಚಿ ತೆಗೆದುಕೊಡುತ್ತಾರೆ. ಅದರ ಆಧಾರದ ಮೇಲೆ ಭಕ್ತರ ಬೇಡಿಕೆ ಈಡೇರುವ ಸಾಧ್ಯಾಸಾಧ್ಯತೆ ನಿರ್ಧಾರವಾಗುತ್ತದೆ. ದೇವಿಗೆ ಚಿನ್ನದ ಬಳೆ, ಸೀರೆ, ಗಾಜಿನ ಬಳೆ ಇಡುವ ಸಂಪ್ರದಾಯವಿದೆ. ಈ ದೇವಾಲಯದಲ್ಲಿ ಒಂದು ರಾತ್ರಿ ಕಳೆದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿದೆ. ಭಕ್ತರು ಉಳಿದುಕೊಳ್ಳಲು 15 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.

    ಇಂದು ರಥೋತ್ಸವ: ಶ್ರೀ ಮಾಯಮ್ಮ ದೇವಿಯ ರಥೋತ್ಸವ ಮಾ.8 ರಂದು ಸಂಜೆ ನಡೆಯಲಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳು ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ.

    ಮಗುವಿಗೆ ಹಣದ ತುಲಾಭಾರ: ಸಂತಾನ ಭಾಗ್ಯ, ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಭಕ್ತರು ಹರಕೆ ಹೊರುತ್ತಾರೆ. ಮಕ್ಕಳಾಗದವರೂ ತಾಯಿಯ ಮೊರೆ ಹೋಗುತ್ತಾರೆ. ಮಕ್ಕಳಾದ ನಂತರ ಮಗುವಿನ ತೂಕದಷ್ಟೇ ಹಣವನ್ನು ದೇವರಿಗೆ ಅರ್ಪಿಸುತ್ತಾರೆ. ಹಣವನ್ನು ಅರ್ಪಿಸುವ ಮೊದಲು ಮಗುವಿನ ತುಲಾಭಾರ ಮಾಡಿ, ಆ ಹಣವನ್ನು ದೇವಿಗೆ ಅರ್ಪಿಸುತ್ತಾರೆ. ಈ ತಾಯಿ ಕೊಲ್ಲಾಪುರದ ಲಕ್ಷ್ಮೀ ಸ್ವರೂಪ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದ್ದು, ಇದೇ ನಂಬಿಕೆಯ ಹಣದ ತುಲಾಭಾರದ ಮೂಲ ಸ್ಥಾಯಿ ಎನ್ನಲಾಗಿದೆ.

    ಬಾಲಕಿ ಮೈಮೇಲೆ ಬಂದ ದೇವಿ: ನೂರಾರು ವರ್ಷಗಳ ಹಿಂದೆ ಕೊಲ್ಲಾಪುರದಿಂದ ಚಿನ್ನವನ್ನು ಕೋಣದ ಮೇಲೆ ಹೇರಿಕೊಂಡು ವ್ಯಾಪಾರಿಗಳು ಬರುತ್ತಿರುವಾಗ ಒಬ್ಬ ವ್ಯಾಪಾರಿ ಚಿನ್ನದ ಜತೆ ತೂಕದ ಕಲ್ಲನ್ನೂ ತೆಗೆದುಕೊಂಡು ಬರುತ್ತಿದ್ದ. ಯಾವುದೊ ಕಾರಣಕ್ಕೆ ಕಲ್ಲನ್ನು ಅಲ್ಲಿಯೆ ಬಿಟ್ಟು ಹೋಗಿದ್ದ. ಮುಂದೆ ಅದೆ ಕಲ್ಲು ಮಾಯಮ್ಮ ದೇವಿಯಾದಳು ಎಂದು ಇಲ್ಲಿನ ಸ್ಥಳೀಯ ಪುರಾಣ ಹೇಳುತ್ತದೆ. ನಂತರ ದೇವಿ ಬಾಲಕಿಯೊಬ್ಬಳ ಮೈಮೇಲೆ ಬಂದು ತನಗೊಂದು ದೇವಾಲಯವನ್ನು ನಿರ್ಮಿಸಿ ಎಂದು ಹೇಳಿದ್ದಳು. ಹೀಗಾಗಿ ಊರಿನ ಜನರು ಮಾಯಮ್ಮ ದೇವಿಗೆ ದೇವಸ್ಥಾನ ನಿರ್ಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts