More

    ಎರಡು ವಾರದಲ್ಲಿ ಬಾಕಿ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೊಕ್ ಸೂಚನೆ

    ಕೊಪ್ಪಳ: ಬೆಳೆ ಪರಿಹಾರ, ಪಿಂಚಣಿ ಸೌಲಭ್ಯ, ಸ್ಮಶಾನ ಭೂಮಿ ಸೇರಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಎರಡು ವಾರಗಳೊಳಗೆ ಪೂರ್ಣಗೊಳಿಸಿ ಎಂದು ಕಂದಾಯ ಸಚಿವ ಆರ್.ಅಶೊಕ್ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಬೆಳೆ ಹಾನಿ ಪರಿಹಾರ ವಿತರಣೆ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಿ. ಪ್ರತಿ ಹಳ್ಳಿಯಲ್ಲಿಯೂ ಸ್ಮಶಾನ ಇರಲೇಬೇಕು. ಸ್ಮಶಾನ ಇಲ್ಲದ ಗ್ರಾಮಗಳಿಗೆ ಕೂಡಲೇ ಭೂಮಿ ಖರೀದಿಸಿ ನೀಡಿ. ಸಾಮಾಜಿಕ ಭದ್ರತಾ ಯೋಜನಗಳಡಿ ಅಂಚೆ ಕಚೇರಿಯಿಂದ ಫಲಾನುಭವಿಗಳಿಗೆ ಹಣ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವಿತರಣೆ ಮಾಡಲು ಕ್ರಮ ಕೈಗೊಳ್ಳಿ. ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ ನಕಲಿ ಫಲಾನುಭವಿಗಳನ್ನು ಗುರುತಿಸಿ. ಜಿಲ್ಲೆಯಲ್ಲಿ ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. 15 ದಿನದೊಳಗೆ ಆಧಾರ್ ಜೋಡಣೆ ಪೂರ್ಣಗೊಳಿಸಿ, ನಕಲಿ ಪಿಂಚಣಿದಾರರನ್ನು ಪತ್ತೆ ಹಚ್ಚಿ. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಕೋವಿಡ್-19 ಬೇರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೆ ಕೊಪ್ಪಳದಲ್ಲಿ ಮಾತ್ರ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳೇನು? ಖರೀದಿಸಿದ ವೆಂಟಿಲೇಟರ್‌ಗಳನ್ನು ಶೀಘ್ರ ಇನ್‌ಸ್ಟಾಲ್ ಮಾಡಿಸಿ. ಅಧಿಕಾರಿಗಳು, ವೈದ್ಯರು ಗಂಭೀರವಾಗಿ ಸೋಂಕು ನಿಯಂತ್ರಣ ಕ್ರಮ ಕೈಗೊಂಡಿಲ್ಲ. ನಗರದಲ್ಲಿ ಕೋವಿಡ್ ನಿಯಮಗಳು ಪಾಲನೆಯಾಗುತ್ತಿಲ್ಲ. ಲಸಿಕೆ ಬರುವವರೆಗೂ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಖಡಕ್ ಆಗಿ ಸೂಚಿಸಿದರು.

    ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು ಮಾತನಾಡಿ, ಜಿಲ್ಲೆಯಲ್ಲಿ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲವೆಂದು ದೂರಿದರು. ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಜಿಲ್ಲಾದ್ಯಂತ ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು. ಶಾಸಕ ಹಾಲಪ್ಪ ಆಚಾರ್ ಮಾತನಾಡಿದರು. ಡಿಸಿ ಎಸ್. ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಜಿ.ಸಂಗೀತಾ, ಎಡಿಸಿ ಎಂ.ಪಿ. ಮಾರುತಿ ಸೇರಿ ಇತರ ಅಧಿಕಾರಿಗಳಿದ್ದರು.

    ಕಾಲಮಿತಿಯೊಳಗೆ ಕೆಲಸ ಮುಗಿಸಿ
    ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಅಧಿಕಾರಿಗಳು ಪ್ರತಿ ಸಭೆಯಲ್ಲೂ ಕೆಲಸ ಪೂರ್ಣಗೊಳಿಸಲು ಒಂದು ವಾರ, ಹದಿನೈದು ದಿನಗಳ ಕಾಲವಕಾಶ ಕೇಳುತ್ತೀರಿ. ನೀವು ಕೇಳಿದ ಸಮಯದಲ್ಲಿ ಪೂರ್ಣವಾಗುವ ಕೆಲಸ ಅದಕ್ಕೂ ಮೊದಲು ಏಕೆ ಪೂರ್ಣಗೊಳ್ಳುವುದಿಲ್ಲ ? ಮೊದಲು ಸಮಯಕ್ಕೆ ಬೆಲೆ ಕೊಡುವುದನ್ನು ಕಲಿತುಕೊಳ್ಳಿ. ಸರ್ಕಾರದ ಕೆಲಸಗಳಲ್ಲಿ ಜನರಿಗೆ ನಂಬಿಕೆಯೂ ಮೂಡುತ್ತದೆ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts