ನಿಂಜೂರುಬೆಟ್ಟು ಸಂಪರ್ಕ ರಸ್ತೆ ಕಾಮಗಾರಿ ಅರ್ಧಕ್ಕೇ ಬಾಕಿ

kon
Published on

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಂಜೂರುಬೆಟ್ಟು ಎಂಬಲ್ಲಿ ಗ್ರಾಮೀಣ ಭಾಗದ ರಸ್ತೆ ಹಲವಾರು ವರ್ಷಗಳಿಂದ ತೀರಾ ಹದಗೆಟ್ಟಿದ್ದು ನಿತ್ಯ ನೂರಾರು ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತವೆ. ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೇ ನಿರ್ಲಕ್ಷೃಕ್ಕೆ ಒಳಗಾಗಿದೆ. ನಿಂಜೂರುಬೆಟ್ಟು, ಹೊಳೆಬಾಗಿಲು ಸಂಪರ್ಕಿಸುವ ಈ ರಸ್ತೆ ಮಂದಾರ್ತಿ ಹೆಗ್ಗುಂಜೆ, ಶಿರೂರು ಮೂರ್ಕೈ ಹಾಗೂ ಅನೇಕ ಊರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಎರಡು ವರ್ಷದ ಹಿಂದೆ ವಿಜಯವಾಣಿಯಲ್ಲಿ ರಸ್ತೆ ಸಮಸ್ಯೆ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಆ ಬಳಿಕ ಸ್ಥಳೀಯ ಪಂಚಾಯಿತಿ 200 ಮೀಟರ್‌ನಷ್ಟು ರಸ್ತೆ ಅಭಿವೃದ್ಧಿ ಮಾಡಿತ್ತು. ಬಾಕಿ ಉಳಿದ ರಸ್ತೆ ಕಾಮಗಾರಿ ಅರ್ಧಕ್ಕೇ ನಿಂತಿದೆ. ಗುಂಡಿಬಿದ್ದು ಹದಗೆಟ್ಟಿರುವ ರಸ್ತೆಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಪ್ರತಿಭಟಿಸಿದ್ದ ಗ್ರಾಮಸ್ಥರು: ರಸ್ತೆ ಅಭಿವೃದ್ಧಿಗಾಗಿ ಇಲ್ಲಿನ ಗ್ರಾಮಸ್ಥರು ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಒಂದಷ್ಟು ದೂರದ ವರೆಗೆ ಕಾಂಕ್ರೀಟ್ ಕಾಮಗಾರಿ ನಡೆದಿತ್ತು. ಅದಾಗಿ ಹಲವು ವರ್ಷ ಕಳೆದರೂ ಬಾಕಿ ಉಳಿದ ರಸ್ತೆಯ ಕಾಂಕ್ರೀಟ್ ಕಾಮಗಾರಿ ಅಥವಾ ಡಾಂಬರೀಕರಣ ನಡೆದಿಲ್ಲ. ತಾತ್ಕಾಲಿಕವಾಗಿ ಗುಂಡಿಗಳಿಗೆ ಅಲ್ಲಲ್ಲಿ ತೇಪೆ ಹಾಕುವ ಕಾರ್ಯವನ್ನೂ ನಡೆಸಿಲ್ಲ. ಈ ರಸ್ತೆ ಸಂಪರ್ಕಿಸುವ ನಿಂಜೂರುಬೆಟ್ಟುವಿನಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಬಾಕಿ ಉಳಿದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಅನುದಾನದ ಕೊರತೆ ಇರುವುದರಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಲವಾರು ರಸ್ತೆಗಳ ಅಭಿವೃದ್ಧಿ ಕುರಿತು ಸಚಿವರು, ಶಾಸಕ ಹಾಗೂ ಸಂಸದರ ಗಮನಕ್ಕೆ ತರಲಾಗಿದೆ. ಪಂಚಾಯಿತಿಯಲ್ಲಿಯೂ ಅನುದಾನ ಇಲ್ಲದೆ ಕಾಮಗಾರಿ ನಡೆಯುತ್ತಿಲ್ಲ. ಜಯಂತ ಪೂಜಾರಿ, ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಹಲವಾರು ವರ್ಷದ ಹಿಂದೆ ಹಾಕಲಾದ ಡಾಂಬರು ಅಲ್ಲಲ್ಲಿ ಕಿತ್ತು ಹೋಗಿದ್ದು ಮಳೆ ಆರಂಭವಾದ ಬಳಿಕ ಗುಂಡಿಗಳು ಜಾಸ್ತಿಯಾಗಿವೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ಸಮಸ್ಯೆಯಾಗಿದೆ. ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು. ಉದಯ್, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net