More

    ಜಾನಪದ ಸಾಧನಗಳಿಂದ ಭೌತಿಕ ಜ್ಞಾನ ಹೆಚ್ಚಳ

    ತೀರ್ಥಹಳ್ಳಿ: ಏಕತೆಯಲ್ಲಿ ವಿವಿಧತೆಯನ್ನು ಉಳಿಸಿಕೊಂಡಿರುವ ಭಾರತದಲ್ಲಿ, ಈ ನಾಡಿನ ಸಂಪತ್ತಾಗಿರುವ ಜಾನಪದ ವಸ್ತುಸಂಗ್ರಹಾಲಯದ ಪ್ರಸ್ತುತತೆ ಎದ್ದು ಕಾಣುತ್ತದೆ. ಇದರಿಂದ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಯ ಜತೆಗೆ ಆರ್ಥಿಕವಾಗಿಯೂ ಮುಂದುವರಿಯಲು ಸಾಧ್ಯ ಎಂದು ಹಿರಿಯ ಜಾನಪದ ಕಲಾವಿದ ಉಬ್ಬೂರು ರಾಮಣ್ಣ ಹೇಳಿದರು.
    ಜಾನಪದ ಪರಿಷತ್ ಮಂಗಳವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಅವರು, ಜನಪದ ಸಾಧನಗಳ ಮೂಲಕ ಭೌತಿಕ ಜ್ಞಾನವನ್ನು ವಿಶ್ವಕ್ಕೇ ಸಾರಬಹುದಾಗಿದೆ ಎಂದು ಹೇಳಿದರು.
    ಭಾರತದ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ಕೆಲವು ಶತಮಾನಗಳ ನಾಗರಿಕತೆಯ ಚರಿತ್ರೆ ನಿಖರವಾಗಿ ತಿಳಿದು ಬರುವುದಿಲ್ಲ. ಪ್ರಾಚೀನ ಇತಿಹಾಸಕಾರರ ಪ್ರಕಾರ ಸಿಂಧು ನದಿಯ ಸಮಕಾಲೀನ ನಾಗರಿಕತೆ ಹಠಾತ್ತನೆ ಇಲ್ಲವಾಗುವುದರ ಹಿಂದೆ ಎಂತಹುದೋ ಪರಿವರ್ತನೆ ನಡೆದಿರಬೇಕು ಎಂದರು.
    ಆಯಾ ಕಾಲದ ವಸ್ತುಗಳ ಸಂಗ್ರಹ ಕ್ರಮಬದ್ಧವಾಗಿ ನಡೆದು ಅವುಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರೆ ಕಾಲಗರ್ಭದಲ್ಲಿ ಆಗಿ ಹೋದ ಮಹತ್ವದ ಮಾಹಿತಿಗಳು ಇಂದಿನ ತಲೆಮಾರಿಗೆ ದಾಖಲೆಯಾಗಿ ದೊರೆಯುತ್ತಿತ್ತು ಎಂದರು.
    ಸಮ್ಮೇಳನ ಉದ್ಘಾಟಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗ್ರಾಮೀಣರಿಂದ ಉಳಿದಿರುವ ಜಾನಪದ ಸಾಹಿತ್ಯ ಎಲ್ಲಿಂದ ಮತ್ತು ಯಾರಿಂದ ಆರಂಭವಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ನಮ್ಮೆದುರಿಗಿರುವ ಎಲ್ಲ ವಸ್ತುಗಳು ಜಾನಪದದ ಅಸ್ತಿತ್ವವನ್ನು ಧೃಡೀಕರಿಸುತ್ತವೆ. ಗ್ರಾಮೀಣ ಬದುಕಿನ ಅಡುಗೆ ಪರಿಕರಗಳು ಹೀಗೆ ಪ್ರತಿಯೊಂದು ಹಂತದಲ್ಲೂ ಜಾನಪದ ಸಾಹಿತ್ಯವನ್ನು ಕಾಣಬಹುದಾಗಿದೆ ಎಂದರು.
    ತೀರ್ಥಹಳ್ಳಿ ಸುತ್ತಮುತ್ತಲಿನ ಜಾನಪದ ವಿಷಯ ಕುರಿತು ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ಜೆ.ಕೆ.ರಮೇಶ್ ವಹಿಸಿದ್ದರು. ಜಾನಪದ ತಜ್ಞ ಶಿವಾನಂದ ಕರ್ಕಿ ಹಾಗೂ ಚಿಂತಕ ನೆಂಪೆ ದೇವರಾಜ್ ವಿಷಯ ಮಂಡನೆ ಮಾಡಿದರು.
    ಜನಪದ ಕಲಾ ಪ್ರದರ್ಶನದಲ್ಲಿ ಏಕತಾಳ ಕಂಸಾಳೆ, ಬೀಸುವ ರೂಪ ಮತ್ತು ಹಾಡು, ಅಂಟಿಕೆ-ಪಂಟಿಕೆ, ಹೋಳಿ ಕುಣಿತ, ಲಂಬಾಣಿ ಕುಣಿತ, ಗುಡ್ಡಗಾಡು ನೃತ್ಯ, ದಾಸಯ್ಯ ಪದ, ಡೊಳ್ಳು ಕುಣಿತ, ಚೆಂಡೆ, ಮಹಿಳಾ ಡೊಳ್ಳು, ಜಾನಪದ ಹಾಡು, ಜನಪದ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
    ತಾಲೂಕು ಜಾನಪದ ಪರಿಷತ್‌ನ ಅಧ್ಯಕ್ಷೆ ಲೀಲಾವತಿ ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಗೀತಾ ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಎಚ್.ಎನ್.ಈಶ್ವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts