More

    ವಿದ್ಯಾರ್ಥಿ ಜೀವನದಲ್ಲಿ ಉದಾಸೀನತೆ ಬೇಡ

    ಪಾಂಡವಪುರ : ವಿದ್ಯಾರ್ಥಿ ಜೀವನದಲ್ಲಿ ಉದಾಸೀನತೆ ಹಾಗೂ ಅಶಿಸ್ತು ತೋರಿದರೆ ಭವಿಷ್ಯದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ನನ್ನ ಜೀವನದಲ್ಲಿ ಇದರ ಅನುಭವವಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

    ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24 ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹತ್ತನೇ ತರಗತಿವರೆಗೆ ಉತ್ತಮ ವಿದ್ಯಾರ್ಥಿಯಾಗಿದ್ದ ನಾನು ಆನಂತರದ ಓದಿನಲ್ಲಿ ಕೊಂಚ ಉದಾಸೀನತೆ ತೋರಿದೆ. ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದ ನನಗೆ ಕೆಲವೊಂದು ಕೆಲಸ ನಿರ್ವಹಿಸುವಾಗ ವಿದ್ಯಾರ್ಥಿ ದೆಸೆಯಲ್ಲಿ ತೋರಿದ ಉದಾಸೀನತೆ ನನ್ನ ದೌರ್ಬಲ್ಯವಾಗಿ ಬಿಟ್ಟಿತ್ತು. ಅಂದು ಕೆಲ ವಿಷಯದಲ್ಲಿ ಪ್ರಾವೀಣ್ಯತೆ ಪಡೆದಿದ್ದರೆ ಇಂತಹ ಕೆಲಸವನ್ನು ಸುಲಭವಾಗಿ ನಿಭಾಯಿಸಬಹುದಿತ್ತು ಎನ್ನಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಓದನ್ನು ಪರಿಪೂರ್ಣಗೊಳಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಸಲಹೆ ನೀಡಿದರು.

    ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಶಿಕ್ಷಣ ನೀಡಿದಾಗ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಇದಕ್ಕಾಗಿ ನನ್ನ ಅನುಭವವಗಳನ್ನು ಕಾಲೇಜು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಸಂವಾದ ಮಾಡಬೇಕು ಎಂಬ ಆಲೋಚನೆ ಇತ್ತು. ಅದು ಇಂದು ಈಡೇರಿದೆ. ಏನನ್ನಾದರೂ ಕಲಿಯುವುದು ಮತ್ತು ಶಿಕ್ಷಣ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಮನನವಾಗಬೇಕು. ಎಲ್ಲರ ಮನೆ ದೋಸೆ ತೂತು ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರಿಗೂ ಸಮಸ್ಯೆ ಇದ್ದೇ ಇರುತ್ತದೆ. ಜೀವನದಲ್ಲಿ ಯಶಸ್ಸು ಸಾಧಿಸಲು ನಿರಂತರ ಕಲಿಕೆ ಮುಖ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಫೇಲ್ ಆದರೂ ಮುಂದೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ಗಳಿಸಿಕೊಳ್ಳಬೇಕು ಎಂದರು.

    ವಿದ್ಯಾರ್ಥಿಗಳು ಏನೂ ಕಲಿಯುತ್ತಾರೆ? ಯಾವ ರೀತಿ ನಡೆದುಕೊಳ್ಳುತ್ತಾರೆ? ಎಂಬುದರ ಮೇಲೆ ಭವಿಷ್ಯ ನಿಲ್ಲುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕು. ನೂರು ಜನ ತಪ್ಪು ಮಾಡಿದರೂ ಚಿಂತೆಯಿಲ್ಲ. ನಾನೊಬ್ಬ ಸರಿಯಿದ್ದೇನೆ ಎಂಬ ಭಾವನೆಯೊಂದಿಗೆ ಹೆಜ್ಜೆ ಹಾಕಿ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಂವಾದ ಕಾರ್ಯಕ್ರಮಗಳನ್ನು ನಡೆಸಲು ಕಾಲೇಜು ಮುಖ್ಯಸ್ಥರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

    ಪ್ರಾಂಶುಪಾಲ ಡಾ.ಮಧುಸೂದನ್, ಸಾಂಸ್ಕೃತಿಕ ಸಂಚಾಲಕ ಡಾ.ವೆಂಕಟೇಶ್‌ಗೌಡ, ನಿವೃತ್ತ ಉಪನ್ಯಾಸಕ ತಿಮ್ಮಪ್ಪ, ಕ್ರೀಡಾ ಸಂಚಾಲಕ ಡಾ.ಶಂಕರ್, ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಯೋಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts