More

    ಸರ್ಕಾರಗಳನ್ನೇ ಅಲುಗಾಡಿಸುವಷ್ಟು ಪತ್ರಿಕಾರಂಗ ಪವರ್‌ಫುಲ್

    ಶಿವಮೊಗ್ಗ: ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗವು ಸರ್ಕಾರಗಳನ್ನೇ ಅಲುಗಾಡಿಸುವಷ್ಟು ಪವರ್‌ಫುಲ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮಾಧ್ಯಮರಂಗವು ತನ್ನದೇಯಾದ ಪಾತ್ರವನ್ನು ವಹಿಸುತ್ತಿದೆ. ಸಮಾಜ, ಸರ್ಕಾರದ ಮಟ್ಟದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸರಿದಾರಿಗೆ ತರುವ ಸಾಮರ್ಥ್ಯವನ್ನು ಹೊಂದಿವೆ. ಈ ಮೂಲಕ ಶಾಸಕಾಂಗ ಮತ್ತು ಕಾರ್ಯಾಂಗದ ಕಣ್ಣುತೆರೆಸುತ್ತಿವೆ ಎಂದರು.
    ಮಾಧ್ಯಮದ ಸಹಕಾರ ಶಿಕ್ಷಣ ಇಲಾಖೆಗೂ ಬೇಕಿದೆ. ಬಹಳಷ್ಟು ಬಾರಿ ಇಲಾಖೆಯ ಸಮಸ್ಯೆಗಳನ್ನು ಖುದ್ದಾಗಿ ಅರಿಯುವುದಕ್ಕೆ ಸಾಧ್ಯ ಆಗುವುದಿಲ್ಲ. ಶಾಲಾ ಕಟ್ಟಡಗಳ ದುರಸ್ತಿ, ಕಾಂಪೌಂಡ್, ಶಾಚಗೃಹ ಸೇರಿ ನಾನಾ ಸಮಸ್ಯೆಗಳಿರುತ್ತವೆ. ಶಿಕ್ಷಕರು ಅವುಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ಅಂತಹ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತರುವಲ್ಲಿ ಮಾಧ್ಯಮಗಳು ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.
    ಪತ್ರಕರ್ತರಿಗೆ ಕೆಲಸದ ಒತ್ತಡದ ನಡುವೆ ಕುಟುಂಬದೊಂದಿಗೆ ಕಾಲ ಕಳೆಯುವುದಕ್ಕೂ ಸಾಧ್ಯವಾಗುವುದಿಲ್ಲ. ಹೀಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಗಬೇಕಿದೆ. ಕೇವಲ ಬರೆಯುವುದು, ಸಂದರ್ಶನ ಮಾಡುವುದು ಮಾತ್ರವಲ್ಲ, ಕುಟುಂಬದೊಟ್ಟಿಗೆ ಬೆರೆಯುವಂತಹ ಕಾರ್ಯಗಳನ್ನು ನಡೆಸಿದಾಗ ಮಾತ್ರ ಪರಸ್ಪರ ಪರಿಚಯವಾಗಲಿದೆ ಎಂದರು.
    ಶಿವಮೊಗ್ಗದಲ್ಲಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಆಗಿದ್ದರೂ ಎಲ್ಲರಿಗೂ ಸಿಕ್ಕಿಲ್ಲ ಎಂಬುದು ನನ್ನ ಗಮನಕ್ಕಿದೆ. ನಿವೇಶನಗಳನ್ನು ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ಜತೆಗೆ ನಮ್ಮ ಸರ್ಕಾರ ಬಜೆಟ್‌ನಲ್ಲಿ ಗ್ರಾಮೀಣ ಭಾಗದಲ್ಲಿನ ಪತ್ರಕರ್ತರಿಗೆ ಬಸ್ ನೀಡಲು ಕ್ರಮಕೈಗೊಂಡಿದೆ. ತಾಲೂಕು ಹಾಗೂ ಗ್ರಾಮಾಂತರ ಭಾಗದ ಪತ್ರಕರ್ತರಿಗೆ ನಿವೇಶನ ಕೊಡಲು ಹಾಗೂ ಸರ್ಕಾರದಿಂದ ಸೌಲಭ್ಯಗಳನ್ನು ಕೊಡಿಸಲು ಯತ್ನ ನಡೆಸುವುದಾಗಿ ಭರವಸೆ ನೀಡಿದರು.
    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ,ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ, ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಮತ್ತಿತರರಿದ್ದರು.

    ಸಮಾರೋಪ, ಬಹುಮಾನ ವಿತರಣೆ
    ಸಂಜೆ ಸಮಾರೋಪ ಸಮಾರಂಭದಲ್ಲಿ ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಮಕ್ಕಳು, ಮಹಿಳೆಯರು, ಪುರುಷರ ವಿಭಾಗದಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಇಡೀ ದಿನ ಜಿಲ್ಲೆಯ ಪತ್ರಕರ್ತರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts