More

    ನಾಳೆಯಿಂದ ನಾಯ್ಡು ಟ್ರೋಫಿ

    ಬೆಳಗಾವಿ: ಇಲ್ಲಿನ ಆಟೋನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮೈದಾನದಲ್ಲಿ ಜ. 5ರಿಂದ 8ರ ವರೆಗೆ 23 ವರ್ಷದೊಳಗಿನ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ ಎಂದು ಕೆಎಸ್‌ಸಿಎ ಧಾರವಾಡ ವಲಯದ ಸಂಚಾಲಕ ಅವಿನಾಶ ಪೋತಾದರ ತಿಳಿಸಿದ್ದಾರೆ.

    ಕೆಎಸ್‌ಸಿಎ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಸಿಸಿಐ ವತಿಯಿಂದ ನಡೆಯುತ್ತಿರುವ ಸಿ.ಕೆ. ಟ್ರೋಫಿಯ ಎರಡು ತಂಡಗಳ ಮೂರನೇ ಪಂದ್ಯ ಇದಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ ಎಂದರು. ನಿತ್ಯ ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, 90 ಓವರ್‌ಗಳ ಆಟ ನಡೆಯುತ್ತದೆ. ಶಕ್ತಿಸಿಂಗ್ ಮ್ಯಾಚ್ ರೆಫ್ರಿ, ನಿಖಿಲ ಮೆನನ್ ಹಾಗೂ ರಾಜೀವ ಗೋದ್ಲಾ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪಿಚ್ ಕ್ರೂಯೇಟರ್ ಜಸ್ಟಿನ್ ಮೂರನೇ ಅಂಪೈರ್ ಆಗಿರಲಿದ್ದಾರೆ. ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಅವರು ತಿಳಿಸಿದರು.

    ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ, ಬಳ್ಳಾರಿ, ಶಿವಮೊಗ್ಗ, ಮೈಸೂರು ಸೇರಿ ಆರು ವಲಯಗಳಿವೆ. ಬಿಸಿಸಿಐ, ಬೆಳಗಾವಿ ಹಾಗೂ ಹುಬ್ಬಳ್ಳಿಯ ಕ್ರಿಕೆಟ್ ಮೈದಾನಗಳಲ್ಲಿ ಹೆಚ್ಚು ದೇಶಿಯ ಕ್ರಿಕೆಟ್ ಪಂದ್ಯ ನಡೆಸಲು ಅವಕಾಶ ನೀಡುತ್ತಿದೆ. ಪ್ರಸ್ತುತ ವರ್ಷ ಎರಡು ಮೈದಾನದಲ್ಲಿ ಒಂದು ರಣಜಿ ಪಂದ್ಯ ಸೇರಿ 6 ಮ್ಯಾಚ್ ನಡೆಯಲಿವೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಸಿಸಿಐ ವತಿಯಿಂದ ಬೆಳಗಾವಿಯಲ್ಲಿ ಒಂದು ತಿಂಗಳು ಕ್ರಿಕೆಟ್ ಕ್ಯಾಂಪ್ ನಡೆಯಲಿದೆ ಎಂದರು. ಕರ್ನಾಟಕ ತಂಡದ ಮ್ಯಾನೇಜರ್ ಬಿ.ಕೆ. ಕುಮಾರ್, ಧಾರವಾಡ ವಲಯದ ವ್ಯವಸ್ಥಾಪಕ ಟೋನಿ ಜಳಕಿನ, ದೀಪಕ ಪವಾರ ಸೇರಿ ಇತರರು ಇದ್ದರು.

    ತವರಿನಲ್ಲಿ ಮೊದಲ ಪಂದ್ಯ

    ಬೆಳಗಾವಿ ನಗರದ ಟಿಳಕವಾಡಿಯ ಸಂಜಯ ಹಾಗೂ ಸುಲೋಚನಾ ಸಾತೇರಿ ದಂಪತಿ ಪುತ್ರ 23 ವರ್ಷದೊಳಗಿನ ಕರ್ನಾಟಕ ತಂಡದ ಉಪ ನಾಯಕ ಸುಜಯ ಸಾತೇರಿ ತವರು ಮೈದಾನದಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ. ವಿಕೆಟ್‌ಕೀಪರ್ ಆಗಿರುವ ಸುಜಯ, ಕಳೆದ ವರ್ಷವಷ್ಟೇ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಶಿವಮೊಗ್ಗದಲ್ಲಿ ನಡೆದ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 175 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts