More

    ತಂಬಾಕು ನಿಯಂತ್ರಣಕ್ಕೆ ದಾಳಿ ಹೆಚ್ಚಿಸಿ

    ಚಿತ್ರದುರ್ಗ: ತಂಬಾಕು ನಿಯಂತ್ರಿಸಲು ವಿವಿಧ ಇಲಾಖೆ ಅಧಿಕಾರಿಗಳ ತಂಡ ಸಮನ್ವಯದೊಂದಿಗೆ ನಿಯಮಿತ ದಾಳಿ ನಡೆಸುವ ಮೂಲಕ ಕೋಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಸೂಚಿಸಿದರು.

    ಶುಕ್ರವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

    ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಪಿಡಿಒಗಳು ತಂಬಾಕು ನಿಯಂತ್ರಣ ಕುರಿತು ಪ್ರಚಾರ ಪಡಿಸುವ ಕೆಲಸವಾಗಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಟಿಎಚ್‌ಒ, ಬಿಇಒಗಳು ಶಾಲಾ-ಕಾಲೇಜು ಆವರಣದಿಂದ 100 ಮೀಟರ್ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ತಾಕೀತು ಮಾಡಿದರು.

    ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ಮಾತನಾಡಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಜಿಟಲ್ ಬೋರ್ಡ್‌ಗಳಲ್ಲಿ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

    2022ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 43 ಶಾಲಾ-ಕಾಲೇಜುಗಳನ್ನು ತಂಬಾಕು ಮುಕ್ತವೆಂದು ಘೋಷಿಸಲಾಗಿದೆ. ನಿಯಂತ್ರಣ ಸಂಬಂಧ ಅಕ್ಟೋಬರ್‌ನಿಂದ ಡಿಸೆಂಬರ್ ಅಂತ್ಯದೊಳಗೆ 780 ಪ್ರಕರಣ ದಾಖಲಿಸಿದ್ದು, 90 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಡಿಎಚ್‌ಒ ಡಾ.ಆರ್.ರಂಗನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ, ಅಬಕಾರಿ ಅಧಿಕಾರಿ ವಿಶ್ವನಾಥ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಸಾಮಾಜಿಕ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts