More

    ರಾಜಧರ್ಮ ರಾಜನೀತಿ: ರಾಷ್ಟ್ರದ್ರೋಹದ ಇಂದಿನ ಭಾರತೀಯ ಬಗೆಗಳು…

    ರಾಜಧರ್ಮ ರಾಜನೀತಿ: ರಾಷ್ಟ್ರದ್ರೋಹದ ಇಂದಿನ ಭಾರತೀಯ ಬಗೆಗಳು...

    ಪ್ರಕಟವಾದ ಬಗೆಗಳ ಕಾಲ ಹೋಯ್ತು. ಕಾಣಿಸಿಕೊಳ್ಳದೆಯೂ, ನೇಣು ತಪ್ಪಿಸಿಕೊಳ್ಳುವ ಬಗೆಗಳು ಇಂದಿನ ಅನೇಕ ರಾಜಕಾರಣಿಗಳಿಗೆ ಕರಗತವಾಗಿದೆ, ಕಂಠಗತವಾಗಿದೆ, ರಕ್ತಗತವಾಗಿವೆ. ಭಾರತದಲ್ಲಿ ಸಿಟ್ಟಿಗೆದ್ದ ಜನ ಕೊಂದವರೂ ಇಲ್ಲಿ ರಾಷ್ಟ್ರದ್ರೋಹಿಗಳ ವರ್ಗದಲ್ಲೇ ಸೇರುತ್ತಾರೆ. ಪಾಕ್​ನಲ್ಲಿ ಮೂರು ನಾಲ್ಕು ಜನರು ಕೋರ್ಟ್ ತೀರ್ಪಿನಂತೆ ನೇಣಿಗೇರಿದರು. ಭುಟ್ಟೋ ಸಾಹೇಬ, ಬೆನಜೀರ ಭುಟ್ಟೋ, ಜಿಯಾ ಉಲ್ ಹಕ್, ಹಿಂದಣ ಲಿಯಾಖತ್ ಅಲಿ ಖಾನ್ ನಾನಾ ರೀತಿಯಲ್ಲಿ ಕೊಲ್ಲಲ್ಪಟ್ಟರು. ಅಂದರೆ ಅಲ್ಲಿನ ಕೋರ್ಟು ವಾಸಿಯೇ? ನಾನು ಏನೂ ಹೇಳುವುದಿಲ್ಲ. ನಾನಾ ಬಗೆಯ ಅವ್ಯವಸ್ಥೆಗಳನ್ನು ತರುವವರು, ಅದರಲ್ಲಿ ಯಶಸ್ವಿಯಾದವರು, ಜೈಲು ತಪ್ಪಿಸಿಕೊಂಡೂ ಹಳೆಯ ಚಾಳಿ ಬಿಡದೆ ಅವ್ಯವಸ್ಥಾ ಪ್ರಿಯತೆಗೆ ಗಂಟುಬಿದ್ದವರು, ಇನ್ನೂ ರಾಜಕೀಯ ಅಸ್ಥಿರತೆ, ಸಾಮಾಜಿಕ ಅಶಾಂತಿ, ಆರ್ಥಿಕ ಅಲ್ಲೋಲಕಲ್ಲೋಲಗಳನ್ನು ಸೃಷ್ಟಿಸುವವರು, ದೇಶದೊಳಗಿದ್ದೂ ವಿದೇಶಿ ವಿದ್ರೋಹಿಗಳೊಡನೆ ಕೈಜೋಡಿಸಿ, ಇಲ್ಲಿ ಪ್ರಜಾತಂತ್ರ ವ್ಯವಸ್ಥೆಗೇ ಕೊಡಲಿ ಏಟು ಹಾಕುವವರು, ಸೇನೆಯ ಮೇಲೆಯೇ ಅಪಪ್ರಚಾರ ಮಾಡುವವರು, ಇಲ್ಲಿಯ ಕಾನೂನುಗಳನ್ನು ಮಾನ್ಯ ಮಾಡದವರು, ನಗರ ನಕ್ಸಲರು, ವಿದೇಶಗಳಲ್ಲಿ ಭಾರತವನ್ನು ತೆಗಳುವವರು, ಅಲ್ಲದೆ ನಾನಾ ಬಗೆಯ ಭ್ರಷ್ಟಾಚಾರಗಳಲ್ಲಿ ತೊಡಗಿ, ಸಿಕ್ಕಿ ಬಿದ್ದೂ, ಜೈಲು ಆಗಿಯೂ ಬೇಲು ಪಡೆದು, ಸಕ್ರಮ ಸರ್ಕಾರಗಳನ್ನು ಅಭದ್ರಗೊಳಿಸುವ, ಉರುಳಿಸುವ ನಾನಾ ಯತ್ನಗಳಲ್ಲಿರುವವರೂ- ಇಲ್ಲಿ ರಾಜಕಾರಣಿ, ಅಧಿಕಾರಶಾಹಿ, ಬ್ಯಾಂಕು ಅಧಿಕಾರಿಗಳು, ಕ್ರಿಮಿನಲ್ಸ್ ಜತೆ ಕೈಗೂಡಿಸುವ ಕೆಲ ಪೊಲೀಸರು, ಕೋಮುಗಲಭೆ ಎಬ್ಬಿಸುವ ಪುಂಡರು, ಅವರ ಖಾಸಗಿ ಸೇನೆಗಳು-ಎಲ್ಲರೂ ಸೇರುತ್ತಾರೆ.

    ನೆಹ್ರೂ ಕಾಲದ ‘ಮುಂಧ್ರಾ’ ಹಗರಣ ಟಿ.ಟಿ.ಕೃಷ್ಣಮಾಚಾರಿ, ‘ಜೀಪು’ ಹಗರಣದ ಕೃಷ್ಣ ಮೆನನ್, ಇಂದಿರಾ ಕಾಲದ ಹಾಜಿ ಮಸ್ತಾನ್, ಆಮೇಲಿನ ಹರ್ಷದ್ ಮೆಹ್ತಾ, ಭೋಪಾಲ್ ದುರಂತದ ಆಂಡರ್ರ್​ಸನ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದವರು, ರಾಜೀವ ಕಾಲದ ಕ್ವಟ್ರೋಚಿ-‘ಬೋಫೋರ್ಸ್ ಹಗರಣ’- ಕರ್ನಾಟಕದ ನಕಲಿ ಛಾಪಾ ಕಾಗದದ ಕುಖ್ಯಾತಿಯ ಕರೀಂ ಲಾಲಾ ತೆಲಗಿಯ ರಕ್ಷಕರು, ಪಾಕ್ ಭಯೋತ್ಪಾದಕರ ನೆರವಿಗೆ ಇಲ್ಲಿ ಒದಗಿದವರು-ಯಾರೂ ಶಿಕ್ಷಿತರಾಗಲಿಲ್ಲ. ನಿರಪರಾಧಿ ಮೋದಿಯವರನ್ನು ‘ಮೃತ್ಯುವಿನ ದಲ್ಲಾಳಿ’ ಎಂದು ಪುರಾವೆಯಿಲ್ಲದೆ ಬೈದವರಿಗೆ ಶಿಕ್ಷೆ ಆಗಲಿಲ್ಲ. ವಾಜಪೇಯಿಯವರನ್ನು ‘ಗದ್ದರ್’ ಎಂದು ಬೈದ ವಿದೇಶೀ ಮಹಿಳಾಮಣಿ ಇಲ್ಲೇ ರಾರಾಜಮಾನರಾಗಿದ್ದಾರೆ! ರಾಜೀವರನ್ನು ಕೊಂದು, ಹಿನ್ನೆಲೆಯಲ್ಲಿದ್ದವರು ಇನ್ನೂ ಶಿಕ್ಷೆ ಕಂಡಿಲ್ಲ. ಈಗ ಚಿದಂಬರಂ ಬಗೆಗೆ ವಿಸõತವಾಗಿ ಬಂದ ಕೆಲವು ವರದಿಗಳನ್ನೋದಿ ಅವರು ಎಲ್ಲಿ ಸೇರುತ್ತಾರೆಂದು ನೀವೇ ತೀರ್ವನಿಸಿಕೊಳ್ಳಿ. ಹಿಂದೆ ತಾಳೀಕೋಟೆ ಯುದ್ಧದಲ್ಲಿ ರಾಮರಾಯ ಸಾಯುವ ಮೊದಲೇ, ಯುದ್ಧದಲ್ಲಿ ವಿಜಯನಗರ ಅಧಿಕೃತವಾಗಿ ಸೋಲುವ ಮೊದಲೇ ತಿರುಮಲರಾಯನೆಂಬ ಮಂತ್ರಿ, ರಾಜ್ಯ ಬೊಕ್ಕಸವನ್ನು ಆನೆ, ಕುದುರೆ, ಒಂಟೆ, ಎತ್ತುಗಳ ಮೇಲೆ ಹೇರಿಸಿ, ಪೆನುಗೊಂಡೆಗೆ ರವಾನಿಸಿ, ಅಷ್ಟಿಷ್ಟು ಸುರಕ್ಷಿತ ಮಾಡಿದ್ದ ಎಂದು ಚರಿತ್ರೆ ಹೇಳುತ್ತದೆ. ನೀವು ಓದುವುದಿಲ್ಲ ಬಿಡಿ. ಅದೆಲ್ಲ ಎಲ್ಲಿ ಹೋಯ್ತು? ‘ತಿರುಪತಿ ತಿಮ್ಮಪ್ಪನ ಹಳೆಯ ಒಡವೆಗಳು ಎಲ್ಲಿ ಹೋದವು?’- ಕೇಳಿದರೆ, ‘ಅದೆಲ್ಲ ದಾಖಲೆಯಲ್ಲಿರಲ್ಲೇ ಇಲ್ಲ’ ಎಂಬ ಉತ್ತರ!

    ಈ ಸಮಾನಾಂತರ ಉದಾಹರಣೆ ಇತ್ತುದರಲ್ಲಿ ಒಂದು ಪಾಠ ಇದೆ. ಪರಿಪಾಠ ಎನ್ನಿ. ಮೋದಿ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಹಿಂದಿನ ಸರ್ಕಾರದ ವಿತ್ತಮಂತ್ರಿ, 10 ವರ್ಷಕಾಲ ಅಲ್ಲಿದ್ದವರು, ಮುಂದೆ ಬರುವ ಮೋದಿ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಲು ಆಗಾಗಿನ ಮುಂಗಡಪತ್ರಗಳಲ್ಲೂ, ದಿನಾ ವಹಿವಾಟಿನಲ್ಲೂ ಇಲ್ಲಸಲ್ಲದ ಖರ್ಚು ಬಾಬ್ತುಗಳನ್ನು ಹುಟ್ಟಿಸಿ, ಹೆಚ್ಚಿಸಿ, ಮೋದಿ ಸರ್ಕಾರವು ಸರ್ಕಸ್ಸು ಮಾಡಿದರೂ ಚೇತರಿಸಿಕೊಳ್ಳಲಾಗದಷ್ಟು ಸಾಲ ಬಾಕಿ ಇಟ್ಟು, ಸೃಷ್ಟಿಸಿ, ಖರ್ಚಿನ ದಾರಿ ತೋರಿಸಿದ ಅಂದಾಜುಗಳನ್ನು ನಕಲಿಯಾಗಿ ತೋರಿಸಿ, ತಮ್ಮ ಕಾಲದಲ್ಲಿ ‘ಇಷ್ಟು ಹಣ ಈ ಬಾಬ್ತಿಗೆ ಖರ್ಚು’ ಎಂದು ಸುಳ್ಳು ಪ್ರಚಾರ ತೋರಿಸಿ, ಇಲ್ಲದ ಖರ್ಚನ್ನು ಮುಂದಿನವರ ತಲೆಗೆ ಕಟ್ಟುವ ‘ಉತ್ಪಾತಕ’ (‘ಉತ್ಪಾದಕ’ ಅಲ್ಲ) ಬುದ್ಧಿ ತೋರಿಸಿದ್ದಾರೆ.

    ಕಾಂಗ್ರೆಸ್ಸಿನ ಅನೇಕ ಸರ್ಕಾರಗಳು, ಇಲ್ಲಿನವೂ, ಅಪಮೈತ್ರೀ ಸರ್ಕಾರದವೂ ಅವನ್ನೇ ಮಾಡಿವೆ. ಇದು ಕಾಂಗ್ರೆಸ್ಸಿನ ಟ್ರೇಡ್ ಮಾರ್ಕ್- ಚಿದಂಬರಂ ಬ್ರಾಂಡ್. ಕೆಲವು ಉದಾಹರಣೆ. ಎದೆ ಗಟ್ಟಿಮಾಡಿಕೊಂಡು ಓದಿ! ಚಿದಂಬರಂ, ಕಾಂಗ್ರೆಸ್ಸು, ಯುಪಿಎ 2ರ ಲೆಕ್ಕ! ‘ಇಂಧನ ಸಬ್ಸಿಡಿ’ -ಠಿ; 35 ಸಾವಿರ ಕೋಟಿ, ಜಿ4-2013ರದನ್ನು ‘ಮುಂದಿನ ವರ್ಷಕ್ಕೆ’ ರವಾನಿಸಿದರು. ಆಹಾರ ಸುರಕ್ಷಾ ಬಿಲ್ ಬಜೆಟ್​ನ 115,000 ಕೋಟಿ ‘ಹಣವನ್ನು’ ‘ಮುಂದಿನ ವರ್ಷಕ್ಕೆ’ ರವಾನಿಸಿದರು. 7ನೇ ಪೇ ಕಮಿಷನ್ ‘ದೆವ್ವ’ವನ್ನು ಎಬ್ಬಿಸಿ, ಮುಂದಿನ ಸರ್ಕಾರದ ತಲೆಗೆ ಕಟ್ಟಿದರು. ’One rank one Pension’ ಎಂಬ ಸೇನಾಸಂಬಂಧದ ಘೋಷಣೆಯ ಜಾರಿಯನ್ನು ‘ಮುಂದಿನ’ ಸರ್ಕಾರದ ಹೆಗಲಿಗೇರಿಸಿದರು. ಗೊಬ್ಬರ ಸಬ್ಸಿಡಿ ಖಾತೆಯ 4 ಸಾವಿರ ಕೋಟಿ ಹಣವನ್ನು ಪಾವತಿ ಮಾಡದೆಯೇ ಬಿಟ್ಟರು. ಕಲ್ಲಿದ್ದಲು ಇಲಾಖೆ ಮತ್ತು ಇತರ ಪಿಎಸ್​ಯುುಗಳ ದಾರಿಯಲ್ಲಿ 20 ಸಾವಿರ ಕೋಟಿ ಹಾಗೂ 3 ಬಿಲಿಯನ್ ಹಣವನ್ನು ’Interim dividend’ ಎಂದು ಘೋಷಿಸಿ, ಖರ್ಚು ಮಾಡದೆಯೇ ಸರ್ಕಾರಕ್ಕೆ ‘ಉಳಿಸಿ’ ಮುಂದಿನ ಸರ್ಕಾರಕ್ಕೆ ತಲೆ ಬಿಸಿ ಮಾಡಿದರು. ಆರ್​ಟಿಇ ಎಂಬ ಬೊಬ್ಬಾಟಕ್ಕೆ ಪ್ರಚಾರ ಗಿಟ್ಟಿಸಿ, ಕೇಂದ್ರ ಬಜೆಟ್​ನಲ್ಲಿ ಖರ್ಚಿನ ಬಾಬ್ತನ್ನೇ ತೋರಿಸಲಿಲ್ಲ! ‘ಜಿಎಸ್​ಟಿ ನಾವೇ ತಂದೆವು!’ ಎಂಬ ಸುಳ್ಳಿನ ಕಥೆ ಕೇಳಿ. ಭಾಷಣ ಬಿಗಿದದ್ದೇ ಬಂತು.

    ಕೇಂದ್ರದಲ್ಲಿ ಹಣವೇ ಇರಲಿಲ್ಲ. ಲೂಟಿಯಾಗಿತ್ತಲ್ಲ. 20 ಸಾವಿರ ಕೋಟಿ ಹಣ, ರಾಜ್ಯಗಳಿಗೆ ತೆರಬೇಕಾದ್ದು ತೆರಲೇ ಇಲ್ಲ! ‘ಆಧಾರ್’ಗೆ 50 ಸಾವಿರ ಕೋಟಿ ಖರ್ಚಾಗಿ, ಚಿದಂಬರಂ ಸಪೋರ್ಟ್ ಮಾಡಿದ್ದು ಎನ್​ಪಿಆರ್​ಗೆ-‘ನ್ಯಾಷನಲ್ ಪೀಪಲ್ಸ್ ರಿಜಿಸ್ಟರ್ಸ್​ಗೆ’. ಆಮೇಲೆ ಅದರ ವಿರುದ್ಧವೇ ತಂಟೆ, ಜಗಳ, ತಿರುಬೊಬ್ಬೆ. ಪೆಟ್ರೋಲ್ ಸಬ್ಸಿಡಿಯ ‘ಬಿಳಿಯಾನೆ’ ಸೃಷ್ಟಿಯೂ ಈ ಮಹಾಶಯರದೇ. ಆ ಖರ್ಚು ಎಲ್ಲಿಂದ, ಎತ್ತ? ಕೇಂದ್ರ ಹೇಗೆ ನಿರ್ವಹಿಸಬೇಕು?- ದಾರಿ ತೋರಿಸದೆ, ಮುಂದಿನ ಸರ್ಕಾರದ ಪೇಚಿಗೆ ಕಾರಣವಾದದ್ದು ಇದು. ವಸೂಲಾಗದ ಆದಾಯ ತೆರಿಗೆ ಹಣ, ಅದನ್ನು ‘ರೀಫಂಡ್’ ಅಂತ ತೋರಿಸಿ, ಯಾಮಾರಿಸಿದ್ದು-ಕಥೆ ಮುಂದುವರಿದೇ ಇದೆ. ಇದಕ್ಕೆ ’Shade’ ಇದ್ದವರು, ಆಗಿನ ಆರ್​ಬಿಐ ಗವರ್ನರ್ ರಾಜನ್ ಮತ್ತು ಮನಮೋಹನರು. ‘ಸ್ವಾಹಾ’ದಲ್ಲಿ ಪಾಲು ಸೋನಿಯಾ, ಕಾಂಗ್ರೆಸ್ಸು, ಅದರಲ್ಲಿ ಖಾಸಗಿ, ವ್ಯಾವಹಾರಿಕ, ಕೌಟುಂಬಿಕ, ಇದಲ್ಲದೆ ಅಧಿಕಾರಸ್ಥಾನದ ದುರುಪಯೋಗದಿಂದ ಮಗ ಕಾರ್ತಿಯವರಿಗೆ ದೇಶ-ವಿದೇಶಗಳಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ ಮಾಡಿಕೊಟ್ಟದ್ದು! ಮಾರನ್ ಕುಟುಂಬಕ್ಕೆ ಏರ್-ಸೆಲ್ ಹಗರಣದಲ್ಲಿ ಭ್ರಷ್ಟಾಚಾರಕ್ಕೆ ಸಹಾಯ ಮಾಡಿದ್ದು, (ಈಗ ಸಿಕ್ಕಿಕೊಂಡ ಮಾರನ್ Approver ಆಗಿ ತನಿಖೆಗೆ ಸಹಾಯ ಮಾಡುವುದಾಗಿ ಒಪ್ಪಿದ ವರದಿಯೂ ಇದೆ. ಇದು ನಿಜವಾದರೆ ಮಾರನ್ ಜೀವಕ್ಕೆ ಅಪಾಯವಿದೆ!) ಒಂದನೇ ಸಲ ಅಪರಾಧ, ಜೈಲು, ಕೊಲೆ, ಶಿಕ್ಷೆಗೆ ವ್ಯಕ್ತಿ ಸ್ವಲ್ಪ ನಾಚಿಕೆ, ಪಶ್ಚಾತ್ತಾಪ ಪಡಬಹುದು. ಆದರೆ ದಿನಂಪ್ರತಿ ಕೊಲೆ, ಹಾದರ, ಲೂಟಿ ಮಾಡುವವರಿಗೆ ನಾಚಿಕೆ, ಪಶ್ಚಾತ್ತಾಪ, ಪಾಪಪುಣ್ಯ ಪ್ರಜ್ಞೆ ಅಳಿಯುತ್ತದೆ.

    ಶೇಕ್ಸ್​ಪಿಯರ್​ನ ಮ್ಯಾಕ್​ಬೆತ್ ನಾಟಕದ ನಾಯಕನ ದುರಂತ ಇದು. ‘ಪಾಪಂ ಪ್ರಜ್ಞಾಂ ನಾಶಂಗತಿ’ ಎಂಬುದು ಮಹಾಭಾರತದ ಸಂಜಯನ ಉತ್ತರ. ‘ನಾನೇಕೆ ಪಾಂಡವರಿಗೆ ಅನ್ಯಾಯ ಮಾಡಿದೆ? ದ್ರೌಪದೀ ಮಾನಹರಣ ಪ್ರಸಂಗದಲ್ಲಿ ಅದು ಅನ್ಯಾಯ, ಅಧರ್ಮ, ಅಕ್ರಮ ಎಂದೇಕೆ ನನಗೆ ತೋಚಲಿಲ್ಲ?’ ಎಂದು ಪಾಪೀ ಧೃತರಾಷ್ಟ್ರ ಪ್ರಶ್ನಿಸಿದರೆ, ಸಂಜಯ ಹೇಳುವ ಮಾತು ಇದೆ- ‘ನಿಮಗೆ ಆತ್ಮಸಾಕ್ಷಿಯೇ ಸತ್ತಿತ್ತು’ ಅಂತ. ಛೋಪ್ರಾ ಮಹಾಭಾರತದ ತಪು್ಪಗಳನೇಕವಲ್ಲಿ ಕರ್ಣ, ಒಮ್ಮೆ, ‘ನಾನೇಕೆ ದ್ರೌಪದಿ ಸೀರೆ ಸುಲಿಯುವಂತೆ ಸಲಹೆ ಇತ್ತೆ? ನನಗೇನಾಗಿತ್ತು ಆಗ?’ ಅಂತ ಹೇಳಿ, ತನಗೆ ಮೀರಿದ ಯಾವುದೋ ಶಕ್ತಿ ಹಾಗೆ ಮಾಡಿಸಿತು ಎಂಬರ್ಥದಲ್ಲಿ ಸಮರ್ಥಿಸಿಕೊಳ್ಳುವ ನುಣುಚುವ ಮಾತು, ಮೂಲಕ್ಕೆ ವಿರುದ್ಧವಾಗಿ ಅಲ್ಲಿ ಬಂದಿದೆ. ‘ಅವನವನ ತಪ್ಪಿಗೆ ಅವನವನೇ ಹೊಣೆ’ ಎಂಬುದು ಕರ್ಮ ಸಿದ್ಧಾಂತ! Character is destiny ಎಂಬುದನ್ನು ಶೇಕ್ಸ್​ಪಿಯರನು ಹೇಳುತ್ತಾನೆ.

    ಬೌದ್ಧ ಜಾತಕ ಕಥೆಗಳಲ್ಲೂ, ಜೈನರ ಚಿಂತನೆಯಲ್ಲೂ ಕರ್ಮ ಸಿದ್ಧಾಂತ ಸ್ಥಾನ ಪಡೆದಿದೆ. ಅದು ಬಿಟ್ಟು ಚಿದಂಬರಂ ಈಗ, ‘ನಾನಾಗಿ ಏನೂ ಮಾಡಲಿಲ್ಲ, ಸಂದರ್ಭ ಮಾಡಿಸಿತು’ ಎಂಬುದು ಕಮ್ಯುನಿಷ್ಟರ ಹೊಣೆಗೇಡಿ ದಾರಿ. ‘ರಾಜಾ ರಾಷ್ಟ್ರಗತಂ ಪಾಪಂ’, ಜನ ಮಾಡಿದ ಪಾಪಕ್ಕೆಲ್ಲ, ದಂಡಿಸದೆ ಬಿಟ್ಟ ರಾಜ, ಸರ್ಕಾರವೇ ಹೊಣೆ- ಇದು ಮಹಾಭಾರತ! ಒಬ್ಬನ ತಪ್ಪಿಗೆ, ಯಾರದೋ ಶಾಪ, ಉದ್ಧಾರಕ್ಕೆ ಯಾರದೋ ಅನುಗ್ರಹ ಅಂತ ಸೇರಿಸಿದರೆ, ವ್ಯಕ್ತಿಗೆ ಕರ್ಮವು ತಟ್ಟುವುದಿಲ್ಲ. ಆದರೆ ಕರ್ಮ ಬಿಡುವುದಿಲ್ಲ! ಏಸು ಪ್ರತಿಮೆ ಪ್ರಕರಣದ ರೂವಾರಿಗೆ ಒಬ್ಬ ಅವರ ಕಡೆಯ ವಿವೇಕಿ ಹೇಳಿದರು- ‘ನಿಮಗೆ ಕರ್ಮ ಬಿಡುವುದಿಲ್ಲ’ ಅಂತ. ಕರ್ಮ ಏನು ಮಾಡುತ್ತದೆ? ತಲೆ ಕೆಡಿಸುತ್ತದೆ. ತಲೆಗೆಟ್ಟವನು ತಪು್ಪ ಮಾಡುತ್ತಲೇ ಹೋಗಿ, ‘ಉರಿದು’ ಸಾಯುತ್ತಾನೆ. ದೃತರಾಷ್ಟ್ರನಂತೆ! ನೇಣಿಗೇರಿದ ಪ್ರಧಾನಿಗಳಂತೆ!

    ದಿನಾ ಪ್ರಾಣಿಗಳನ್ನು ಕೊಲ್ಲುವ ಕಟುಕನಿಗೆ ಒಮ್ಮೆ ತಾಯಿ-ತಂದೆಯರ ತಲೆ ತೆಗೆಯಲೂ ಕಷ್ಟವಾಗುವುದಿಲ್ಲ. ‘ಕೊಲ್ಲು’ ಎಂಬ ದೇಶದ ಮಾತುಗಳೂ ‘ಗುರು’ಗಳೂ ಈಗಲೂ ಆಡುವ ಮಾತು. ಕಿಡಿಗೇಡಿ ಕೃತ್ಯಗಳನ್ನು ಈ ದೃಷ್ಟಿಯಿಂದ ನೋಡಿ. ಬ್ರಿಟಿಷರ ಕಾಲದಲ್ಲಿ ಕೆಲವರ ವಕ್ರರೀತಿಯಿಂದ ಇಡೀ ದಕ್ಷಿಣ ಭಾರತೀಯರಿಗೇ ‘ಮದ್ರಾಸೀ’ ಎಂಬ ಪಟ್ಟ ದೊರೆಯಿತು. ಅದಕ್ಕೆ ಚಿದಂಬರಂ ಈಗಿನ ಜೀವಂತ ಉದಾಹರಣೆಯಾಗಬೇಕೆ? ಚಿದಂಬರಂ ಅವರ ರಾಷ್ಟ್ರದ್ರೋಹದಲ್ಲಿ ಯಾರೆಲ್ಲ ಪಾಲುಗಾರರು? ಅವರೆಲ್ಲ ಈಗಣ ಕೇಂದ್ರದಲ್ಲಿ ಐಎಎಸ್, ಐಎಫ್​ಎಸ್, ಐಪಿಎಸ್, ಇತ್ಯಾದಿ ಸ್ಥಾನಗಳಲ್ಲಿದ್ದೇ ಇದ್ದಾರೆ. ಕರ್ನಾಟಕದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ‘ಇವರ ಜುಟ್ಟು ಅವರ ಕೈಲಿ, ಅವರ ಜುಟ್ಟು ಇವರ ಕೈಲಿ’ ಅಂತ ಇರುವುದರಿಂದಲೇ ಪರಸ್ಪರ ಬಚಾವ್ ಆಗುತ್ತಿದ್ದಾರೆ. ಲೋಕಾಯುಕ್ತ, ಕೋರ್ಟ್, ಸಿಬಿಐ, ಸಿಸಿಬಿ, ಇಡಿ ಏನೂ ಮಾಡಲಾಗದ ಪರಿಸ್ಥಿತಿ! ಅದು ಸೋನಿಯಾ ಭದ್ರತೆಗೆ, ದರ್ಪಕ್ಕೆ ಕಾರಣ! ಇಟಲಿಗೆ ವಿಮಾನ ಯಾವಾಗ ಹಾರಾಡುತ್ತೋ? ಹೇಳಬಲ್ಲ ಜೋಯಿಸರು ಯಾರು?

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts