More

    ಅಯೋಧ್ಯೆಯ ಪಾವನತ್ವ ಎಂದಿಗೂ ಅಜರಾಮರ

    ಗೋಕರ್ಣ: ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಿಂದ ತರಲಾದ ಪವಿತ್ರ ಮೃತ್ತಿಕೆ ಮತ್ತು ಪಾವನ ಸರಯೂ ನದಿಯ ರಸೋದಕವನ್ನು ಶ್ರೀರಾಮಚಂದ್ರಾಪುರ ಮಠದ ಮೂಲವಾದ ಈ ಅಹಿಚ್ಛತ್ರದಲ್ಲಿ ಇಂದು ನಿಕ್ಷೇಪಿಸಲಾಗಿದೆ. ಈ ಮೂಲಕ ಮಠಮೂಲದ ಈ ಪೌರಾಣಿಕ ಭೂಮಿಯಲ್ಲಿ ಅಯೋಧ್ಯೆಯ ಪುನರುತ್ಥಾನವನ್ನು ಇಂದು ಸಂಕಲ್ಪಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಶ್ರೀಮಠದ ಮೂಲಸ್ಥಳಕ್ಕೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ಅಯೋಧ್ಯೆಯ ಮೃತ್ತಿಕೆ ಮತ್ತು ಸರಯೂ ತೀರ್ಥವನ್ನು ನಿಕ್ಷೇಪಗೊಳಿಸಿ ನಂತರ ನಡೆದ ಬೃಹತ್ ಸಭೆಯಲ್ಲಿ ಶ್ರೀಗಳು ಸಮಸ್ತ ಶಿಷ್ಯಭಕ್ತರಿಗೆ ಆಶೀರ್ವಚನ ಅನುಗ್ರಹಿಸಿದರು.

    ಶ್ರೀರಾಮನ ಅಂದಿನ ಅಯೋಧ್ಯೆ ಇಂದಿಗೂ ಅದೇ ಪಾವನತ್ವವನ್ನು ಸಂರಕ್ಷಿಸಿಕೊಂಡಿದೆ. ವಾಲ್ಮೀಕಿ ಮಹರ್ಷಿಗಳು ಅಯೋಧ್ಯೆಯ ನೆಲವನ್ನು ‘ಪಾಂಡು (ಬಿಳಿ)ಮೃತ್ತಿಕಾ’ ಎಂದೂ ದಿವೀಯ ಸರಯೂ ಜಲವನ್ನು ‘ಇಕ್ಷುಕಾಂಡ(ಕಬ್ಬು) ರಸೋದಕ’ ಎಂದು ವರ್ಣಿಸಿದ್ದಾರೆ. ಇಂದೂ ಅಲ್ಲಿನ ನೆಲ ಅದೇ ತೆರನಾಗಿ ಬಿಳಿಯಾಗಿ, ಸರಯೂ ಜಲ ಕಬ್ಬಿನ ಹಾಲಿನ ಸಿಹಿ ಉಳ್ಳದ್ದಾಗಿರುವುದು ಅಯೋಧ್ಯೆಯ ಸಂರಕ್ಷಿತ ಮಹಿಮೆಗೆ ಸಾಕ್ಷಿಯಾಗಿದೆ ಎಂದರು.

    ಪವಿತ್ರವಾದ ಗಂಗಾ ನದಿಯಲ್ಲಿ 60 ಸಾವಿರ ವರ್ಷ ಮುಳುಗಿದ್ದರೆ ಯಾವ ಪುಣ್ಯ ಪ್ರಾಪ್ತವಾಗುವುದೋ ಅದೇ ಪ್ರಮಾಣದ ಪುಣ್ಯ ಶ್ರೀರಾಮ ಅಂತರ್ದಾನನಾದ ಸರಯೂ ನದಿಯಲ್ಲಿ ನಿಮಿಷಾರ್ಧ ಮುಳುಗೆದ್ದರೆ ಲಭಿಸುತ್ತದೆ ಎಂದು ಸ್ಕಂದ ಪುರಾಣ ಉಲ್ಲೇಖಿಸಿದೆ.

    ಅಂತಹ ಮಂಗಳಮಯ ಅಯೋಧ್ಯೆಯ ಮಣ್ಣು ಮತ್ತು ಪವಿತ್ರ ಜಲವನ್ನು ಮಠಮೂಲದಲ್ಲಿ ಇಂದು ಸಮಾವೇಶಗೊಳಿಸುವ ಮೂಲಕ ಅದೇ ಅಯೋಧ್ಯೆಯ ಪ್ರತಿಷ್ಠಾಪನೆ ಆದಂತಾಗಿದೆ. ಮುಂದಿನದೆಲ್ಲವೂ ಔಪಚಾರಿಕ ಮಾತ್ರ. ಅಯೋಧ್ಯೆಯ ಅದೇ ರಾಮ, ಅದೇ ಸೀತಾ ಲಕ್ಷ್ಮಣರ ಆವಾಸಸ್ಥಾನ ಈ ಅಹಿಚ್ಛತ್ರವಾಯಿತು. ಇಂದು ಪ್ರತಿಷ್ಠಾಪಿತವಾದ ಗುಪ್ತ ಶ್ರೀರಾಮ ಸಾನ್ನಿಧ್ಯ ಈ ಮೂಲತಾಣದಲ್ಲಿ ಮಠ ನಿರ್ಮಾಣದೊಂದಿಗೆ ಮುಂದೆ ಪ್ರತ್ಯಕ್ಷವಾಗಿ ಪ್ರಕಟವಾಗಲಿದೆ. ಈ ಮಹಾ ಸುದಿನಕ್ಕಾಗಿ ಮಠಮೂಲ ಕಾದಿತ್ತು. ಅದು ಅಯೋಧ್ಯೆಯ ಮಹಾಯಾನದಿಂದ ಪರಿಪೂರ್ಣವಾಗಿರುವುದರಿಂದ ಇಲ್ಲಿ ಇನ್ನೊಂದು ಅಯೋಧ್ಯೆಯ ನಿರ್ಮಾಣ ಸಂಕಲ್ಪವನ್ನು ನಾವೆಲ್ಲ ಸೇರಿ ಮಾಡೋಣ ಎಂದರು.

    ಅಯೋಧ್ಯೆಯಿಂದ ಆಗಮಿಸಿದ ಶ್ರೀಗಳನ್ನು ಅಶೋಕೆ ಪ್ರವೇಶ ದ್ವಾರದಲ್ಲಿನ ಬ್ರಹ್ಮರ್ಷಿ ದೈವರಾತ ಆಶ್ರಮದಿಂದ ವಿಶೇಷವಾದ ರಥದಲ್ಲಿ ಮಂಗಳ ವಾದ್ಯ, ಬಗೆ ಬಗೆಯ ಪೌರಾಣಿಕ ವೇಷ ಮತ್ತು ಸುಮಂಗಲಿಯರ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಅಹಿಚ್ಛತ್ರಕ್ಕೆ ಕರೆತರಲಾಯಿತು.

    ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಸಮಯದಲ್ಲಿ ಗರುಡಪಕ್ಷಿಯ ದರ್ಶನವಾದಂತೆ ಅಹಿಚ್ಛತ್ರದಲ್ಲಿ ಶ್ರೀಗಳ ಆಶೀರ್ವಚನದ ವೇಳೆ ಗರುಡ ಆಗಮನವಾಗಿ ಶಿಷ್ಯಭಕ್ತರ ಅಚ್ಚರಿಗೆ ಕಾರಣವಾಯಿತು.

    ಹವ್ಯಕ ಮಹಾಮಂಡಳದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ. ಶರ್ಮ, ಸಮಿತಿ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಕಾರ್ಯದರ್ಶಿ ನಾಗರಾಜ ಭಟ್ಟ ಪೆದಮಲೆ, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ,ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಆಡಳಿತಾಧಿಕಾರಿ ಡಾ.ಟಿ.ಜಿ. ಪ್ರಸನ್ನಕುಮಾರ, ಮಹಾಮಂಡಲ ಸದಸ್ಯರಾದ ಜಿ.ಎಸ್. ಹೆಗಡೆ,ರುಕ್ಮಾವತಿ ಸಾಗರ, ಡಾ.ವೈ.ವಿ. ಕೃಷ್ಣಮೂರ್ತಿ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಜಿ.ವಿ. ಹೆಗಡೆ, ಕಾರ್ಯದರ್ಶಿ ಮಧು ಜಿ.ಕೆ., ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡ, ಉಪಾಧಿವಂತ ಮಂಡಳದ ವೇ.ಪರಮೇಶ್ವರ ಮಾರ್ಕಾಂಡೆ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts