More

    Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!

    | ಮುಳ್ಳೂರು ರಾಜು ಮೈಸೂರು
    ‘ಕಾರ್ಯವಾಸಿ ಕತ್ತೆ ಕಾಲು ಕಟ್ಟು (ಹಿಡಿ)’ ಎಂಬ ಗಾದೆ ಮಾತಿನಂತೆ, ಮಲೆ ಮಹದೇಶ್ವರ ಬೆಟ್ಟ ಸಮೀಪದ ಕೆಲವು ಊರುಗಳ ಜನರು ‘ಕತ್ತೆಯ ಕಾಲು ಹಿಡಿಯುವುದು’ ಇನ್ನೂ ತಪ್ಪಿಲ್ಲ…!
    ಮೋಟಾರು ವಾಹನಗಳು ಇಲ್ಲದ ಕಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕು-ಸಾಮಗ್ರಿಗಳನ್ನು ಸಾಗಣೆ ಮಾಡಲು ಜನರು ಗಾಡಿ ಅಥವಾ ಬಂಡಿಗಳನ್ನು ಬಳಸುತ್ತಿದ್ದರು. ಈ ಗಾಡಿ ಅಥವಾ ಬಂಡಿಗಳು ಸಂಚರಿಸಲು ಅಗತ್ಯವಾದ ರಸ್ತೆ ಸೌಲಭ್ಯ ಇಲ್ಲದ ಪಕ್ಷದಲ್ಲಿ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು. ಈ ರೀತಿ ಸರಕು-ಸಾಮಗ್ರಿಗಳ ಸಾಗಣೆಯ ಕೆಲಸಕ್ಕೆ ‘ಕತ್ತೆ’ ಹೆಸರುವಾಸಿಯಾಗಿತ್ತು.
    ಆದರೆ ಪ್ರಸ್ತುತ ನಾಗರಿಕ ಪ್ರಪಂಚಕ್ಕೆ ಒಂದಲ್ಲ, ಎರಡಲ್ಲ ನೂರಾರು ಮಾದರಿಯ ವಾಹನಗಳು ಬಂದಿವೆ. ಸಂದಿ-ಗೊಂದಿಯಂತಹ ಸ್ಥಳಗಳೂ ರಸ್ತೆಗಳಾಗಿ ಮಾರ್ಪಟ್ಟಿವೆ. ಇಷ್ಟಾದರೂ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ವಾಸವಾಗಿರುವ ಜನರು, ಸರಕು-ಸಾಮಗ್ರಿಗಳ ಸಾಗಣೆಗಾಗಿ ಕತ್ತೆಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಈಗಲೂ ಸಿಲುಕಿದ್ದಾರೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಇಂಡಿಗನತ್ತ, ತೇಕಾಣೆ, ತುಳಸಿಕೆರೆ ಮಾತ್ರವಲ್ಲದೆ, ಪಡಸಲನತ್ತ ಮತ್ತು ನಾಗಮಲೆಯ ತಪ್ಪಲಿನಲ್ಲಿ ವಾಸವಾಗಿರುವ ಜನರು, ಒಂದು ವೇಳೆ ತಮ್ಮ ಕಣ್ಣ ಮುಂದೆ ಸಾಕ್ಷಾತ್ ಆ ಮಹದೇಶ್ವರರೇ ಪ್ರತ್ಯಕ್ಷರಾಗಿ ‘ವರವೇನು ಬೇಕು?’ ಎಂದು ಕೇಳಿದರೆ, ಬಹುಶಃ ರಸ್ತೆಯನ್ನು ಹೊರತುಪಡಿಸಿ ಬೇರೇನನ್ನೂ ಕೇಳಲಾರರು! ಅಂತಹ ಪರಿಸ್ಥಿತಿ ಇಲ್ಲಿದೆ.

    Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!
    ಕಾಲು ದಾರಿಯಲ್ಲಿ ಪಡಿತರ ಹೊತ್ತು ಸಾಗುತ್ತಿರುವ ಮಹಿಳೆ.

    ಕಾರಣವೇನು?: ಪವಾಡ ಪುರುಷ ಶ್ರೀ ಮಲೆ ಮಹದೇಶ್ವರರು ನೆಲೆಸಿರುವ ‘ನಡುಮಲೆ’ಯ (ಮಹದೇಶ್ವರಬೆಟ್ಟ) ಸುತ್ತಮುತ್ತ ಎಪ್ಪತ್ತೇಳು ಮಲೆ (ಬೆಟ್ಟ)ಗಳಿವೆ. ಈ ಪೈಕಿ ‘ನಾಗಮಲೆ’ ಪ್ರಮುಖ ಯಾತ್ರಾ ಸ್ಥಳವಾಗಿದೆ. ನಡುಮಲೆಯಿಂದ ನಾಗಮಲೆಗೆ 14 ಕಿ.ಮೀ. ಅಂತರವಿದ್ದು, ಕಾಡು ಮತ್ತು ಬೆಟ್ಟಗುಡ್ಡಗಳ ನಡುವೆ ಈ ಮಾರ್ಗದಲ್ಲಿ ಸಾಗಬೇಕು. ನಡುಮಲೆಯಿಂದ 7 ಕಿ.ಮೀ. ಅಂದರೆ, ಇಂಡಿಗನತ್ತ ಗ್ರಾಮದವರೆಗೆ ಕೊರಕಲು ರಸ್ತೆಯಿದ್ದು, ಖಾಸಗಿ ಜೀಪುಗಳು ಮಾತ್ರ ಸಂಚರಿಸುತ್ತವೆ. ಉಳಿದ 7 ಕಿ.ಮೀ. ಅಂದರೆ, ನಾಗಮಲೆವರೆಗೆ ಬೆಟ್ಟಗುಡ್ಡಗಳನ್ನು ಹತ್ತಿ-ಇಳಿದು, ಸುತ್ತಿ-ಬಳಸಿ, ಕಲ್ಲು-ಮಣ್ಣಿನ ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಬೇಕು.
    ಪಡಸಲನತ್ತ ಮತ್ತು ನಾಗಮಲೆ ನಿವಾಸಿಗಳು ನಿತ್ಯ ಜೀವನಕ್ಕೆ ಬೇಕಾದ ಅಕ್ಕಿ ಮತ್ತಿತರ ದಿನಸಿ ಪದಾರ್ಥಗಳು, ಮನೆಗಳ ನಿರ್ವಣಕ್ಕೆ ಅಗತ್ಯವಾದ ಸಿಮೆಂಟು, ಇಟ್ಟಿಗೆ ಇನ್ನಿತರ ಸಾಮಗ್ರಿಗಳನ್ನು ಮಹದೇಶ್ವರ ಬೆಟ್ಟದಿಂದಲೇ ತರಬೇಕು. ಅದಕ್ಕಾಗಿ ಕತ್ತೆಗಳೇ ಇವರ ಪಾಲಿಗೆ ವಾಹನಗಳು.

    150 ರೂ. ಬಾಡಿಗೆ: ಕತ್ತೆಗಳನ್ನು ಎಲ್ಲರೂ ಸಾಕುವುದಿಲ್ಲ. ಅದಕ್ಕಾಗಿಯೇ ಕೆಲವು ಕುಟುಂಬಗಳಿದ್ದು, ಒಂದು ಬಾರಿ ಮಹದೇಶ್ವರ ಬೆಟ್ಟಕ್ಕೆ ಹೋಗಿ, ಸರಕು-ಸಾಮಗ್ರಿ ಹೇರಿಕೊಂಡು ಬರಲು ಒಂದು ಕತ್ತೆಗೆ 150 ರೂ. ಬಾಡಿಗೆ ನಿಗದಿ ಮಾಡಿದ್ದಾರೆ. ಗರಿಷ್ಠ 50 ಕೆ.ಜಿ. ಪದಾರ್ಥವನ್ನು ಕತ್ತೆಯ ಮೇಲೆ ಹೊರಿಸಬಹುದು. ಭಕ್ತರ ಅನುಕೂಲಕ್ಕೆಂದು ನಾಗಮಲೆಯಲ್ಲಿ ತೆರೆಯಲಾಗಿರುವ ಪೂಜಾ ಸಾಮಗ್ರಿ, ಹೋಟೆಲ್ ಮತ್ತಿತರ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಮಾರಾಟಕ್ಕೆ ಬೇಕಾದ ಸಾಮಗ್ರಿಗಳನ್ನು ಮಹದೇಶ್ವರ ಬೆಟ್ಟದಿಂದ ತರಲು ಈ ಕತ್ತೆಗಳನ್ನೇ ಅವಲಂಬಿಸಿದ್ದಾರೆ. ಕತ್ತೆಗಳಿಗೆ ಬಾಡಿಗೆ ನೀಡಬೇಕಾಗಿರುವುದರಿಂದ ಇಲ್ಲಿ ಮಾರಾಟವಾಗುವ ಕುಡಿಯುವ ನೀರಿನ ಬಾಟಲ್ ಮತ್ತಿತರ ಪದಾರ್ಥಗಳಿಗೆ ಸಹಜವಾಗಿಯೇ ಬೆಲೆ ಹೆಚ್ಚಿರುತ್ತದೆ.

    ಈ ಕಷ್ಟ ನಮ್ಗೆ ತಪ್ಪಿದ್ದಲ್ಲ ಸಾಮಿ…

    Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!
    ‘ಈ ಕಷ್ಟ ನಮ್ಗೆ ತಪ್ಪಿದ್ದಲ್ಲ ಸಾಮಿ…’ ಎನ್ನುವ ಮಾದಮ್ಮ

    ಮಹದೇಶ್ವರ ಬೆಟ್ಟದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಇಲ್ಲಿನ ಜನರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಅಂತೆಯೆ, ಜನವರಿ ತಿಂಗಳ ಪಡಿತರ ಪಡೆದು, ಅದನ್ನು ತಲೆಯ ಮೇಲೆ ಹೊತ್ತು ಊರಿನತ್ತ ತೆರಳುತ್ತಿದ್ದ ಮಾದಮ್ಮ, ಮಾರ್ಗಮಧ್ಯೆ ಸುಸ್ತಾಗಿ ಕುಳಿತಿದ್ದರು. ‘ಈ ಕಷ್ಟ ನಮ್ಗೆ ಪ್ರತಿ ತಿಂಗ್ಳು ತಪ್ಪಿದ್ದಲ್ಲ ಸಾಮಿ, ಇನ್ನೇನು ಮಾಡೋದು ಹೇಳಿ? ಹೀಗೆ ಮಧ್ಯೆ ಮಧ್ಯೆ ದಣಿವಾರಿಸ್ಕಂಡು ಹೋಗ್ತೀವಿ. ಈ ಸಂಕ್ಟವ ಆ ಮಾದೇಶ್ವರ ನಮ್ಗೆ ಅದ್ಯಾವಾಗ ತಪ್ಪಿಸ್ತಾನೋ ನೋಡ್ಬೇಕು’ ಎಂದು ತಮಿಳು ಶೈಲಿಯ ಕನ್ನಡದಲ್ಲಿ ಹೇಳುತ್ತಾ ನಿಟ್ಟುಸಿರು ಬಿಟ್ಟರು. ತಾವು ನಂಬಿರುವ ಮಹದೇಶ್ವರನೊಬ್ಬನಲ್ಲದೆ, ರಾಜಕಾರಣಿಗಳು ಅಥವಾ ಅಧಿಕಾರಿಗಳಿಂದ ತಮ್ಮ ಕಷ್ಟ ನಿವಾರಣೆ ಆಗುತ್ತದೆಂಬ ನಿರೀಕ್ಷೆಯನ್ನು ಅಪ್ಪಿತಪ್ಪಿಯೂ ಆ ಮಹಿಳೆ ವ್ಯಕ್ತಪಡಿಸದಿದ್ದುದು ವ್ಯವಸ್ಥೆಯ ಮೇಲಿನ ಅವರ ಅಪನಂಬಿಕೆಗೆ ಕನ್ನಡಿ ಹಿಡಿದಂತಿತ್ತು. ಅಂತೆಯೆ, ಆ ದಣಿವಿನ ಸಮಯದಲ್ಲೂ ಮಾದಮ್ಮ, ತನ್ನ ಕಷ್ಟವನ್ನು ಕೇಳಿಸಿಕೊಂಡವರಿಗೆ ಮಡಿಲಿನಲ್ಲಿ ಕಟ್ಟಿಕೊಂಡಿದ್ದ ಹಿಡಿಯಷ್ಟು ಬೆಟ್ಟದ ನೆಲ್ಲಿಕಾಯಿಗಳನ್ನು ತಿನ್ನಲು ಕೊಟ್ಟಿದ್ದು ಅವರ ಮಾನವೀಯತೆಗೆ ಸಾಕ್ಷಿಯಂತಿತ್ತು.

    Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!ನಮ್ಮೂರಿನಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ಚಿಕಿತ್ಸೆಗಾಗಿ ಮಹದೇಶ್ವರ ಬೆಟ್ಟಕ್ಕೆ ನಡೆದುಕೊಂಡೇ ಹೋಗಬೇಕು. ಗರ್ಭಿಣಿ, ಬಾಣಂತಿಯರು ಸೇರಿದಂತೆ ತುರ್ತು ಚಿಕಿತ್ಸೆಯ ಅಗತ್ಯವಿದ್ದವರನ್ನು ಮೇನೆಯಲ್ಲಿ ಮಲಗಿಸಿಕೊಂಡು ಹೊತ್ತೊಯ್ಯಬೇಕು.
    | ನಾಗಪ್ಪ ತಮ್ಮಡಿ ನಾಗಮಲೆ

    ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಊರುಗಳತ್ತ ತಲೆಯನ್ನೇ ಹಾಕುವುದಿಲ್ಲ. ಹೀಗಾಗಿ, ಕಳೆದು ತಿಂಗಳು ನಡೆದ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿದೆವು. ಮುಂದಿನ ದಿನಗಳಲ್ಲಿ ಎಂಎಲ್​ಎ, ಎಂಪಿ ಚುನಾವಣೆಗಳನ್ನು ಬಹಿಷ್ಕರಿಸುವ ಕುರಿತು ಗ್ರಾಮಸ್ಥರು ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ.
    | ನಾಗಣ್ಣ ನಾಗಮಲೆ ನಿವಾಸಿ

    Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!ಇಂಡಿಗನತ್ತ ಗ್ರಾಮದಿಂದ ನಾಗಮಲೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲು ಅರಣ್ಯ ಇಲಾಖೆಯ ಕಾನೂನುಗಳು ಅಡ್ಡಿಯಾಗಿವೆ. ಆದಾಗ್ಯೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್​ಕುಮಾರ್ ಅವರನ್ನು ಕಳೆದ ನವೆಂಬರ್​ನಲ್ಲಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಕಾನೂನು ಅವಕಾಶಗಳನ್ನು ಬಳಸಿಕೊಂಡು ಲಘು ವಾಹನಗಳು ಸಂಚರಿಸುವಷ್ಟು ಮಟ್ಟಿಗಾದರೂ ರಸ್ತೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
    | ಆರ್.ನರೇಂದ್ರ ಹನೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts