More

    ಅರಿಶಿಣ ಬೆಳೆಗಾರರ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಗಿತ

    ಗುಂಡ್ಲುಪೇಟೆ: ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರ ಒಕ್ಕೂಟದ ಪದಾದಿಕಾರಿಗಳು ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೂರು ದಿನಗಳವರೆಗೆ ನಡೆಸಿದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ಭರವಸೆ ಮೇರೆಗೆ ಗುರುವಾರ ರಾತ್ರಿ ಕೈಬಿಟ್ಟರು.

    ಗುರುವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ರಮೇಶ್‌ಬಾಬು ಭೇಟಿ ನೀಡಿ ಜಿಲ್ಲಾಧಿಕಾರಿ ಸಂದೇಶ ತಲುಪಿಸಿದರು. ಮುಂದಿನ ಸೋಮವಾರ ತಾಲೂಕಿನ ತೆರಕಣಾಂಬಿ ಹಾಗೂ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡ್ಡಾಯವಾಗಿ ಖರೀದಿ ಕೇಂದ್ರ ಆರಂಭಿಸುವ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಅಕಸ್ಮಾತ್ ಮುಂದೂಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸೂರ್ಯಕಾಂತಿ ಸುರಿಯುವ ಚಳವಳಿ ನಡೆಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಬಿಟ್ಟರು.

    ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಂದಕೆರೆ ಸಂಪತ್ತು, ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್, ವೀರನಪುರ ನಾಗರಾಜು, ಪಂಜು, ಮಂಜುನಾಥ್, ವೃಷಿ, ಗವಿಯಪ್ಪ, ಮಲ್ಲಿಕಾರ್ಜುನ್, ಸ್ವಾಮಿ ಮಾದಪ್ಪ ಹಾಗೂ ಇತರರು ಇದ್ದರು.

    ಕೇಂದ್ರ ಆರಂಭಿಸಿದ ಕೂಡಲೇ ಖರೀದಿ ಪ್ರಕ್ರಿಯೆ ಸುಗಮಗೊಳಿಸಲು ಎಪಿಎಂಸಿ ರೈತರ ನೋಂದಣಿ ಆರಂಭಿಸಿದೆ. ಎಪಿಎಂಸಿಯ ಸಿಬ್ಬಂದಿಯೇ ಅರ್ಹ ರೈತರ ದಾಖಲೆಗಳನ್ನು ಪರಿಶೀಲಿಸಿ ಹೆಸರು ನೊಂದಾಯಿಸುತ್ತಿದೆ. ಪಟ್ಟಣದ ಕಚೇರಿ ಹಾಗೂ ತಾಲೂಕಿನ ತೆರಕಣಾಂಬಿ ಮಾರುಕಟ್ಟೆಯಲ್ಲಿ ಈಗಾಗಲೇ 500ಕ್ಕೂ ಹೆಚ್ಚಿನ ರೈತರು ತಮ್ಮ ಹೆಸರು ನೊಂದಾಯಿಸಿದ್ದಾರೆ ಎಂದು ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶ್ರೀಧರ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts