More

    ಇನ್ನೂ ಎಚ್ಚೆತ್ತುಕೊಂಡಿಲ್ಲ ಸಾರ್ವಜನಿಕರು

    ರಾಣೆಬೆನ್ನೂರ: ದಿನೇ ದಿನೆ ಕರೋನಾ ಸೋಂಕು ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಸರ್ಕಾರ ನಾನಾ ನಿಯಮ ಜಾರಿಗೊಳಿಸಿದೆ. ಅನಗತ್ಯವಾಗಿ ಓಡಾಡುವ ಬೈಕ್, ಕಾರು ಸವಾರರಿಗೆ ಹಾಗೂ ಅಂಗಡಿಕಾರರ ವಿರುದ್ಧ ಪೊಲೀಸರೂ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಜನತೆ ಮಾತ್ರ ಅನಗತ್ಯವಾಗಿ ತಿರುಗಾಡುವುದನ್ನು ಬಿಟ್ಟಿಲ್ಲ.
    ನಗರ ಹಾಗೂ ತಾಲೂಕಿನಲ್ಲಿ ಜನತಾ ಕರ್ಫ್ಯೂ ಘೊಷಣೆಯಾದ ದಿನದಿಂದ ಪೊಲೀಸರು ಮೇ 25ರವರೆಗೆ ಒಟ್ಟು 15,490 ಬೈಕ್, ಕಾರು ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಒಟ್ಟು 49.80 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಮಾಸ್ಕ್ ಹಾಕದೆ ಓಡಾಡುವ 15,550 ಜನರಿಂದ ಒಟ್ಟು 17.35 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ಬೈಕ್, ಕಾರು ಸೇರಿ 1350 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಬಟ್ಟೆ ಅಂಗಡಿ, ಹೋಟೆಲ್, ಚಿನ್ನಾಭರಣ ಅಂಗಡಿ ಮತ್ತಿತರ ಅಂಗಡಿಗಳನ್ನು ತೆರೆದ 82 ವ್ಯಾಪಾರಸ್ಥರ ವಿರುದ್ಧ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿವೆ. ತಾಲೂಕಿನಲ್ಲಿ 473 ಸಕ್ರಿಯ ಪ್ರಕರಣ: ನಗರ ಸೇರಿ ತಾಲೂಕಿನಲ್ಲಿ ಈವರೆಗೂ 4,548 ಜನರಿಗೆ ಸೋಂಕು ತಗುಲಿದೆ. 3,955 ಜನ ಗುಣವಾಗಿದ್ದಾರೆ. 87 ಜನರು ಮೃತಪಟ್ಟಿದ್ದಾರೆ. 506 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನತೆ ಜಾಗ್ರತೆ ವಹಿಸಬೇಕು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
    ಬೇಸತ್ತ ಪೊಲೀಸರು: ಪೊಲೀಸರು ವಿಧಿಸುವ 100 ರೂ. ದಂಡಕ್ಕೆ ತಲೆ ಕೆಡಿಸಿಕೊಳ್ಳದ ಪುಂಡ ಪೋಕರಿಗಳು ಬೈಕ್​ಗಳಲ್ಲಿ ಮನಬಂದಂತೆ ಓಡಾಡುತ್ತಿದ್ದಾರೆ. ಮುಖ್ಯರಸ್ತೆಗಳ ಬದಲು ಅಡ್ಡ ರಸ್ತೆಗಳಲ್ಲಿ ಜನ ಅನಗತ್ಯ ತಿರುಗಾಡುವುದನ್ನು ತಪ್ಪಿಸಲು ಪೊಲೀಸರು ಹಳೇ ಪಿ.ಬಿ. ರಸ್ತೆ, ನಗರದ ಪ್ರಮುಖ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ. ಆದರೂ ಕೆಲವರು ರಸ್ತೆಗೆ ಹಾಕಿದ ಬ್ಯಾರಿಕೇಡ್ ದಾಟಿಕೊಂಡು ಓಡಾಡುವ ದೃಶ್ಯಗಳು ಕಾಣಸಿಗುತ್ತಿವೆ. ಪೊಲೀಸರು ನಿತ್ಯವೂ ನಗರದ ಎಂ.ಜಿ. ರಸ್ತೆ, ಕೋರ್ಟ್ ವೃತ್ತ, ಪೋಸ್ಟ್ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ನಿಂತು ಅನಗತ್ಯವಾಗಿ ಓಡಾಡುವ ಬೈಕ್ ಹಾಗೂ ಕಾರು ಸವಾರರಿಗೆ ನೂರು ರೂಪಾಯಿ, ಎರಡು ನೂರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಆದರೆ, ಸ್ಥಳದಲ್ಲಿಯೇ ದಂಡ ತುಂಬಿ ಹೋಗುತ್ತಿರುವ ಜನತೆ ಮಾತ್ರ ಕರೊನಾ ಹರಡುವಿಕೆಯಿಂದ ನಾವು ಹೊರ ಬರಬಾರದು ಎಂಬುದನ್ನು ತಿಳಿದುಕೊಳ್ಳುತ್ತಿಲ್ಲ ಎಂಬುದು ಪೊಲೀಸರ ಅಭಿಪ್ರಾಯ.

    ಸದ್ಯ ಪೊಲೀಸರು ಲಾಠಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವವರಿಗೆ ಕಡ್ಡಾಯವಾಗಿ ದಂಡ ಹಾಕುತ್ತಿದ್ದೇವೆ. ಜನತೆಗೆ ಉಚಿತವಾಗಿ ಮಾಸ್ಕ್ ನೀಡಿದ್ದೇವೆ. ಜಾಗೃತಿ ಮೂಡಿಸಿದ್ದೇವೆ. ಕರೊನಾ ಸೋಂಕು ತಡೆಗಟ್ಟಲು ಜನ ಎಚ್ಚೆತ್ತುಕೊಳ್ಳಬೇಕಿದೆ.
    | ಟಿ.ವಿ. ಸುರೇಶ, ಡಿವೈಎಸ್ಪಿ
    ರಾಣೆಬೆನ್ನೂರಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೊಲೀಸರು ಕಠಿಣ ಕ್ರಮಗಳಿಂದ ಜನರ ಓಡಾಟಕ್ಕೆ ಕಡಿವಾಣ ಹಾಕಬೇಕಿದೆ.
    | ಚೇತನ ಎಂ.ಕೆ., ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts