More

    ಇದು ಮೊದಲೇನಲ್ಲ…; ಸ್ಟಾರ್ ಮಕ್ಕಳ ನಶೆಯ ಕಥೆ

    ಬಾಲಿವುಡ್ ನ ‘ಕಿಂಗ್ ಖಾನ್’ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ರೇವ್ ಪಾರ್ಟಿಯೊಂದರಲ್ಲಿ ಡ್ರಗ್ಸ್ ನೊಂದಿಗೆ ಸಿಕ್ಕಿಬಿದ್ದಿರುವುದು ಇಡೀ ದೇಶದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದೆ. ಬಾಲಿವುಡ್ ಮತ್ತು ಡ್ರಗ್ಸ್ ನಂಟು, ಅದರಲ್ಲೂ ಬಾಲಿವುಡ್ ನ ಸ್ಟಾರ್ ಮಕ್ಕಳ ಈ ವ್ಯಸನದ ಬಗ್ಗೆ ವ್ಯಾಪಕವಾದ ಚರ್ಚೆಯಾಗುತ್ತಿದೆ. ಆರ್ಯನ್ ಬಂಧನವಾಗಿರುವುದರಿಂದ ಇನ್ನಾದರೂ ಸ್ಟಾರ್ ಮಕ್ಕಳು ಸ್ವಲ್ಪ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಡ್ರಗ್ಸ್ ಎಂಬ ಪಿಡುಗು, ಬಾಲಿವುಡ್ ಗೆ ಹೊಸದೂ ಅಲ್ಲ, ಆರ್ಯನ್ ಬಂಧನದಿಂದ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯೂ ಯಾರಿಗೂ ಇಲ್ಲ!

    ಬಹುಶಃ ಬಾಲಿವುಡ್ ಮತ್ತು ಡ್ರಗ್ಸ್ ನಂಟಿನ ವಿಷಯ ಮೊದಲಿಗೆ ಚಾಲ್ತಿಗೆ ಬಂದಿದ್ದು ಸಂಜಯ್ ದತ್ ಅವರಿಂದ. ಸುನೀಲ್ ದತ್ ಮಗ ಸಂಜಯ್ ಈ ವಿಷಯವಾಗಿ ಬಂಧನವಾಗದಿದ್ದರೂ, ಡ್ರಗ್ ಅಡಿಕ್ಟ್ ಆಗಿದ್ದರು ಎಂಬುದು ಹೊಸ ವಿಷಯವೇನಲ್ಲ. ಖುದ್ದು ಸಂಜಯ್, ಕಾಲೇಜ್ ನಲ್ಲಿರುವಾಗಲೇ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಒಂಬತ್ತು ವರ್ಷಗಳ ಕಾಲ ಅಡಿಕ್ಟ್ ಆಗಿದ್ದ ವಿಷಯವನ್ನು ಹಲವು ಬಾರಿ ಹೇಳಿಕೊಂಡಿದ್ದಾರೆ. ಕೊನೆಗೆ ಅಮೆರಿಕಾದ ಪುನರ್ವಸತಿ ಕೇಂದ್ರದಲ್ಲಿ ಹಲವು ತಿಂಗಳ ಕಾಲ ಇದ್ದು, ಡ್ರಗ್ಸ್ ನಿಂದ ದೂರವಾದ ವಿಷಯವನ್ನು ‘ಸಂಜು’ ಎಂಬ ಬಯೋಪಿಕ್ ನಲ್ಲೂ ವಿವರವಾಗಿ ತೋರಿಸಲಾಗಿದೆ.

    ಸಂಜಯ್ ದತ್ ಸುಧಾರಿಸಿದ ನಂತರ ಬಾಲಿವುಡ್ ನಲ್ಲಿ ಡ್ರಗ್ಸ್ ವಿಷಯ ಅಷ್ಟಾಗಿ ಸುದ್ದಿಯಾಗಿರಲಿಲ್ಲ. 2001ರ ಮೇ 05ರಂದು ಬಾಲಿವುಡ್ ಸ್ಟಾರ್ ನಟ ಫಿರೋಜ್ ಖಾನ್ ಮಗ ಫರ್ದೀನ್ ಖಾನ್ 9 ಗ್ರಾಮ್ ಕೊಕೇನ್ ಜತೆಗೆ ಸಿಕ್ಕಿಬಿದ್ದ ನಂತರ ಹೊಸ ಅಧ್ಯಾಯ ಪ್ರಾರಂಭವಾಯಿತು. ಅಲ್ಲಿಂದ ಈ 20 ವರ್ಷಗಳಲ್ಲಿ, ಬಾಲಿವುಡ್ ನ ಸಾಕಷ್ಟು ನಟ-ನಟಿಯರು, ಅದರಲ್ಲೂ ಸ್ಟಾರ್ ಮಕ್ಕಳು ಡ್ರಗ್ಸ್ ಸಂಬಂಧವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ರಾಜ್ ಬಬ್ಬರ್ ಮತ್ತು ದಿವಂಗತ ಸ್ಮಿತಾ ಪಾಟೀಲ್ ಅವರ ಮಗ ಪ್ರತೀಕ್ ಬಬ್ಬರ್ ಸಹ ತಾನು 13ನೇ ವಯಸ್ಸಿಗೆ ಡ್ರಗ್ಸ್ ತೆಗೆದುಕೊಂಡಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಸುದ್ದಿಯಾಗಿತ್ತು.

    ಇದು ಮೊದಲೇನಲ್ಲ...; ಸ್ಟಾರ್ ಮಕ್ಕಳ ನಶೆಯ ಕಥೆ

    ಬರೀ ಪುತ್ರರಷ್ಟೇ ಅಲ್ಲ, ಕೆಲವು ಸ್ಟಾರ್ ನಟರ ಪುತ್ರಿಯರ ಹೆಸರುಗಳು ಸಹ ಡ್ರಗ್ಸ್ ಜತೆಗೆ ಥಳುಕು ಹಾಕಿಕೊಂಡಿವೆ. ಕಳೆದ ವರ್ಷವಷ್ಟೇ, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಡ್ರಗ್ಸ್ ವಿಷಯವಾಗಿ ಎನ್ ಸಿಬಿ ವಿಚಾರಣೆ ಎದುರಿಸಿ ಬಂದಿದ್ದರು. ಶಕ್ತಿ ಕಪೂರ್ ಮಗಳು ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಭಾರತೀ ಸಿಂಗ್ ಎನ್ ಸಿಬಿಗೆ ವಿವರಣೆ ನೀಡಿ ಬರಬೇಕಾಯಿತು. ಇವರೆಲ್ಲ ಡ್ರಗ್ ಅಡಿಕ್ಟ್ ಗಳೇನಲ್ಲ. ಆದರೆ, ಆಗಾಗ ಡ್ರಗ್ಸ್ ತೆಗೆದುಕೊಳ್ಳಬಹುದು ಎಂಬ ಗುಮಾನಿಯಂತೂ ಇದ್ದೇ ಇದೆ. ಇದಲ್ಲದೆ ಅರ್ಜುನ್ ರಾಂಪಾಲ್, ಅರ್ವನ್ ಕೋಹ್ಲಿ ಇನ್ನಿತರರು ಡ್ರಗ್ಸ್ ವಿಚಾರವಾಗಿ ಎನ್ ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

    ಬಾಲಿವುಡ್ ಗೂ ಡ್ರಗ್ಸ್ ಜಾಲಕ್ಕೂ ದೊಡ್ಡ ನಂಟಿದೆ ಎಂದು ಆರೋಪಿಸಿದ್ದ ಕಂಗನಾ ರಣಾವತ್, ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಡ್ರಗ್ಸ್ ಗೆ ದಾಸಿಯಾಗಿದ್ದರಂತೆ. ರಣಬೀರ್ ಕಪೂರ್ ಡ್ರಗ್ಸ್ ಸೇವಿಸಿಯೇ ‘ರಾಕ್ ಸ್ಟಾರ್’ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹೀಗೆ ಇನ್ನೂ ಅನೇಕ ಜನಪ್ರಿಯ ಸೆಲೆಬ್ರಿಟಿಗಳು ಡ್ರಗ್ಸ್ ಸಹವಾಸ ಮಾಡಿ ಸುಧಾರಿಸಿದ್ದಿದೆ. ನಾಳೆ ಆರ್ಯನ್ ಸಹ ಸುಧಾರಿಸಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ದೊಡ್ಡ ಸ್ಟಾರ್ ಆಗಬಹುದು. ಆದರೆ, ಈ ಅಪವಾದ? ಸಾಮಾಜಿಕ ಸಂದೇಶ ಸಾರುವ ಮಂದಿಯೇ, ಸಾಮಾಜಿಕ ಪಿಡುಗಿನ ವಿರುದ್ಧ ಸಿನಿಮಾದಲ್ಲಿ ಸಮರ ಸಾರುವ ಸ್ಟಾರ್ ಗಳೇ ಹೀಗೆ ಮಾಡುವುದು ಎಷ್ಟು ಸರಿ?

    ಬರೀ ಬಾಲಿವುಡ್ ಗಷ್ಟೇ ಸೀಮಿತವಲ್ಲ: ಈ ಡ್ರಗ್ಸ್ ಜಾಲ ಬರೀ ಬಾಲಿವುಡ್ ಗಷ್ಟೇ ಸೀಮಿತವಲ್ಲ, ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ವರೆಗೂ ವ್ಯಾಪಿಸಿದೆ. ಕೆಲವು ವರ್ಷಗಳ ಹಿಂದೆ ಟಾಲಿವುಡ್ ನಲ್ಲಿ ಡ್ರಗ್ಸ್ ಜಾಲ ದೊಡ್ಡ ಸುದ್ದಿಯಾಗಿದ್ದು, ಇದರಲ್ಲಿ ರವಿತೇಜ, ರಾಣಾ ದಗ್ಗುಬಾಟಿ, ಪುರಿ ಜಗನ್ನಾಥ್, ಚಾರ್ವಿು ಕೌರ್ ಮುಂತಾದವರ ಹೆಸರು ಕೇಳಿ ಬಂದಿತ್ತು. ಇನ್ನು, ಚಂದನವನದಲ್ಲಿ ಇದೇ ವಿಚಾರವಾಗಿ ರಾಗಿಣಿ, ಸಂಜನಾ, ದಿಗಂತ್, ಐಂದ್ರಿತಾ, ಯೋಗಿ ಮುಂತಾದವರು ವಿಚಾರಣೆ ಎದುರಿಸಿ ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts