More

    ವಿದ್ಯಾಗಮ ಶಿಕ್ಷಣಕ್ಕೆ ಸಾರಿಗೆ ಸಮಸ್ಯೆ

    ಕಿರಣ ಹೂಗಾರ ಅಕ್ಕಿಆಲೂರ

    ರಾಜ್ಯ ಸರ್ಕಾರ ಜ. 1ರಿಂದ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಶಿಕ್ಷಣಕ್ಕೆ ಹಸಿರು ನಿಶಾನೆ ತೋರಿಸಿದೆ. ಆದರೆ, ಶಾಲೆಗೆ ಹೋಗಲು ಪಟ್ಟಣಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸದೇ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.

    ಪಟ್ಟಣದಲ್ಲಿರುವ ಜ್ಞಾನ ಭಾರತಿ, ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲ, ದೇಸಾಯಿ, ಸಿಂಧೂರ ಸಿದ್ದಪ್ಪ ಪ್ರೌಢ ಶಾಲೆಗಳಿಗೆ ಹಳ್ಳಿಗಳಿಂದ ಸುಮಾರು 800 ವಿದ್ಯಾರ್ಥಿಗಳು ನಿತ್ಯ ಬರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಳ್ಳಿಗಳಿಂದ ಅಕ್ಕಿಆಲೂರಿಗೆ ಬರುವುದರಿಂದ ತಾಲೂಕು ಸಾರಿಗೆ ಸಂಸ್ಥೆ ಸಮಯಕ್ಕನುಗುಣವಾಗಿ ಬಸ್ ಸೇವೆ ಒದಗಿಸುತ್ತಿತ್ತು. ಆದರೆ, ಕರೊನಾದಿಂದಾಗಿ ಶಾಲೆಗಳು ಬಂದ್ ಆಗಿದ್ದರಿಂದ ಬಸ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಜ. 1ರಿಂದ 6ರಿಂದ 10ನೇ ತರಗತಿ ಆರಂಭವಾಗಿದೆ. ಆದರೆ, ಬಸ್ ಇಲ್ಲದ್ದರಿಂದ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಕೂಡಲೆ ಬಸ್ ಆರಂಭಿಸುವಂತೆ ಶಾಲೆ ಮುಖ್ಯಸ್ಥರು, ಪಾಲಕರು ಸಾರಿಗೆ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.

    ಅವಶ್ಯಕತೆ ಇರುವ ಮಾರ್ಗಗಳು: ಅಕ್ಕಿಆಲೂರಿನ ಜ್ಞಾನ ಭಾರತಿ ಶಾಲೆಗೆ 225, ಗುರುಕುಲಕ್ಕೆ 120, ದೇಸಾಯಿ ಕಾಲೇಜ್​ಗೆ 360, ಸಿಂಧೂರ ಸಿದ್ದಪ್ಪ ಪ್ರೌಢ ಶಾಲೆಗೆ 80 ಸೇರಿ 800 ವಿದ್ಯಾರ್ಥಿಗಳು ಆಗಮಿಸುತ್ತಾರೆ. ನಿರಂತರ ಬಸ್ ಸೌಲಭ್ಯ ಇರುವುದರಿಂದ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬಾಳಂಬೀಡ, ಆಡೂರ ಹೊರತುಪಡಿಸಿ, ಕೊಂಡಜ್ಜಿ, ಇನಾಂಯಲ್ಲಾಪುರ, ಕಲ್ಲಾಪುರ, ಶ್ಯಾಡಗುಪ್ಪಿ, ಮಲಗುಂದ, ಹಾವಣಗಿ, ವೀರಾಪುರ, ಹಿರೇಹುಲ್ಲಾಳ, ಹೇರೂರ, ಅರಳೇಶ್ವರ ಮೊದಲಾದ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ಸೇವೆ ಅಗತ್ಯವಾಗಿದೆ.

    10ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ನಾವು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಕೆಲವು ಬಸ್​ಗಳು ಸಂಚರಿಸುತ್ತಿವೆ. ಅಕ್ಕಿಆಲೂರಿಗೆ ಆಗಮಿಸುವ 10ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.

    | ವಿ.ಎಂ. ಅರ್ಕಾಚಾರಿ, ಹಾನಗಲ್ಲ ಸಾರಿಗೆ ಘಟಕ ವ್ಯವಸ್ಥಾಪಕ

    ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆ ಬೀಳಬಾರದು. ವಿದ್ಯಾರ್ಥಿಗಳ ಸಮಯಕ್ಕೆ ಅನುಗುಣವಾಗಿ ಬಸ್ ಅಗತ್ಯವಾಗಿದೆ. ಹಳ್ಳಿಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕಿಆಲೂರಿಗೆ ಬರುತ್ತಾರೆ. ಶಿಕ್ಷಕರಿಂದ ವಿದ್ಯಾರ್ಥಿಗಳ ಸಂಖ್ಯೆ ಪಡೆದು, ಶೀಘ್ರದಲ್ಲಿ ಸಾರಿಗೆ ಅಧಿಕಾರಿಗಳನ್ನು ಸಂರ್ಪಸಿ ಪತ್ರ ಬರೆಯಲಾಗುವುದು.

    | ಎಚ್. ಶ್ರೀನಿವಾಸ, ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts