More

    ಆರು ತಿಂಗಳಿಂದ ಭೇಟಿ ನೀಡದ ಕಾಯಂ ನೌಕರ, ದಿಕ್ಕು ದೆಸೆಯಿಲ್ಲದಂತಾಗಿರುವ ದೊಡ್ಡಗದ್ದವಳ್ಳಿ ಪ್ರಾಚೀನ ದೇಗುಲ

    ಹಾಸನ: ತಾಲೂಕಿನ ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯದ ಮಹಾಕಾಳಿ ವಿಗ್ರಹ ತುಂಡಾಗಿ ಬಿದ್ದಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದು, ಪುರಾತನ ದೇವಾಲಯಕ್ಕೆ ರಕ್ಷಣೆ ನೀಡಬೇಕಿದ್ದ ಕೇಂದ್ರ ಪುರಾತತ್ವ ಇಲಾಖೆಯ ವೈಫಲ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

    ಕ್ರಿ.ಶ. 1113ರಲ್ಲಿ ನಿರ್ಮಾಣವಾಗಿರುವ ಹೊಯ್ಸಳರ ಕಾಲದ ಮಹಾಲಕ್ಷ್ಮೀ ದೇವಾಲಯಕ್ಕೆ ತನ್ನದೇಯಾದ ಇತಿಹಾಸವಿದೆ. ಆದರೆ ಪ್ರಾಚೀನ ಕಲೆಯನ್ನು ಉಳಿಸಿಕೊಳ್ಳುವಲ್ಲಿ ಇಲಾಖೆ ನಿರ್ಲಕ್ಷೃ ವಹಿಸಿದೆ ಎಂಬುದಕ್ಕೆ ಇಲ್ಲಿಗೆ ಕಾಯಂ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಕಾರಣವಾಗಿದೆ. ನಿಧಿಗಾಗಿ ದುಷ್ಕರ್ಮಿಗಳು ಗುರುವಾರ ರಾತ್ರಿ ಮಹಾಕಾಳಿ ವಿಗ್ರಹ ಭಗ್ನಗೊಳಿಸಿದ್ದಾರೆ ಎಂಬ ಆರೋಪವನ್ನು ಸ್ಥಳೀಯರು ಮತ್ತು ಅಧಿಕಾರಿಗಳು ತಳ್ಳಿ ಹಾಕಿದ್ದು ವಿಗ್ರಹ ಆಸನವಾಗಿದ್ದ ಕೆಳಭಾಗ ಸಂಪೂರ್ಣ ಸವೆದು ಏಕಾಏಕಿ ತುಂಡರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದ ಹಾಸನ ಗ್ರಾಮಾಂತರ ಠಾಣೆ ಎಸ್‌ಐ ಬಿ. ಬಸವರಾಜ, ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಕಿಶೋರ್ ರೆಡ್ಡಿ ದೇವಾಲಯ ಅರ್ಚಕ ವೆಂಕಟೇಶ್, ಡಿ ದರ್ಜೆ ಕಾಯಂ ನೌಕರ ಸಣ್ಣೇಗೌಡ ಹಾಗೂ ಗ್ರಾಮಸ್ಥರಿಂದ ಹೇಳಿಕೆ ಪಡೆದರು.

    900 ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಗ್ರಹ ಕಳವು ಪ್ರಕರಣ ಇದೇ ಮೊದಲಲ್ಲ. 50 ವರ್ಷದ ಹಿಂದೆ ಕಾಲಭೈರವೇಶ್ವರನ ವಿಗ್ರಹ ಕದ್ದು ಪೊಲೀಸರ ಶೋಧನೆ ನಡೆಸಿ ಅದನ್ನು ಮರಳಿ ಪಡೆದಿದ್ದಾರೆ. ಆದರೆ ಗುರುವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆಂಬುದಕ್ಕೆ ಪುರಾವೆಗಳಿಲ್ಲ. ದೇವಾಲಯಕ್ಕೆ ಎರಡು ಗೇಟ್‌ಗಳಿದ್ದು ಬೀಗ ಹಾಕಲಾಗಿತ್ತು. ಆದರೆ ಗರ್ಭಗುಡಿ ಬಾಗಿಲು ದುಸ್ಥಿತಿಯಲ್ಲಿರುವುದರಿಂದ ಅದಕ್ಕೆ ಬೀಗ ಹಾಕಿರಲಿಲ್ಲ.

    ಮಹಾಕಾಳಿ ವಿಗ್ರಹಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದ ಭಕ್ತರು ಮೊಸರು, ಮಜ್ಜಿಗೆಯಂತಹ ಪೂಜಾ ಪದಾರ್ಥಗಳನ್ನು ಅಲ್ಲಿಗೆ ಹಾಕುತ್ತಿದ್ದರು. ಆದರೆ ಅದರ ಸ್ವಚ್ಛತೆ ನಿರ್ವಹಣೆ ಮಾಡದೆ ಇದ್ದಿದ್ದರಿಂದ ಅದು ಶಿಥಿಲಾವಸ್ಥೆ ತಲುಪಿತ್ತು. ಹೊಯ್ಸಳರ ಕಾಲದ ವಿಗ್ರಹಗಳ ವೈಶಿಷ್ಠೃವೆಂದರೆ ಕೆಳಭಾಗ ವೃತ್ತಾಕಾರದಲ್ಲಿದ್ದು ಅದನ್ನು ಅಷ್ಟೇ ಅಳತೆಯ ಗುಂಡಿಯೊಳಗೆ ಇಳಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಗ್ರಹ ಅಲುಗಾಡುತ್ತಿದ್ದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಅದರ ಕಡೆಗೆ ಗಮನ ಹರಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts