More

    ನಿವಾರಣೆ ಆಗಿಲ್ಲ ತಿಪಟೂರು ರೈತರ ಸಮಸ್ಯೆ ; ಜಿಲ್ಲಾಧಿಕಾರಿ ಅಂಗಳ ತಲುಪಿದ ಬೈ ಪಾಸ್ ರಸ್ತೆ ಕಾಮಗಾರಿ, ಪರಿಹಾರದ ವ್ಯಾಜ್ಯ

    ತಿಪಟೂರು: ಹುಚ್ಚಗೊಂಡನಹಳ್ಳಿ ಬಳಿ ನಡೆಯುತ್ತಿರುವ ಉದ್ದೇಶಿತ ಬೈಪಾಸ್ ರಸ್ತೆ ಕಾಮಗಾರಿ ಮತ್ತು ಪರಿಹಾರ ವ್ಯಾಜ್ಯ ಜಿಲ್ಲಾಧಿಕಾರಿ ಅಂಗಳ ತಲುಪಿದ್ದು, ರೈತರ ಗೊಂದಲ ಸಂಪೂರ್ಣ ನಿವಾರಣೆ ಆಗಿಲ್ಲ.

    ಜೂ.11ರಂದು ಪರಿಹಾರ ನೀಡದೆ ಖಾಸಗಿ ಜಮೀನಿನಲ್ಲಿ ಕಾಮಗಾರಿ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರರಿಗೆ ಅನುಮತಿ ನೀಡಿದ್ದನ್ನು ವಿರೋಧಿಸಿದ ರೈತ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೈತ ಮುಖಂಡರು ಜಾಥಾ ಮೂಲಕ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ ಬೆಳವಣಿಗೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ನೇತೃತ್ವದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ಮುಖಂಡರ ಸಭೆ ಕರೆದು ಚರ್ಚಿಸಿದರು.

    ಹುಚ್ಚಗೊಂಡನಹಳ್ಳಿ ಸ.ನಂ.127 ಬಗರ್‌ಹುಕುಂ ಜಮೀನಾಗಿದ್ದು, ಹದ್ದುಬಸ್ತು ಆಗಿಲ್ಲ. ಮತ್ತು 121/1 ಎ, ಜಮೀನಿನ ಜೆಎಂಸಿ ಪ್ರತಿ ನೀಡಿಲ್ಲ, ಹೀಗಿದ್ದರೂ ರಸ್ತೆಗಾಗಿ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಆರ್‌ಟಿಸಿ ಕೊಡುವಲ್ಲಿ ವಿಳಂಬ ಮಾಡುವಂತಿಲ್ಲ. ಮತ್ತು ಆರ್‌ಟಿಸಿ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡಿದರೂ, ಭೂ ಸ್ವಾಧೀನ ಪರಿಹಾರ ಮಂಜೂರು ಮಾಡಬಹುದು ಎಂದು ಭೂ ಸ್ವಾಧೀನಾಧಿಕಾರಿಗಳಿಗೆ ಸೂಚಿಸಿದರು.

    ಜೆಎಂಸಿ (ಜಂಟಿ ಸರ್ವೇ) ಪ್ರತಿಯನ್ನು ಭೂಮಿ ಕಳೆದುಕೊಳ್ಳುವ ರೈತರಿಗೆ ತಕ್ಷಣ ಕೊಡಬೇಕು ಎಂದು ಭೂ ಸ್ವಾಧೀನಾಧಿಕಾರಿಗಳಿಗೆ ಡಿಸಿ ಹೇಳಿದರು. ಪರಿಹಾರದ ಹಣ ಪಡೆಯಲು ಇನ್ನಿಲ್ಲದ ಷರತ್ತು ವಿಧಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಪರಿಹಾರದ ಹಣ ಪಡೆಯಲು ಅವಶ್ಯವಿರುವ ಆರ್‌ಟಿಸಿ ಮ್ಯೂಟೇಷನ್, ಇಸಿ ವಂಶವೃಕ್ಷ ಸೇರಿ ಒಟ್ಟು 16 ಭೂ ದಾಖಲೆಗಳನ್ನು ಹೊಂದಿಸಿಕೊಳ್ಳುವ ಜವಾಬ್ದಾರಿ ಭೂ ಸ್ವಾಧೀನಾಧಿಕಾರಿಗಳದ್ದು ಎಂದು ಸ್ಪಷ್ಟಪಡಿಸಿ, ರಸ್ತೆಗಾಗಿ ಭೂಮಿ ಕಳೆದುಕೊಳ್ಳುವ ರೈತರು ಕೇವಲ ಬ್ಯಾಂಕ್ ಖಾತೆ ನಂಬರ್, ಇಂಡೆಮ್ನಿಟಿ ಬಾಂಡ್, ಒದಗಿಸಿದರೆ ಕೇವಲ 2-3 ದಿನದಲ್ಲಿ ಹಣ ಪಾವತಿಯಾಗುವುದು ಎಂದರು.

    ಅವಾರ್ಡ್ ಆಗದ ಕಾಮಗಾರಿಗೆ ಕೈ ಹಾಕುವಂತಿಲ್ಲ: ಉದ್ದೇಶಿತ ಕಾಮಗಾರಿಗೆ ಕೆಲವೆಡೆ ಅವಾರ್ಡ್ ಆಗಿಲ್ಲದಿದ್ದರೂ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಡಿಸಿ, ಅನ್ಯಾಯವಾಗಿರುವುದು ನಿಜ, ಇನ್ನು ಮುಂದೆ ಅವಾರ್ಡ್ ಆಗದ ಕಾಮಗಾರಿಗೆ ಯಾವುದೇ ಕಾರಣಕ್ಕೂ ಕೈ ಹಾಕುವಂತಿಲ್ಲ ಎಂದು ಎಚ್ಚರಿಸಿದರು. ಕಾಮಗಾರಿ ರದ್ದಾದ ಹಿನ್ನೆಲೆಯಲ್ಲಿ 2009ರ ಹಳೇ ಬೈ ಪಾಸ್ ರಸ್ತೆಗಾಗಿ ವಶಪಡಿಸಿಕೊಳ್ಳಲಾಗಿದ್ದ ಜಮೀನನ್ನು ಹಿಂದಿನ ಉಪವಿಭಾಗಾಧಿಕಾರಿ ಹಣ ಕಟ್ಟಿ, ವಾಪಸ್ ಪಡೆಯಲು ಸೂಚಿಸಿದ್ದರು, ಇದರಂತೆ ಹಣ ಕಟ್ಟಲಾಗಿದೆ. ಈಗ ಈ ಜಮೀನು ನೋಟಿಫಿಕೇಷನ್ ಆಗಿದ್ದು, ಇದು ಸರ್ಕಾರದ ಸ್ವತ್ತು ಎನ್ನುತ್ತಿದ್ದಾರೆ ಎಂದು ರೈತ ಮುಖಂಡರಾದ ಮನೋಹರ್ ಪಟೇಲ್, ನಾಗೇಶ್ ಬೇಸರ ವ್ಯಕ್ತಪಡಿಸಿದರು.

    ಭೂ ಪರಿಹಾರದ ಗೊಂದಲ: 2009ರಲ್ಲಿ ಹಳೇ ಬೈಪಾಸ್ ರಸ್ತೆ ನಿರ್ಮಾಣಕ್ಕೆ ನೋಟಿಫೈ ಮಾಡಲಾದ ಜಮೀನು ಸೇರಿ ಪಕ್ಕದಲ್ಲಿರುವ ಜಮೀನನ್ನು ಉದ್ದೇಶಿತ ಹೊಸ ಬೈಪಾಸ್ ಕಾಮಗಾರಿಗೆ ವಶಪಡಿಸಿಕೊಳ್ಳಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಭೂ ಕಾಯ್ದೆ 53/1 ರ ಮೂಲಕ ನೋಟಿಫಿಕೇಶನ್ ಆಗಿದ್ದರೆ ಈಗ ಯಾರೂ, ಏನೂ ಮಾಡಲು ಸಾಧ್ಯವಿಲ್ಲ. ಭೂಮಿ ಬಿಟ್ಟುಕೊಡಬೇಕು. ಸರ್ಕಾರ ಮನಸ್ಸು ಮಾಡಿ ಡಿ-ನೋಟಿಫಿಕೇಶನ್ ಮಾಡಿದರೆ ಮಾತ್ರ ಜಮೀನು ವಾಪಸ್ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದರು. ವಶಪಡಿಸಿಕೊಳ್ಳಲಾಗುತ್ತಿರುವ ಭೂಮಿಗೆ ಪರಿಹಾರದಲ್ಲಿ ವ್ಯತ್ಯಾಸವಾಗಿದ್ದರೆ, ಎಲ್ಲರೂ ಒಟ್ಟಿಗೇ, ಒಂದೇ ವಿಷಯಕ್ಕೆ ಸಂಬಂಧಿಸಿದ ಕಾರಣ ನೀಡಿ ಆರ‌್ಬಿಟ್ರೇಶನ್ ಸಲ್ಲಿಸಿದರೆ ಎರಡು, ಮೂರು ತಿಂಗಳ ಒಳಗೆ ರೈತರಿಗೆ ಒಳಿತಾಗುವಂತೆ ನ್ಯಾಯ ಒದಗಿಸಲಾಗುವುದು. ಈ ಕಾರಣಕ್ಕಾಗಿ ಕಾಮಗಾರಿಗೆ ಅಡ್ಡಿಪಡಿಸುವಂತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts