More

    ಎಗ್ಗಿಲ್ಲದೇ ನಡೆಯುತ್ತಿದೆ ಮರಗಳ ಮಾರಾಣ ಹೋಮ

    ಇಂಡಿ: ಸರ್ಕಾರ ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಮಂತ್ರ ಪಠಿಸುತ್ತಿದೆ. ಅದೇ ರೀತಿ ಮರಗಳಿಗಾಗಿ ಸಾವಿರಾರು ಕೋಟಿ ಅನುದಾನ ವ್ಯಯಿಸುತ್ತಿದೆ. ಆದರೆ ಅದು ಮಣ್ಣು ಪಾಲಾಗುತ್ತಿದೆ ಎಂಬುದಕ್ಕೆ ತಾಲೂಕಿನಲ್ಲಿ ನಡೆಯುತ್ತಿರುವ ಮರಗಳ ಮಾರಣ ಹೋಮವೇ ಸಾಕ್ಷಿಯಾಗಿದೆ.

    ತಾಲೂಕಿನಾದ್ಯಂತ ಬೇವು, ಹುಣಸೆ, ಜಾಲಿ ಸೇರಿದಂತೆ ಹಲವಾರು ಮರಗಳ ಮಾರಣ ಹೋಮ ನಡೆಯುತ್ತಿದೆ. ಕಡಿದ ಮರಗಳನ್ನು ಟ್ರಾೃಕ್ಟರ್ ಮೂಲಕ ಹಗಲು-ರಾತ್ರಿ ಎನ್ನದೆ ರಾಜಾರೋಷವಾಗಿ ರಾಷ್ಟ್ರೀಯ ಹೆದ್ದಾರಿ ಇಂಡಿ- ದೇವರಹಿಪ್ಪರಗಿ ಮಾರ್ಗವಾಗಿ ಪ್ರತಿದಿನ ಏನಿಲ್ಲವೆಂದರೂ ಮೂವತ್ತಕ್ಕೂ ಹೆಚ್ಚು ಟ್ರಾೃಕ್ಟರ್‌ಗಳಲ್ಲಿ ಮರಗಳ ತುಂಡುಗಳ ಸಾಗಾಟವಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

    ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ವಿಜಯಪುರ, ರಾಯಚೂರು ಮತ್ತು ಕೆಲವು ಜಿಲ್ಲೆಗಳಲ್ಲಿ ತಮಗೆ ಅಡಚಣೆಯಿದ್ದರೆ ಮರಗಳನ್ನು ಕಡಿಯಲು ಅರಣ್ಯ ವೃಕ್ಷ ಅಧಿನಿಯಮದಲ್ಲಿ ರೈತರಿಗೆ ವಿನಾಯಿತಿ ನೀಡಲಾಗಿದೆ. ರೈತರು ಮರ ಕಡಿದು ಮಾರಾಟ ಮಾಡಬೇಕಾದರೆ ಇಲಾಖೆ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ಪ್ರತಿದಿನ ಅಧಿಕಾರಿಗಳ ಮುಂದೆಯೇ ಟ್ರಾೃಕ್ಟರ್‌ಗಳಲ್ಲಿ ಮರಗಳ ತುಂಡುಗಳನ್ನು ಸಾಗಿಸುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ.

    ನಂಬರ್ ಪ್ಲೇಟ್ ಇಲ್ಲದ ಗಾಡಿಗಳು: ಮರದ ತುಂಡುಗಳನ್ನು ಸಾಗಾಣಿಕೆ ಮಾಡುವ ಟ್ರಾೃಕ್ಟರ್‌ಗಳಿಗೆ ನಂಬರ್ ಪ್ಲೇಟ್ ಇರುವುದೇ ಇಲ್ಲ. ಹಗಲು-ರಾತ್ರಿ ಎನ್ನದೆ ಪಟ್ಟಣದ ಹೃದಯ ಭಾಗವಾಗಿರುವ ಬಸವೇಶ್ವರ ವೃತ್ತದ ಮೂಲಕವೇ ಈ ಟ್ರಾೃಕ್ಟರ್‌ಗಳು ನಿತ್ಯ ಸಂಚರಿಸುತ್ತವೆ. ಆದರೆ ಪೊಲೀಸ್ ಇಲಾಖೆಯವರು, ಆರ್‌ಟಿಒಗಳು ಸಹ ಈ ವಾಹನಗಳನ್ನು ತಡೆಯುವುದಿಲ್ಲ ಎಂಬುದು ನಾಗರಿಕರ ದೂರಾಗಿದೆ.

    ಅನಧಿಕೃತವಾಗಿ ತಲೆ ಎತ್ತಿರುವ ಇದ್ದಿಲು ಘಟಕಗಳು: ಇಂಡಿ-ಸಿಂದಗಿ ತಾಲೂಕಿನ ಕೆಲ ಕಡೆಗಳಲ್ಲಿ ಅನಧಿಕೃತ ಇದ್ದಿಲು ಘಟಕ ಸ್ಥಾಪನೆ ಅವ್ಯಾಹತವಾಗಿದೆ. ಇದ್ದಿಲು ತಯಾರಿಕೆಗೆ ಮರದ ದಿನ್ನಿಗಳನ್ನು ಬಳಸುತ್ತಿರುವುದರಿಂದ ಗಿಡ-ಮರಗಳು ಮಾಯವಾಗಿ ಈ ಪ್ರದೇಶ ಸದಾ ಬರಗಾಲ ಪ್ರದೇಶವಾಗಿ ರೂಪುಗೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಮಗೇನೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಅರಣ್ಯ ಸಂಪತ್ತು ರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts