ಸಾರಿಗೆ ಮುಷ್ಕರ, ಹಲವು ಪ್ರಶ್ನೆಗಳು ಮರೀಚಿಕೆಯಾದ ಉತ್ತರಗಳು

8

ಸಾರಿಗೆ ಮುಷ್ಕರ, ಹಲವು ಪ್ರಶ್ನೆಗಳು ಮರೀಚಿಕೆಯಾದ ಉತ್ತರಗಳು| ಎನ್.ನಿತ್ಯಾನಂದ

ಸಾರಿಗೆ ಮುಷ್ಕರ ನಡೆಸುವ ಮುನ್ನ ಸಮಯ, ಆಗಬಹುದಾದ ಅನನುಕೂಲಗಳ ಬಗ್ಗೆ ಕಾರ್ವಿುಕರು ಹಾಗೂ ಅವರ ನಾಯಕತ್ವ ದೀರ್ಘಾವಧಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಬೇಕಾಬಿಟ್ಟಿ ನಿರ್ಧಾರಗಳು ಜನರ ಆಕ್ರೋಶಕ್ಕೆ ಕಾರಣವಾಗುತ್ತವೆ. ಕಡಿಮೆಯಾಗುತ್ತಿದ್ದ ಕರೊನಾದ ಎರಡನೇ ಅಲೆ ದೇಶದಾದ್ಯಂತ ಕಾಡುತ್ತಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಸೋಂಕು ಪ್ರಕರಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸಾರಿಗೆಯಂಥ ಅತ್ಯಗತ್ಯ ಸೇವೆಯಿಂದ ರಾಜ್ಯದ ಜನರನ್ನು ವಂಚಿತರನ್ನಾಗಿಸುವುದು ಸಮಯೋಚಿತವೇ?

ಸರ್ಕಾರವು ಮುಷ್ಕರ ಆರಂಭದ ಮುನ್ನವೇ ಕಾರ್ವಿುಕ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ತಾನು ಪ್ರತಿಷ್ಠೆಗೆ ಜೋತು ಬಿದ್ದಿಲ್ಲ, ಅಹಂಕಾರಿಯೂ ಅಲ್ಲ ಎಂದು ಸರ್ಕಾರ ತನ್ನ ನಿಲುವಿನ ಮೂಲಕ ಸ್ಪಷ್ಟಪಡಿಸಿದ್ದರೆ ಅನುಮಾನದ ಭೂತ ಕಾರ್ವಿುಕರಲ್ಲಿ ಸುಳಿದಾಡುತ್ತಿರಲಿಲ್ಲ. ಬಗೆಹರಿಯದ ಸಮಸ್ಯೆಗಳು ವಿರಳ. ಪರಸ್ಪರ ಗೌರವ, ನಂಬಿಕೆಯ ವಾತಾವರಣ ನಿರ್ಮಾಣ ಮಾಡುವಲ್ಲಿ ಸರ್ಕಾರದ ಅತಿ ಮುಖ್ಯ ಪಾತ್ರವಿದೆ. ಈ ದಿಕ್ಕಿನಲ್ಲಿ ಸರ್ಕಾರ ಎಡವಿದೆ ಎಂಬ ಭಾವನೆ ಜನರಲ್ಲಿ ಹೆಚ್ಚಾಗಿದೆ.

ಸಾರಿಗೆ ಸಂಸ್ಥೆಗಳ ವಿತ್ತ ಶಕ್ತಿ: ಯಾವುದೆ ಸಂಸ್ಥೆ ತಾನು ಖರ್ಚು-ವೆಚ್ಚಗಳನ್ನು ಭರಿಸುವ ಮುನ್ನ ಹಣಕಾಸು ಪರಿಸ್ಥಿತಿ ಅವಲೋಕಿಸಿಕೊಳ್ಳಬೇಕು. ಮುಂದಿನ ವರ್ಷಗಳ ಲಾಭ-ನಷ್ಟಗಳ ಬಜೆಟ್ ಮಾಡಿಕೊಳ್ಳುವುದು ಅಗತ್ಯ. ಹೊಸ ಬಸ್ ನಿಲ್ದಾಣಗಳು, ಇತರ ಖರ್ಚಿಗೆ ಬೇಕಾದ ಹಣ, ಅದು ಸಾಲದಿಂದ ಬರುವುದೇ? ಅಥವಾ ಮತ್ತಾವ ಮೂಲಗಳಿಂದ ಬರುವುದೋ ಎಂಬುದನ್ನು ಪೂರ್ವ ಪರಿಶೀಲನೆ ಮಾಡಿಕೊಳ್ಳಬೇಕು. ಸಾಲಗಳ ಮರುಪಾವತಿ, ಬಡ್ಡಿಪಾವತಿ ಮತ್ತು ಇತರ ಹಲವು ವಿಚಾರಗಳನ್ನು ಪರಿಗಣಿಸಿ ಹೊಸ ಹೊರೆಗಳನ್ನು, ಖರ್ಚು-ವೆಚ್ಚಗಳನ್ನು ನಿಭಾಯಿಸುವ ಬಗ್ಗೆ ಯೋಜನೆ ಮಾಡಬೇಕಾಗುತ್ತದೆ.

ಕೆಎಸ್​ಆರ್​ಟಿಸಿಯ 2018-19ರ   ಆಡಳಿತಾತ್ಮಕ ವರದಿಯ ಹಣಕಾಸು ವರದಿಯನ್ನು ಅವಲೋಕನ ಮಾಡಿದರೆ ಸಂಸ್ಥೆಯ ಹಣಕಾಸು ಪರಿಸ್ಥಿತಿ ಅಷ್ಟಕ್ಕಷ್ಟೆ ಇದೆ.

ಸಾರಿಗೆ ಮುಷ್ಕರ, ಹಲವು ಪ್ರಶ್ನೆಗಳು ಮರೀಚಿಕೆಯಾದ ಉತ್ತರಗಳು

ಈ ಹಣಕಾಸು ವಿವರಗಳು ಸಂಸ್ಥೆಯ ಪರಿಸ್ಥಿತಿಗೆ ಹಿಡಿದ ಕನ್ನಡಿ. ಸಂಸ್ಥೆಗೆ ಬಂಡವಾಳ ಹಾಕಿರುವ ಸರ್ಕಾರಕ್ಕಾಗಲಿ, ಇತರರಿಗಾಗಲಿ ತಿರುಪತಿ ತಿಮ್ಮಪ್ಪನ ದರ್ಶನ ಸೂಕ್ತ ಎಂದು ಭವಿಷ್ಯವಾಣಿ ನುಡಿಯುತ್ತಿದೆ. ಡೀಸೆಲ್ ಖರ್ಚು, ಕಾರ್ವಿುಕರ ವೇತನ ಹಾಗೂ ಇತರ ಖರ್ಚುಗಳು ಹೆಚ್ಚುತ್ತಲೆ ಇವೆ. ಅದನ್ನು ಶ್ರೀಸಾಮಾನ್ಯರ ಮೇಲೆ ಹಾಕದಿರುವುದರಿಂದ ಹೆಚ್ಚಿನ ಸಾಲದ ಹೊರೆಗೆ ಸಂಸ್ಥೆಯ ಬೆನ್ನು ಬಾಗಿದೆ. ಇದೆಲ್ಲ ಕಾರ್ವಿುಕರಿಗೆ ಹಾಗೂ ಅವರ ಅಗ್ರ ನಾಯಕರಿಗೆ ಮನದಟ್ಟು ಮಾಡಿಕೊಡಲು ಅಧಿಕಾರಿ ವರ್ಗ, ಸಚಿವರು ವಿಫಲರಾಗಿದ್ದಾರೆಯೇ? ಇಂತಹ ನಷ್ಟದ ದಿನಗಳಲ್ಲಿ ಆರನೇ ವೇತನ ಆಯೋಗದ ಆಸೆ ಬಿಡಿ, ತಮಗೆ ಬರುವ ಸಂಬಳ ಸರಿಯಾಗಿ ಬಂದರೆ ಕಾರ್ವಿುಕರು ನಿಟ್ಟುಸಿರು ಬಿಡಬೇಕಾದ ಪರಿಸ್ಥಿತಿ ಇದೆ. ಅಂಗೈ ಗಾಯಕ್ಕೆ ಈ ನಾಯಕರಿಗೆ ಕನ್ನಡಿ ಅವಶ್ಯಕತೆ ಇದೆಯೇ? ಸರ್ಕಾರ- ಸಾರಿಗೆ ಸಂಸ್ಥೆ ನಾಯಕತ್ವ ಪರಸ್ಪರ ನಂಬಿಕೆ, ವಿಶ್ವಾಸವಿಟ್ಟು, ಮುಷ್ಕರವನ್ನು ಕೈಬಿಡಲಿ. ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗೆ ಕೈಜೋಡಿಸುವ ಪರಿಸ್ಥಿತಿ ಉದಯವಾಗಲಿ.

(ಲೇಖಕರು ಆರ್ಥಿಕ ತಜ್ಞರು)