More

    ರಾಜಕೀಯಕ್ಕೆ ಸೀಮಿತವಾಯ್ತು ಮೈಶುಗರ್ ವಿಷಯ

    ಮಂಡ್ಯ: ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ಘೋಷಣೆ ಮಾಡಿದ ಬಳಿಕ ಜಿಲ್ಲಾದ್ಯಂತ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಮಾತೇ ಆಡದಿರುವುದು ಗೊಂದಲದ ಜತೆಗೆ ಆಕ್ರೋಶಕ್ಕೆ ಕಾರಣವಾಗಿದೆ.

    ಜಿಲ್ಲೆಯ ಜೀವನಾಡಿ ಎನ್ನಿಸಿಕೊಂಡಿರುವ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ತಮ್ಮ ನಿಲುವನ್ನು ಬಹುತೇಕ ಜನಪ್ರತಿನಿಧಿಗಳು ತಿಳಿಸುತ್ತಿಲ್ಲ. ಈ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರೆನ್ನುವಂತೆ ಮಾತನಾಡಿ ಸುಮ್ಮನಾಗುತ್ತಿದ್ದಾರೆ. ಅವರ ಅಭಿಪ್ರಾಯ ಏನಿದೆ ಎನ್ನುವುದೇ ಅರ್ಥವಾಗುತ್ತಿಲ್ಲ.

    ಖಾಸಗೀಕರಣಕ್ಕೆ ಪರ-ವಿರೋಧ: ಸರ್ಕಾರದ ನಿರ್ಧಾರ ತಿಳಿಸಿದ ಮರುದಿನದಿಂದಲೇ ಪರ-ವಿರೋಧದ ಮಾತು ಕೇಳಿಬರುತ್ತಿವೆ. ಸಂಘ ಸಂಸ್ಥೆಗಳು, ರೈತರು, ರೈತ ಪರ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಸರ್ಕಾರ ಖಾಸಗಿಗೆ ವಹಿಸುವ ಮುನ್ನ ಸ್ಥಳೀಯರೊಂದಿಗೆ ಸಭೆ ಮಾಡಬೇಕು. ಒಂದು ವೇಳೆ ವಹಿಸಿದರೂ ರೈತರಿಗೆ ಸಮಸ್ಯೆಯಾಗದಂತೆ ಒಂದಷ್ಟು ನಿರ್ದಿಷ್ಟ ನಿಯಮ ರೂಪಿಸಲೇಬೇಕೆಂದು ಆಗ್ರಹಿಸುತ್ತಿದ್ದಾರೆ.

    ಇಷ್ಟಾದರೂ ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಮೈತ್ರಿ ಸರ್ಕಾರವಿದ್ದಾಗ ಜೆಡಿಎಸ್ ಶಾಸಕರು ಕಾರ್ಖಾನೆ ಬಗ್ಗೆ ತೋರಿಸಿದಷ್ಟು ಆಸಕ್ತಿಯನ್ನು ಈಗ ತೋರಿಸುತ್ತಿಲ್ಲ. ಇತ್ತ ಕಾಂಗ್ರೆಸ್‌ನ ಮಾಜಿ ಶಾಸಕರು ಪರ, ವಿರೋಧ ಮಾಡುತ್ತಿಲ್ಲ. ಸಂಸದರು ತಮ್ಮ ಅಭಿಪ್ರಾಯ ತಿಳಿಸುತ್ತಿಲ್ಲ.

    ಈ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ರೈತರು ಕೂಡ ತೀವ್ರ ಆಕ್ಷೇಪವ್ಯಕ್ತಪಡಿಸಿದರು. ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಷ್ಟೇ ರೈತರ ನೆನಪು ಬರುತ್ತದೆ. ಅದೇ ನಾವು ಸಮಸ್ಯೆಯಲ್ಲಿದ್ದಾಗ ಕೇಳುವವರೇ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನಾದರೂ, ಕಾರ್ಖಾನೆ ಉಳಿವಿನ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

    ಮೈಶುಗರ್ ಕಾರ್ಖಾನೆ ಗುತ್ತಿಗೆಗೆ ವಹಿಸಿ: ಮೈಶುಗರ್ ಕಾರ್ಖಾನೆ ದುಡಿಯುವ ಬಂಡವಾಳದ ಕೊರತೆಯಿಂದಾಗಿ ಕಬ್ಬು ಅರೆಯುವ ಕಾರ್ಯವನ್ನು ಸ್ಥಗಿತಗೊಳಿಸಿದೆ. ಆದ್ದರಿಂದ, ರೈತರು ಮತ್ತು ಷೇರುದಾರರು, ಕಾರ್ಮಿಕರ ಹಿತದೃಷ್ಟಿಯಿಂದ ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಗೆ ವಹಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗುರುಸಿದ್ದಯ್ಯ ಆಗ್ರಹಿಸಿದರು.

    ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇರೆಗೆ ನೀಡುವ ವೇಳೆ ರೈತರು ಮತ್ತು ಕಾರ್ಮಿಕರಿಗೆ ತೊಂದರೆಯಾಗದಂತೆ ನಿಯಮ ರೂಪಿಸಲೇಬೇಕು. ಇಬ್ಬರಿಗೂ ಸಕಾಲದಲ್ಲಿ ಹಣ ಪಾವತಿಯಾಗುವಂತಿರಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

    ಗುತ್ತಿಗೆ ಪಡೆದವರು ಸಕ್ಕರೆ ಘಟಕದ ಜತೆಗೆ ಡಿಸ್ಟಲರಿ ಘಟಕ, ಸಹ ವಿದ್ಯುತ್ ಘಟಕವನ್ನು ಚಾಲನೆ ಮಾಡಬೇಕು. ಗುತ್ತಿಗೆ ಮುಗಿದ ಬಳಿಕವೇ ಕಾರ್ಖಾನೆಯನ್ನು ವಾಪಸ್ ಸರ್ಕಾರದ ಸುರ್ಪದಿಗೆ ನೀಡಬೇಕು. ಕಾರ್ಖಾನೆಗೆ ಸೇರಿದ ವಿದ್ಯಾಸಂಸ್ಥೆಗಳನ್ನು ಸುಗಮವಾಗಿ ನಡೆಸಬೇಕು. ಚರ-ಸ್ಥಿರ ಆಸ್ತಿಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಅಂತೆಯೇ, ಮೇ ಅಂತ್ಯ ಮತ್ತು ಜೂನ್ ಪ್ರಾರಂಭದಲ್ಲಿಯೇ ಕಬ್ಬು ಅರೆಯುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಹೇಳಿದರು.

    10 ವರ್ಷದಿಂದ ಕಾರ್ಖಾನೆಗೆ 428 ಕೋಟಿ ರೂ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿದೆ. ಆದರೆ, ಹಣದಲ್ಲಿ ಆಡಳಿತ ಮಂಡಳಿಗಳು ಭ್ರಷ್ಟಾಚಾರ ಮಾಡಿದೆ. ಆದ್ದರಿಂದ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡರಾದ ಎಚ್.ಸಿ.ಜಯರಾಮು, ಶಿವಬೋರಯ್ಯ, ಪೂಜಾರಿ ಪಾಪಣ್ಣ, ವಿ.ತಮ್ಮಣ್ಣ, ಶಿವಣ್ಣ, ಕೃಷ್ಣೇಗೌಡ ಇದ್ದರು.

    ಸಾತನೂರಿನಲ್ಲಿ ಚರ್ಚೆ : ಮೈಶುಗರ್, ಪಿಎಸ್‌ಎಸ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದನ್ನು ವಿರೋಧಿಸಿ ಶುಕ್ರವಾರ ತಾಲೂಕಿನ ಸಾತನೂರು ಗ್ರಾಮದಲ್ಲಿ ರೈತ ಮತ್ತು ಕನ್ನಡ ಸಂಘಟನೆಗಳ ಒಕ್ಕೂಟದಿಂದ ನಡೆಸುತ್ತಿದ್ದ ಜಾಗೃತಿ ಯಾತ್ರೆಯಲ್ಲಿ ಕೆಲ ಹೊತ್ತು ಚರ್ಚೆ ನಡೆಯಿತು.

    ಒಕ್ಕೂಟದ ಸದಸ್ಯರು ಸಾತನೂರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಬ್ಬು ಬೆಳೆಗಾರರು ಸೇರಿಕೊಂಡರು. ಈ ವೇಳೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದರಿಂದ ಆಗುವ ಅನುಕೂಲ, ಅನನುಕೂಲದ ಬಗ್ಗೆ ಮಾತುಕತೆ ನಡೆಯಿತು.

    ಬಹುತೇಕ ರೈತರು ಖಾಸಗಿಯವರಿಗೆ ಕಾರ್ಖಾನೆ ವಹಿಸುವುದನ್ನು ಬೆಂಬಲಿಸುತ್ತಾರೆ. ಕಾರಣ, ನಮಗೆ ಕಬ್ಬು ಅರೆದರೆ ಸಾಕಾಗಿದೆ. ಸರ್ಕಾರಿ ಸ್ವಾಮ್ಯದಲ್ಲಿಯೇ ಇದ್ದರೆ ರೈತರು ಮತ್ತೆ ಮತ್ತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರ ನೂರಾರು ಕೋಟಿ ಕೊಟ್ಟರೂ ಕಾರ್ಖಾನೆ ಅಭಿವೃದ್ಧಿ ಕಾಣಲಿಲ್ಲ ಎಂದರು.

    ಇದಕ್ಕೆ ತಮ್ಮ ವಾದ ಮಂಡಿಸಿದ ಒಕ್ಕೂಟದ ಸದಸ್ಯರು, ಕಾರ್ಖಾನೆ ಖಾಸಗೀಕರಣಗೊಳಿಸಿದರೆ ಮುಂದೆ ಸಮಸ್ಯೆಯಾಗುತ್ತದೆ. ಕಾರ್ಖಾನೆಗೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯೂ ಹೋಗುತ್ತದೆ. ಈಗಾಗಲೇ ಇದೇ ರೀತಿ ಬೇರೆ ಕಾರ್ಖಾನೆಯೂ ಆಗಿರುವುದನ್ನು ಕಾಣಬಹುದು. ಸರ್ಕಾರವೇ ಈ ಬಾರಿ ಸರಿಯಾದ ಕ್ರಮ ವಹಿಸಿ ಕಾರ್ಖಾನೆ ಪ್ರಾರಂಭಿಸಬೇಕು ಎಂದರು.

    ಮತ್ತೆ ರೈತರು ಕೂಡ ಪ್ರತಿಕ್ರಿಯಿಸಿ, ಇಂದಿನ ಪರಿಸ್ಥಿತಿಯಲ್ಲಿ ಖಾಸಗಿ ಕಾರ್ಖಾನೆ ಇರದಿದ್ದರೆ ಮೈಶುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರ ಕಥೆ ಏನಾಗುತ್ತಿತ್ತು. ಆದ್ದರಿಂದ, ಖಾಸಗಿಗೆ ವಹಿಸುವ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಆದರೆ, ರೈತರಿಗೆ ಸಮಸ್ಯೆಯಾಗದಂತೆ ನಿಯಮ ರೂಪಿಸಿ ವಹಿಸಬೇಕು. ಪ್ರಮುಖವಾಗಿ 40 ವರ್ಷದ ಅವಧಿಗೆ ಗುತ್ತಿಗೆ ನೀಡುವುದಕ್ಕೆ ನಮ್ಮ ವಿರೋಧವೂ ಇದೆ ಎಂದರು. ಬಳಿಕ ಒಕ್ಕೂಟದ ಸದಸ್ಯರು ಮುಂದಿನ ಗ್ರಾಮಕ್ಕೆ ಪ್ರಯಾಣ ಮುಂದುವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts