More

    ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ; ಸಿದ್ದರಾಮಯ್ಯ ಎಚ್ಚರಿಕೆ

    ಬೆಂಗಳೂರು: ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಕನ್ನಡಿಗರು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಬದಲು, ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ. ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
    ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ. ಬೇರೆ ಭಾಷಿಗರನ್ನು, ಧರ್ಮದವರನ್ನೂ ಪ್ರೀತಿಸಬೇಕು ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಸಲಹೆಯನ್ನೂ ನೀಡಿದ್ದಾರೆ.
    ವಿಧಾನಸೌಧದ ಬ್ಯಾಂಕೆಎಟ್ ಹಾಲ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 50ರ ಲಾಂಛನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
    ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹವೋ ಅಥವಾ ಕನ್ನಡದ ಬಗ್ಗೆ ಕೀಳರಿಮೆಯೋ ಗೊತ್ತಿಲ್ಲ, ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲೀಷ್‌ನಲ್ಲಿಯೇ ಟಿಪ್ಪಣಿಯನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲೀಷ್ ಬಳಸಬಹುದೇ ಹೊರತು, ಇನ್ನುಳಿದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬಹಳ ವರ್ಷಗಳಿಂದ ಕನ್ನಡವನ್ನು ಆಡಳಿತ ಭಾಷೆಯಾಗಿದ್ದರೂ ಕೂಡ , ಇದು ಪಾಲನೆಯಾಗದಿರುವುದಕ್ಕೆ ನಿರ್ಲಕ್ಷ್ಯವೂ ಕಾರಣವಿರಬಹುದು. ಈ ಪರಿಸ್ಥಿತಿ ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟರು.
    ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ. ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು ಎಂದ ಅವರು ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ ವಾತಾವರಣ, ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ತಿಳಿಸಿದರು.
    ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದು ಪರಿಸ್ಥಿತಿಯ ಗಂಭೀರತೆಯನ್ನು ಪ್ರತಿಪಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts