More

    ಸೋಂಕಿತನ ಗ್ರಾಮ ನಿರ್ಲಕ್ಷ್ಯ ; ಕೆಳಹಂತದಲ್ಲಿ ಅನುಷ್ಠಾನವಾಗದ ಜಿಲ್ಲಾಡಳಿತದ ಆದೇಶ

    ತುಮಕೂರು: ಜಿಲ್ಲೆಯಲ್ಲಿ ಪತ್ತೆಯಾಗುವ ಕರೊನಾ ಪ್ರಕರಣಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಜಿಲ್ಲಾಡಳಿತ ನಿರ್ಲಕ್ಷಿಸುತ್ತಿರುವುದೇ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎಂಬ ದೂರುಗಳಿವೆ.

    ಪಾವಗಡ ತಾಲೂಕು ಚಿತ್ತಗಾನಹಳ್ಳಿಯಲ್ಲಿ ಮಂಗಳವಾರ 38 ವರ್ಷದ ವ್ಯಕ್ತಿಗೆ ಕರೊನಾ ದೃಢಪಟ್ಟಿದ್ದು, ಬುಧವಾರ ಸಂಜೆಯಾದರೂ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿ, ಸಿಬ್ಬಂದಿಯೂ ಆಗಮಿಸದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.

    ಬೆಂಗಳೂರಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ವ್ಯಕ್ತಿಗೆ ವಾರದಿಂದ ರೋಗ ಲಕ್ಷಣ ಕಾಣಿಸಿದ್ದು, ಊರೆಲ್ಲ ಅಡ್ಡಾಡಿದ್ದಾರೆ. ಹಾಗಾಗಿ, ಸೋಂಕು ಹರಡುವುದನ್ನು ತಪ್ಪಿಸಲು ಸ್ಥಳೀಯರ ಕ್ವಾರಂಟೈನ್ ಅಗತ್ಯವಾಗಿದ್ದರೂ ಅಧಿಕಾರಿಗಳು ಗ್ರಾಮಕ್ಕೆ ಕಾಲಿಡದಿರುವುದು ಭಯ ಮೂಡಿಸಿದೆ.

    ಮಂಗಳವಾರ ವ್ಯಕ್ತಿಗೆ ಸೋಂಕು ದೃಢವಾದ ಕೂಡಲೇ ದೂರವಾಣಿಯಲ್ಲಿ ಸಂಪರ್ಕಿಸಿ ಆಸ್ಪತ್ರೆಗೆ ಕರೆಸಿಕೊಂಡು ಕ್ವಾರಂಟೈನ್ ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ನಂತರ ಊರ ಕಡೆ ತಿರುಗಿಯೂ ನೋಡಿಲ್ಲ. ಇವೆಲ್ಲ ಘಟನೆಗಳನ್ನು ಅವಲೋಕಿಸಿದಾಗ ಜಿಲ್ಲಾಡಳಿತದ ಯೋಜನೆಗಳು ಕೆಳಹಂತದಲ್ಲಿ ಅನುಷ್ಠಾನವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಚಿತ್ತಗಾನಹಳ್ಳಿಯಲ್ಲಿ ಅಧಿಕಾರಿಗಳ ವೈಫಲ್ಯಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೂ ಸ್ಥಳೀಯರು ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

    ಸೋಂಕು ಪತ್ತೆಯಾದರೂ ಯಥಾಸ್ಥಿತಿ ಇದೆ, ಸೋಂಕಿತನನ್ನು ಕರೆದೊಯ್ಯಲು ಆಂಬುಲೆನ್ಸ್ ಕೂಡ ಬಂದಿಲ್ಲ, ಅವನೇ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾನೆ, ಆತನೊಂದಿಗೆ ಸಾಕಷ್ಟು ಜನ ಸಂಪರ್ಕವಿದ್ದು ಅವರನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದೆ.
    ಸಿದ್ದಗಂಗಪ್ಪ ಚಿಕ್ಕಗಾನಹಳ್ಳಿ

    ಸೋಂಕು ದೃಢವಾಗಿ ದಿನವಾದರೂ ಯಾವೊಬ್ಬ ಅಧಿಕಾರಿಯೂ ಆಗಮಿಸಿಲ್ಲ, ಜಿಲ್ಲಾಡಳಿತ ಪತ್ರಿಕೆಗಳಲ್ಲಿ ಅಷ್ಟೇ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದೆ, ವಾಸ್ತವದಲ್ಲಿ ಅಲ್ಲ.
    ಹನುಮಂತರಾಯಪ್ಪ ಗ್ರಾಪಂ ಸದಸ್ಯ

    ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ, ಯಾರೂ ಬಂದಿಲ್ಲ ಎಂಬ ಗ್ರಾಮಸ್ಥರ ದೂರಿನ ಬಗ್ಗೆಯೂ ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.
    ವರದರಾಜು ತಹಸೀಲ್ದಾರ್, ಪಾವಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts