More

    ಮೈಸೂರಿನಲ್ಲಿ ಮೂರು ದಿನ ಉಷ್ಣಮಾರುತ

    ಮೈಸೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿಂದಾಗೆ ಬೇಸಿಗೆ ಮಳೆ ಸುರಿದರೂ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯಲೇ ಇಲ್ಲ. ಜಿಲ್ಲೆಯಲ್ಲಿ ಒಂದೆರಡು ದಿನ ಮಳೆ ಸುರಿದರೂ ಭೂಮಿ ತಂಪಾಗುವಷ್ಟು ಮಳೆಯಾಗಲಿಲ್ಲ. ಹೀಗಾಗಿ ದಿನೇ ದಿನೆ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಉಷ್ಣಮಾರುತ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮೇ 3 ರಿಂದ 6ವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡರೂ ಮಳೆ ಸುರಿಯುವ ಯಾವುದೇ ಮುನ್ಸೂಚನೆ ಇಲ್ಲ. ಈ ಅವಧಿಯಲ್ಲಿ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಉಷ್ಣಮಾರುತ ಬೀಸುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಜಿಲ್ಲೆಯಲ್ಲಿ ಮೇ 3 ರಂದು ಕನಿಷ್ಠ 18, ಗರಿಷ್ಠ 38, ಮೇ 4 ರಂದು ಕನಿಷ್ಠ 17, ಗರಿಷ್ಠ 38, ಮೇ 6 ರಂದು ಕನಿಷ್ಠ 17 ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾ ಗುವ ಸಾಧ್ಯತೆ ಇದೆ.

    ಉಷ್ಣ ಮಾರುತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆರೆಂಜ್ ಅಲರ್ಟ್ ಆಗಿರುವ ಕಡೆಗಳಲ್ಲಿ ದೀರ್ಘಾವಧಿವರೆಗೆ ಸೂರ್ಯನಿಗೆ ಮೈಒಡ್ಡಿಕೊಳ್ಳುವ ಅಥವಾ ಭಾರಿ ಕೆಲಸ ಮಾಡುವ ಜನರಲ್ಲಿ ಉಷ್ಣಾಂಶ ಏರಿಕೆಯಿಂದ ಉಂಟಾಗುವ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಶಿಶುಗಳು, ವೃದ್ಧರು ಹಾಗೂ ದೀರ್ಘಕಾಲದ ಕಾಯಿಲೆ ಇರುವ ಜನರು ಜಾಗೃತಿ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

    ರೈತರಿಗೆ ಸಲಹೆ

    ಬಿಸಿಲಿನ ತಾಪ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಯಾವ ರೀತಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎಂಬ ಕುರಿತು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ರೈತರಿಗೆ ಅಗತ್ಯ ಸಲಹೆ ನೀಡಿದ್ದಾರೆ.

    ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳ ೇಕು. ಆವಿಯಾಗುವಿಕೆಯ ಮೂಲಕ ನೀರಿನ ನಷ್ಟವನ್ನು ಕಡಿಮೆ ಮಾಡಲು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ತಾಪಮಾನ ತಡೆದುಕೊಳ್ಳಬಲ್ಲ, ಬರ ನಿರೋಧಕ ಅಥವಾ ಶಾಖ ಸಹಿಷ್ಣು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    ಜಾನುವಾರುಗಳಿಗೆ ಸಾಕಷ್ಟು ನೆರಳು, ನೀರು ದೊರೆಯುವಂತೆ ಮಾಡಬೇಕು. ಬಿಸಿಲು ಹೆಚ್ಚಾಗಿರುವುದರಿಂದ ಮಧ್ಯಾಹ್ನ ರಾಸುಗಳಿಗೆ ನೀರು ಹೊಡೆಯಬೇಕು, ಕೊಟ್ಟಿಗೆಯ ನೆಲ ಹಾಗೂ ಗೋಡೆಗಳಿಗೂ ನೀರು ಹೊಡೆಯಬೇಕು. ರಾಸುಗಳನ್ನು ಬೆಳಗ್ಗೆ ಹಾಗೂ ಸಂಜೆ ಮಾತ್ರ ಹೊರಗೆ ಮೇಯಲು ಬಿಡಬೇಕು. ಕೋಳಿ ಮನೆಗಳಲ್ಲಿ ಸಾಕಷ್ಟು ನೆರಳು ಹಾಗೂ ಗಾಳಿಯಾಡುವಂತೆ ಮಾಡಬೇಕು. ಕೋಳಿ ಮನೆಯ ಪರಿಸರವನ್ನು ತಂಪಾಗಿಸಲು ಫ್ಯಾನ್ ಅಥವಾ ಮಿಸ್ಟಿಂಗ್ ಸಿಸ್ಟಮ್ ಅಳವಡಿಸುವುದು ಸೂಕ್ತ. ಪಕ್ಷಿಗಳಿಗೆ ಕುಡಿಯಲು ತಂಪಾದ ಹಾಗೂ ಶುದ್ಧವಾದ ನೀರು ನೀಡಬೇಕು ಎಂದು ಸಲಹೆ ನೀಡಲಾಗಿದೆ.

    ಜನರಿಗೆ ಹವಾಮಾನ ಇಲಾಖೆ ಸಲಹೆ

    • ಮಧ್ಯಾಹ್ನ 12 ರಿಂದ 3ರ ಅವಧಿಯಲ್ಲಿ ಹೊರಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು
    • ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು.
    • ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು
    • ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿ ಬಳಸಬೇಕು
    • ಹೊರಗಿನ ತಾಪಮಾನ ಹೆಚ್ಚಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು.
    • ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯ ಸೇವಿಸಬಾರದು
    • ಮನೆಯಲ್ಲಿ ತಯಾರಿಸಿದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ ದೇಹವನ್ನು ಮರು ಜಲೀಕರಣಗೊಳಿಸಬೇಕು.
    • ಹೆಚ್ಚಿನ ಪ್ರೋಟೀನ್ ಆಹಾರ ಹಾಗೂ ಹಳೆಯ ಆಹಾರವನ್ನು ಸೇವಿಸಬಾರದು
    • ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಪ್ರಾಣಿಗಳನ್ನು ಬಿಡಬಾರದು
    • ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು
    • ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಬೇಕು.
    • ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts