More

    ತಬ್ಲಿಘಿಗಳ ಪತ್ತೆಗೆ ತುಮಕೂರು ಜಿಲ್ಲಾಡಳಿತ ಕಸರತ್ತು !

    ತುಮಕೂರು: ಇನ್ನೂ ಜಿಲ್ಲೆ ಗ್ರೀನ್ ರೆನ್ ಆಗಲಿದೆ ಅನ್ನುವಷ್ಟರಲ್ಲಿ ತುಮಕೂರಿನಲ್ಲಿ 25 ದಿನಗಳ ನಂತರ ಕಾಣಿಸಿಕೊಂಡ ಕರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಕಸರತ್ತು ಆರಂಭಿಸಿದೆ.

    ಗುಜರಾತ್‌ನ ಸೂರತ್‌ನಿಂದ ಧರ್ಮಬೋಧನೆಗೆ ಬಂದಿದ್ದ 32 ವರ್ಷದ ವ್ಯಕ್ತಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಈತನ ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ 124 ಮಂದಿ ಸಂಪರ್ಕದಲ್ಲಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೊರರಾಜ್ಯ ಹಾಗೂ ದೇಶದ ವಿವಿಧ ಮೂಲೆಗಳಿಂದ ಬಂದಿರುವ ಜಮಾತ್ ಸದಸ್ಯರು ಕೆಲವು ದಿನಗಳಿಂದ ತುಮಕೂರಿನ 10 ಮಸೀದಿಗಳಲ್ಲಿ ವಾಸ್ತವ್ಯ ಹೂಡಿರುವ ಸ್ಫೋಟಕ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆಯಾಕಲು ಆರಂಭಿಸಿದೆ.

    ಮಸೀದಿಗಳಲ್ಲಿ ತಂಗಿದ್ದ ಸೋಂಕಿತ: ಮಂಡಿಪೇಟೆ, ಮರಳೂರುದಿಣ್ಣೆ ಹಾಗೂ ನಿಮ್ರಾ ಮಸೀದಿಗಳಲ್ಲಿ ಕರೊನಾ ಸೋಂಕಿತ ವ್ಯಕ್ತಿ ತಂಗಿದ್ದು, ಸೋಂಕು ಹರಡಿರುವ ಸಾಧ್ಯತೆಗಳು ಹೆಚ್ಚಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ. ಕೆಲವು ಮಸೀದಿಗಳು ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿರುವವರ ಬಗ್ಗೆ ಮಾಹಿತಿಯನ್ನು ಸಕಾಲದಲ್ಲಿ ನೀಡುತ್ತಿವೆ. ಆದರೆ, ಇನ್ನುಳಿದ ಕೆಲವು ಮಸೀದಿಗಳಲ್ಲಿಯೂ ಜಮಾತ್ ಸದಸ್ಯರು ತಂಗಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದೆ. ರೋಗ ಹರಡದಂತೆ ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು. ತಪ್ಪಿದಲ್ಲಿ ಮುಂದಿನ ಆಗು-ಹೋಗುಗಳಿಗೆ ಸಂಬಂಧಪಟ್ಟ ಮಸೀದಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ವರದಿ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

    ಸುಬಾಹು ಆ್ಯಪ್ : ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುವ ಮೂಲಕ ಮಹಾಮಾರಿ ಕರೊನಾ ವಿರುದ್ಧದ ಲಾಕ್‌ಡೌನ್ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ನಿಗಾವಹಿಸಲು ಜಿಲ್ಲಾ ಪೊಲೀಸ್ ಇಲಾಖೆ ‘ಸುಬಾಹು’ ಹೊಸ ಅಪ್ಲಿಕೇಷನ್ ರೂಪಿಸಿದ್ದು, ತಪ್ಪು ಕಂಡುಬಂದರೆ ಶಿಕ್ಷೆಗೆ ಗುರಿಪಡಿಸಲಿದೆ. ಸುಬಾಹು ಎನ್ನುವ ಈ ಹೊಸ ಆ್ಯಪ್ ಅನ್ನು ಜಿಲ್ಲೆಯ ತಿಪಟೂರು ಉಪವಿಭಾಗದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯೆಲ್ಲೆಡೆ ವಿಸ್ತರಣೆಯಾಗಲಿದೆ. ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ, ಛಾಯಾಚಿತ್ರ ಹಾಗೂ ವಾಹನ ಪ್ರಯಾಣಿಕರು, ಚಾಲಕರು ಸಂಚರಿಸಬಹುದಾದ ಸ್ಥಳ ಹಾಗೂ ಉದ್ದೇಶ ನಮೂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ. ಎಲ್ಲ ಚೆಕ್‌ಪೋಸ್ಟ್ಗಳಲ್ಲಿ ವಾಹನಗಳು ಸಂಚರಿಸುವ ಬಗ್ಗೆ ಸುಬಾಹು ಆ್ಯಪ್ ಅಳವಡಿಕೆಯಾಗಲಿದ್ದು, ತುಮಕೂರಿನ ಎಲ್ಲ ಟ್ರಾಫಿಕ್ ಪಾಯಿಂಟ್‌ಗಳಲ್ಲಿ ಇದನ್ನು ಬಳಸಬಹುದು. ಪೊಲೀಸ್ ಸಿಬ್ಬಂದಿ ಈ ಆ್ಯಪ್ ಮೂಲಕ ವಾಹನಗಳ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ, ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬುದನ್ನು ಅಪ್‌ಲೋಡ್ ಮಾಡಲಾಗುವುದು. ಈ ವಿವರಗಳನ್ನು ಜಿಲ್ಲೆಯ ಎಲ್ಲ ಚೆಕ್ ಪಾಯಿಂಟ್‌ಗಳಲ್ಲಿ ಎಲ್ಲಿ ಬೇಕಾದರೂ ಪರಿಶೀಲನೆ ಮಾಡಬಹುದು. ದಿನದಲ್ಲಿ ಎಷ್ಟು ವಾಹನಗಳು ಯಾವ ಕಾರಣಕ್ಕೆ ಸಂಚರಿಸಿವೆ ಎಂಬುದು ನಿಖರವಾಗಿ ತಿಳಿಯಲಿದ್ದು ಅನಗತ್ಯವಾಗಿ ಓಡಾಡುವ ವಾಹನ ಸವಾರರು ಪೊಲೀಸರ ಕೈಗೆ ಸಿಕ್ಕಿಬೀಳಲಿದ್ದಾರೆ.

    ರಸ್ತೆಗಳಲ್ಲಿ ವಾಹನ ದಟ್ಟಣೆ : ತುಮಕೂರಿನಲ್ಲಿ ಸೋಮವಾರ ಲಾಕ್‌ಡೌನ್ ಸಡಿಲಗೊಂಡಂತೆ ಕಂಡುಬಂತು. ಮಾ.23ರಿಂದ ತುರ್ತುಸೇವೆ, ಅಗತ್ಯವಸ್ತುಗಳ ಸಾಗಣೆಗೆ ವಾಹನಗಳನ್ನು ಹೊರತುಪಡಿಸಿ ಬಹುತೇಕ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕೆಲ ನಿರ್ಬಂಧಗಳನ್ನು ಏ.20ರಂದು ಸರ್ಕಾರ ಸಡಿಲಿಗೊಳಿಸಿತ್ತು. ಆದರೂ, ಅಷ್ಟೊಂದು ವಾಹನಗಳು ರಸ್ತೆಗಳಲ್ಲಿ ಕಾಣುತ್ತಿರಲಿಲ್ಲ. ಆದರೆ, ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂತು. ಪೊಲೀಸರು ಕೂಡ ಮೃದುಧೋರಣೆ ತೋರುತ್ತಿದ್ದಾರೆ.

    ಮಾಸ್ಕ್ ಧರಿಸದ 81 ಮಂದಿಗೆ ತಲಾ 100 ರೂಪಾಯಿ ದಂಡ: ತುಮಕೂರು: ನಗರದಲ್ಲಿ ಮಾಸ್ಕ್ ಧರಿಸದ 81 ಜನರಿಗೆ ತಲಾ 100 ರೂಪಾಯಿ ದಂಡವನ್ನು ಮಹಾನಗರ ಪಾಲಿಕೆ ವಿಧಿಸಿದೆ. ಸಾರ್ವಜನಿಕವಾಗಿ ಓಡಾಡುವರು ಕಡ್ಡಾಯವಾಗಿ ಮಾಸ್ಕ್ ಧರಿಸದಿದ್ದರೆ ಪಾಲಿಕೆ ದಂಡ ವಿಧಿಸುವುದಾಗಿ ಎಚ್ಚರಿಕೆ ಸಹ ನೀಡಿತ್ತು. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ 4 ಅಂಗಡಿಗಳ ಮಾಲೀಕರಿಗೂ ತಲಾ 500 ರೂ., ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ವಿಜಯವಾಣಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts