More

    ಬಾಗಿಲು ತೆರೆದ ದೇವಳ, ಭಕ್ತರು ವಿರಳ

    ಮಂಗಳೂರು/ಉಡುಪಿ: ಅನ್‌ಲಾಕ್ 1.0 ಹಿನ್ನೆಲೆಯಲ್ಲಿ ದ.ಕ.ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ದೇವಸ್ಥಾನಗಳು ಸೋಮವಾರ ದೇವರ ದರ್ಶನ ಪಡೆಯಲು ಭಕ್ತರಿಗಾಗಿ ಬಾಗಿಲು ತೆರೆದುಕೊಂಡವು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದ್ದರೂ, ದೇವಳಗಳಲ್ಲಿ ದೇವರ ದರ್ಶನ ಪಡೆದ ಭಕ್ತರ ಸಂಖ್ಯೆ ಕಡಿಮೆಯಿತ್ತು.

    ದ.ಕ.ಜಿಲ್ಲೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ಸಾಕಷ್ಟು ಭಕ್ತರು ಕಂಡುಬಂದರು. ಮೊದಲ ದಿನ ದೇವಸ್ಥಾನವನ್ನು ಭಕ್ತರಿಗಾಗಿ ಮುಕ್ತಗೊಳಿಸುವ ಸಂದರ್ಭದಲ್ಲಿ ಕದ್ರಿ ಶ್ರೀ ಮಂಜುನಾಥೇಶ್ವರ ದೇವಳದಲ್ಲಿ ಧಾರ್ಮಿಕ ಮತ್ತು ದತ್ತಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಜರಿದ್ದರು. ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮುಂದಿನ ಸೂಚನೆ ಬಳಿಕವಷ್ಟೇ ತೆರೆಯಲಿದೆ. ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸಹಿತ ಬಹುತೇಕ ದೇವಸ್ಥಾನಗಳೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿವೆ.

    ಉಡುಪಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿಯೂ ಸೋಮವಾರ ಭಕ್ತರು ದೇವರ ದರ್ಶನ ಪಡೆದರು. ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಕಡಿಯಾಳಿ ಮಹಿಷ ಮರ್ದಿನಿ, ಕೃಷ್ಣ ಮಠದ ಅನಂತೇಶ್ವರ, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ, ಕೊಡವೂರು ಶಂಕರನಾರಾಯಣ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. ಎಲ್ಲ ದೇವಸ್ಥಾನದ ಆವರಣದಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಗನ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧಾರಣೆ ಕಡ್ಡಾಯವಾಗಿತ್ತು. ತೀರ್ಥದ ವ್ಯವಸ್ಥೆ ಇರಲಿಲ್ಲ. ಎಲ್ಲ ದೇವಳಗಳಲ್ಲಿ ಅರ್ಚಕರಿಂದ ಎಂದಿನಂತೆ ಪೂಜಾವಿಧಿ ನೆರವೇರಿದವು. ಬೆಳಗ್ಗೆ ಬೇಗನೆ ಕೆಲ ಭಕ್ತರು ದೇವರ ದರ್ಶನ ಮಾಡಿ ತೆರಳಿದರು. ಸೇವೆಗಳೂ ಇರಲಿಲ್ಲ.

    ಕೊಲ್ಲೂರಿನಲ್ಲಿ ವೈರಸ್ ಮುಕ್ತಿಗಾಗಿ ಚಂಡಿಕಾ ಹವನ: ಎಪ್ಪತ್ತೇಳು ದಿನಗಳಿಂದ ಮುಚ್ಚಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಾಗಿಲು ಸೋಮವಾರ ತೆರೆದಿದ್ದರೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಕರೊನಾ ವೈರಸ್ ನಿವಾರಣೆ ಮಾಡುವಂತೆ ಪ್ರಾರ್ಥಿಸಿ ದೇವಿ ಸನ್ನಿಧಿಯಲ್ಲಿ ದೇವಸ್ಥಾನ ಸಿಬ್ಬಂದಿ ಸೋಮವಾರ ಚಂಡಿಕಾ ಹೋಮ ನೆರವೇರಿಸಿದರು. ನಂತರ ಆದಿಗುರು ಶ್ರೀ ಶಂಕರಾಚಾರ್ಯ ಪೀಠದ ಬಳಿ ಔಷಧೀಯ ಸಸ್ಯಗಳನ್ನು ನೆಟ್ಟು ಕರೊನಾ ದೂರ ಮಾಡುವಂತೆ ಬೇಡಿಕೊಂಡರು. ಕೊಲ್ಲೂರಿನಲ್ಲಿ ಬೆಳಗ್ಗೆ 5ಕ್ಕೆ ದೇವಸ್ಥಾನ ಬಾಗಿಲು ತೆಗೆದು, 5.30ರಿಂದ 7.30ರ ತನಕ, 10.30ರಿಂದ 1.30ರ ತನಕ ಹಾಗೂ ಮಧ್ಯಾಹ್ನ 3ರಿಂದ ಸಂಜೆ 8ರ ತನಕ ದೇವರ ದರ್ಶಕ್ಕೆ ಅವಕಾಶ ಇದೆ. ಬೆಳಗ್ಗೆ 7.30ರಿಂದ 10.30ರ ತನಕ, ಮಧ್ಯಾಹ್ನ 1.30 ರಿಂದ 3ರ ತನಕ ದೇವರ ದರ್ಶನ ಇರುವುದಿಲ್ಲ. ಮಧ್ಯಾಹ್ನ ಮತ್ತು ಸಂಜೆ ಭೋಜನ ಪ್ರಸಾದ ಇರುವುದಿಲ್ಲ. 60 ವರ್ಷ ಹಾಗೂ 10 ವರ್ಷದ ಒಳಗಿನವರಿಗೆ, ಮಾಸ್ಕ್ ಇಲ್ಲದವರಿಗೆ ದರ್ಶನ ಅವಕಾಶ ನೀಡಿಲ್ಲ ಎಂದು ಶ್ರೀ ಮೂಕಾಂಬಿಕಾ ದೇವಸ್ಥಾನದ ಇಒ ಅರವಿಂದ ಸುತಗುಂಡಿ ತಿಳಿಸಿದ್ದಾರೆ.

    ಇಂದಿನಿಂದ ಮಧೂರು ದೇವಳ ಪ್ರವೇಶ
    ಕಾಸರಗೋಡು: ಜಿಲ್ಲೆಯ ಕೆಲವೊಂದು ಧಾರ್ಮಿಕ ಶ್ರದ್ಧಾಕೇಂದ್ರಗಳು ಸೋಮವಾರದಿಂದ ಭಕ್ತರಿಗಾಗಿ ತೆರೆದುಕೊಂಡಿವೆ. ಇನ್ನುಳಿದೆಡೆ ಶುಚೀಕರಣ ಕಾರ್ಯ ನಡೆಸಿ ಜೂನ್ 9ರಿಂದ ಭಕ್ತರಿಗೆ ಪ್ರವೇಶ ನೀಡಲಿದೆ. ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೋಮವಾರ ಶುಚೀಕರಣ ಕಾರ್ಯ ನೆರವೇರಿತು. ಜೂನ್ 9ರಂದು ಭಕ್ತರಿಗೆ ದೇಗುಲ ತೆರೆದುಕೊಳ್ಳಲಿದೆ. ತೀರ್ಥ ಪ್ರಸಾದ, ಮಧ್ಯಾಹ್ನದ ಭೋಜನ ಪ್ರಸಾದ ಇರುವುದಿಲ್ಲ.

    ಕುಕ್ಕೆಯಲ್ಲಿ ತ್ರಿಕಾಲ ಪೂಜೆ ಗೊಂದಲ
    ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸೋಮವಾರ ಬೆಳಗ್ಗೆ 8.30ರಿಂದ ಸಾಯಂಕಾಲ 5.30ರ ವರೆಗೆ 3,352 ಭಕ್ತರು ಭೇಟಿ ನೀಡಿದ್ದಾರೆ. ಈ ನಡುವೆ ದೇವಸ್ಥಾನದಲ್ಲಿ ಹಿಂದೆ ನಡೆಯುತ್ತಿದ್ದ ತ್ರಿಕಾಲ ಪೂಜೆಯ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ದೇವಳದಲ್ಲಿ ದೇವರಿಗೆ ಮಧ್ಯಾಹ್ನದ ಪೂಜೆ ಕೈಬಿಟ್ಟು ಕೇವಲ ಮುಂಜಾನೆ ಹಾಗೂ ರಾತ್ರಿ ಮಾತ್ರ ಪೂಜೆ ಮಾಡುವ ವಿಚಾರ ಕೇಳಿಬಂತು. ಪೂಜೆ ವಿಷಯದಲ್ಲಿ ಸಮಸ್ಯೆ ಉಂಟಾಗಬಾರದೆಂದು ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ವೇದಿಕೆಯವರು ದೇವಸ್ಥಾನದ ಆಡಳಿತ ಅಧಿಕಾರಿಗಳಿಗೆ ಮನವಿ ಮಾಡಿದರು. ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಅರ್ಚಕರ ಜತೆ ಮಾತುಕತೆ ನಡೆಸಿ ಹಿಂದೆ ನಡೆಸುತ್ತಿದ್ದ ರೀತಿಯಲ್ಲೇ ಪೂಜೆ ನಡೆಸಲು ತೀರ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts