More

    ಯುಗಪುರುಷ ಸ್ವಾಮಿ ಚಿನ್ಮಯಾನಂದರು…..

    ಯಾವುದೇ ಧರ್ಮವಾದರೂ ಕಾಲಾನುಗತಿಯಲ್ಲಿ ಶಿಥಿಲಗೊಳ್ಳುತ್ತದೆ. ಸನಾತನ ಹಿಂದು ಧರ್ಮದ ವೈಶಿಷ್ಟ್ಯವೆಂದರೆ ಅದು ಶಿಥಿಲಗೊಳ್ಳುತ್ತಾ ಬಂದಂತೆ ಯಾರಾದರೊಬ್ಬ ಮಹಾತ್ಮ ಯುಗಪುರುಷನಂತೆ ಆವಿರ್ಭವಿಸಿ ಬಂದು ತನ್ನ ಇಡೀ ಜೀವನವನ್ನು ಧರ್ಮದ ಪುನರುತ್ಥಾನಕ್ಕಾಗಿ ಮೀಸಲಿಟ್ಟು ದೇಶಾದ್ಯಂತ ಧರ್ಮ ಜಾಗೃತಿಯನ್ನು ಮಾಡಿ ಹೋಗುತ್ತಾನೆ.  ಅಂತಹ ಯುಗಪುರುಷರಲ್ಲೊಬ್ಬರು. ಮೇ 8ರಂದು ಸ್ವಾಮಿ ಚಿನ್ಮಯಾನಂದರ 105ನೇ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಈ ಬರಹ.

    • ಸ್ವಾಮಿ ಕೃತಾತ್ಮಾನಂದ

    ಆಚಾರ್ಯತ್ರಯರು, ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ನಂತರ ವಿಶ್ವಾದ್ಯಂತ ಗೀತೋಪನಿಷತ್ತುಗಳ ಅವಿಚ್ಛಿನ್ನ ಧಾರೆಯನ್ನು ಹರಿಸಿದ ಕೀರ್ತಿ ಸ್ವಾಮಿ ಚಿನ್ಮಯಾನಂದರದು. 1916ರ ಶ್ರೀ ರಾಮನವಮಿಯಂದು ಕೇರಳದ ತ್ರಿಚೂರಿನಲ್ಲಿ ಆವಿರ್ಭವಿಸಿದ ಈ ‘ಕಿಡಿ’ (ಮೂಲ ಹೆಸರು ಬಾಲಕಷ್ಣ ಮೆನನ್) ಹಿಮಾಲಯ ಮಹಾರಣ್ಯ ಶ್ರೇಣಿಯಲ್ಲಿ ಉದ್ದೀಪನಗೊಂಡು ಇಡೀ ರಾಷ್ಟ್ರಕ್ಕೆ ದಾರಿದೀಪವಾಯಿತು.

    ಇವರ ವಿದ್ಯಾಗುರು ಶ್ರೀ ತಪೋವನ ಮಹಾರಾಜರು ಘನಗಂಭೀರವಾದ ಹಿಮಾಚಲವಾದರೆ ಇವರು ‘ಹರ ಹರ ಹರ’ ಎಂದು ಭೋರ್ಗರೆಯುತ್ತಾ ನಿರರ್ಗಳವಾಗಿ ಹರಿಯುತ್ತಿದ್ದ ಪುಣ್ಯನದಿ ಗಂಗೆ. ಗುರುಗಳು ತಪೋಜೀವಿಯಾಗಿ ಬಾಳಿದ್ದರೆ ಇವರು ಕರ್ಮಯೋಗಿಯಾಗಿ ನಿರಂತರ ನವೀನವಾದ ಉತ್ಸಾಹ, ಉಲ್ಲಾಸದಿಂದ ಇಡೀ ವಿಶ್ವಾದ್ಯಂತ ಜ್ಞಾನಗಂಗೆಯನ್ನು ಹರಿಸಿದವರು.

    ಸನಾತನ ಧರ್ಮದ ಪುನರುತ್ಥಾನವೇ ಅವರ ಜೀವನದ ಮುಖ್ಯ ಧ್ಯೇಯವಾಗಿತ್ತು. ದೇಶದ ಜನತೆಗೆ ಭಾರತೀಯ ದಿವ್ಯಸಂಸ್ಕೃತಿಯ ಪರಿಚಯ ಮಾಡಿಸುವುದೇ ಅವರ ಜೀವನದ ಉಸಿರಾಗಿತ್ತು. ಧರ್ಮಕ್ಕೂ ನಿತ್ಯಜೀವನಕ್ಕೂ ಏನೂ ಸಂಬಂಧವಿಲ್ಲ ಎಂದು ನಂಬಿದ್ದ ಜನರ ಮೌಢ್ಯವನ್ನು ದೂರೀಕರಿಸಿ ಗೀತೋಪನಿಷತ್ತುಗಳಲ್ಲಿ ಅಡಗಿರುವ ತತ್ತ್ವಗಳು ನಿತ್ಯ ಜೀವನಕ್ಕೆ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಂತ ಉಪಯುಕ್ತವಾದುವು ಎಂಬುದನ್ನು ಸ್ಪುಟಗೊಳಿಸಿದ ಮಹಾತ್ಮರಿವರು.

    ದೇಶದ ಜನತೆಯಲ್ಲಿ ಧಾರ್ವಿುಕ ಪ್ರವೃತ್ತಿ, ಪರಸ್ಪರ ಪ್ರೇಮಭಾವ, ರಾಷ್ಟೈಕ್ಯತೆ, ಕಾರ್ಯೋತ್ಸಾಹ ಮತ್ತು ಧೈರ್ಯ ಸ್ಥೈರ್ಯವನ್ನು ತುಂಬಿ ಅವರನ್ನು ದೀರ್ಘ ನಿದ್ದೆಯಿಂದ ಬಡಿದೆಬ್ಬಿಸಿದವರು. ಕರ್ಮ, ಜ್ಞಾನ, ಭಕ್ತಿ ಮತ್ತು ಸೇವಾಪರತೆಯನ್ನು ಉಚ್ಚಕಂಠದಿಂದ ಸಾರಿದ ಅವರ ಅಮೋಘವಾಣಿ ಈಗಲೂ ಜನತೆಯನ್ನು ಜಾಗೃತಗೊಳಿಸುತ್ತಿದೆ. ವಿಶ್ವಾದ್ಯಂತದ ಜನರನ್ನು ಹಿಂದೂ ಧರ್ಮದ ಕಡೆಗೆ ಆಕರ್ಷಿಸುತ್ತಿದೆ. ಮಹಾ ಐಂದ್ರಜಾಲಿಕನಂತೆ ಮಿಲಿಯಗಟ್ಟಲೆ ಜನರನ್ನು ಗೀತಾಮತಸೇಚನದಿಂದ ತನ್ಮಯಗೊಳಿಸಿ ಚಿನ್ಮಯತೆಯ ಕಡೆಗೆ ಒಯ್ದವರು ಚಿನ್ಮಯಾನಂದರು. ಅವರ ವಾಗ್ಝರಿಯ ಶಕ್ತಿಯೇ ಅಂಥದಿತ್ತು. ಅವರ ಗೀತಾಜ್ಞಾನಯಜ್ಞದಲ್ಲಿ ಶ್ರದ್ಧೆಯಿಂದ ಪಾಲುಗೊಂಡ ಶ್ರೋತೃಗಳ ಅನುಭವ ಅಲೌಕಿಕವಾದುದು. ಶ್ರೋತೃಗಳನ್ನು ಮೋಹಿಸುವ ಅಪಾರ ಶಕ್ತಿ ಅವರಲ್ಲಿತ್ತು. ಅವರ ದಿವ್ಯವಾಣಿ ಎಲ್ಲರನ್ನು ತಲ್ಲೀನಗೊಳಿಸುತ್ತಿತ್ತು. ಶ್ರೋತೃಗಳ ಮನಸ್ಸಿನ ಆಳದ ಚಿಂತೆ, ದುಃಖ, ಅಶಾಂತಿ ಮತ್ತು ತಳಮಳಗಳೆಲ್ಲ ಅವರ ಜ್ಞಾನಗಂಗಾಧಾರೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಅಂತಹ ಅದ್ಭುತ ಶಕ್ತಿ 1993ರಲ್ಲಿ ಭಗವಂತನಲ್ಲಿ ಲೀನವಾಯಿತು.

    ಚಿನ್ಮಯ ಮಿಷನ್ ಸ್ಥಾಪನೆ

    ಲೋಕಸಂಗ್ರಹದಲ್ಲೆ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದ ಸ್ವಾಮಿ ಚಿನ್ಮಯಾನಂದರು ಈ ಕಾರ್ಯಸಾಧನೆಗಾಗಿ ‘ಚಿನ್ಮಯ ಮಿಷನ್’ ಎಂಬ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ಮಾನವ ಜನಾಂಗಕ್ಕೆ ಬಹುಮುಖ ಸೇವೆಯನ್ನು ಸಲ್ಲಿಸಿದವರು. ಶರೀರದಲ್ಲಿ, ಮೊಣಕಾಲು ನೋವು, ಸಿಹಿಮೂತ್ರ ಬಾಧೆ, ಎರಡು ಸಾರಿ ಹದಯಾಘಾತದಿಂದ ತತ್ತರಿಸಿದ ಎದೆಗುಂಡಿಗೆ – ಇವೇ ಮೊದಲಾದ ನಾನಾ ರೀತಿಯ ವ್ಯಾಧಿಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಪ್ರತಿಯೊಂದು ನಿಮಿಷವೂ ಸಮಾಜದ ಏಳಿಗೆಗಾಗಿ, ರಾಷ್ಟ್ರದ ಉನ್ನತಿಗಾಗಿ ಜೀವನ ಸವೆಸಿದರು.

    (ಲೇಖಕರು ಹುಬ್ಬಳ್ಳಿಯ ಚಿನ್ಮಯ ಮಿಷನ್​ನಲ್ಲಿ ಆಚಾರ್ಯರು)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts