More

    ಪ್ರಶ್ನೆ ಪತ್ರಿಕೆಯಲ್ಲಿಯೂ ಸರ್ಕಾರ ಕಿಕ್ ಬ್ಯಾಕ್ ಪಡೆಯಲು ಮುಂದಾಗಿದೆ: ಎಂಎಲ್ ಸಿ ಅಡಗೂರು ಎಚ್.ವಿಶ್ವನಾಥ್ ಆರೋಪ

    ಮೈಸೂರು: ಪ್ರಶ್ನೆ ಪತ್ರಿಕೆಯಲ್ಲಿಯೂ ಕಿಕ್ ಬ್ಯಾಕ್ ಪಡೆಯಲು ಸರ್ಕಾರ ಮುಂದಾಗಿದ್ದು, ಆ ಮೂಲಕ ಪರೀಕ್ಷೆಯ ಪಾವಿತ್ರೃತೆಯನ್ನೇ ಹಾಳು ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು.
    ರಾಜ್ಯ ಸರ್ಕಾರ ನಡೆಸಿದ 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಕಾನೂನುಬಾಹಿರವಾಗಿದೆ. ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದ್ದು, ಈಗ ಎರಡನೇ ಬಾರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಜರಿದರು.
    ಈ ಹಿಂದೆ ಬಿಜೆಪಿ ಸರ್ಕಾರ ಕೂಡ ಇದನ್ನೇ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಕೂಡ ಇದನ್ನೇ ಅನುಸರಿಸಿದೆ. ಪ್ರಶ್ನೆ ಪತ್ರಿಕೆಯಲ್ಲಿಯೂ ಕಿಕ್ ಬ್ಯಾಕ್ ಪಡೆಯಲು ಸರ್ಕಾರ ಪ್ರಶ್ನೆ ಪತ್ರಿಕೆ ಟೆಂಡರ್ ಅನ್ನು ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಆ ಮೂಲಕ ಪರೀಕ್ಷೆಯ ಪಾವಿತ್ರೃತೆಯನ್ನೇ ಸರ್ಕಾರ ಹಾಳು ಮಾಡಿದೆ ಎಂದು ಟೀಕಿಸಿದರು.
    ಹಿಂದೆ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ತೀರಾ ಕೆಳಗಡೆ ಹೋಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾತೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
    ಈಗಲಾದರೂ ಸರ್ಕಾರ ತನ್ನ ಒಣಪ್ರತಿಷ್ಠೆ ಬಿಟ್ಟು 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಮಾಡಬೇಕು. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿರುವುದರಿಂದ ಕೂಡಲೇ ಶಿಕ್ಷಣ ಸಚಿವರನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
    ಎನ್‌ಇಪಿ ಉಲ್ಲಂಘನೆ: ಎಲ್ಲ ಗ್ಯಾರಂಟಿಗಳಿಗಿಂತ ಶಿಕ್ಷಣ ಗ್ಯಾರಂಟಿ ಮಕ್ಕಳಿಗೆ ಬಹಳ ಮುಖ್ಯ. ಹಾಗಾಗಿ, ಮೊದಲು ಸರ್ಕಾರ ಶಾಲಾ ಶಿಕ್ಷಣದ ಗ್ಯಾರಂಟಿ ಕೂಡ ನೀಡಬೇಕು. ಆದರೆ, ಎನ್‌ಇಪಿ ಉಲ್ಲಂಘನೆ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ವಿಶ್ವನಾಥ್ ಆರೋಪಿಸಿದರು.
    ಕಾಂಗ್ರೆಸ್ ಟಿಕೆಟ್ ಕೇಳಿದ್ದು ನಿಜ: ನಾನು ಬಿಜೆಪಿ ಎಂಎಲ್ಸಿ. ಹಾಗೆಯೇ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ದು ನಿಜ ಎಂದು ಎಚ್.ವಿಶ್ವನಾಥ್ ಹೇಳಿದರು.
    ಪಕ್ಷ ರಾಜಕಾರಣ ಸತ್ತು ಬಹಳ ವರ್ಷ ಆಯಿತು. ಇವತ್ತು ಏನಿದ್ದರೂ ವ್ಯಕ್ತಿ ರಾಜಕಾರಣ ನಡೆಯುತ್ತಿದ್ದು, ಅದೇ ‘ರಾಜಕಾರಣ ವೈಭವೀಕರಣ’ ಆಗುತ್ತಿದೆ ಎಂದರು.
    ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಪ್ರಚಾರಕ್ಕೆ ಹೋಗುತ್ತೇನೆ. ಯದುವೀರ್‌ಗೆ ಟಿಕೆಟ್ ಕೊಟ್ಟ ಬಳಿಕ, ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ರೆ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ. ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆ. ಈಗ ರಾಜಕೀಯ ಧ್ರುವೀಕರಣ ಆಗುತ್ತಿದೆ. ಮತವನ್ನು ಯದುವೀರ್‌ಗೆ ಹಾಕುವ ಮೂಲಕ ರಾಜರ ಋಣ ತೀರಿಸಬೇಕು ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts