More

    ತವರಿನಲ್ಲೇ ಬರಿದಾದ ಜೀವನದಿ ಕಾವೇರಿ

    ಮಡಿಕೇರಿ:

    ಕರುನಾಡಿನ ಜೀವನದಿ ಕಾವೇರಿ ತವರು ನೆಲದಲ್ಲೇ ಸಂಪೂರ್ಣ ಸೊರಗಿ ಹೋಗಿದೆ. ಕುಶಾಲನಗರ ಬಳಿ ನೀರಿನ ಹರಿವು ಸ್ಥಗಿತವಾಗಿದ್ದು, ಜಲಚರಗಳ ಜೀವ ಅಪಾಯದಲ್ಲಿದೆ. ಅಲ್ಲಲ್ಲಿ ಕೆಲವು ಗುಂಡಿಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರಿನ ಸಂಗ್ರಹ ಇದ್ದು, ಇನ್ನು ೩-೪ ದಿನಗಳಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

    ರಾಜ್ಯದಲ್ಲಿ ಈ ಬಾರಿ ವಾಡಿಕೆಯ ಮಳೆಯಾಗದೆ ಬರಗಾಲದ ಪರಿಸ್ಥಿತಿ ಕಾಣಿಸಿಕೊಂಡಿದ್ದು, ಮಲೆನಾಡು ಜಿಲ್ಲೆ ಕೊಡಗು ಕೂಡ ಇದರಿಂದ ಹೊರತಾಗಿಲ್ಲ. ದಕ್ಷಿಣ ಭಾರತದ ಜೀವನದಿ ಕಾವೇರಿಯ ಮೇಲೆ ಇದರ ನೇರ ಪರಿಣಾಮ ಆಗಿದ್ದು, ಉಗಮ ಸ್ಥಾನ ಕೊಡಗಿನಲ್ಲೇ ನದಿ ಸೊರಗಿದೆ. ನದಿ ಹುಟ್ಟುವ ತಲಕಾವೇರಿಯಿಂದ ೮ ಕಿಮೀ ದೂರದ ಭಾಗಮಂಡಲದಲ್ಲೇ ಕಾವೇರಿ ಚಿಕ್ಕ ತೊರೆಯಂತೆ ಆಗಿದ್ದು, ಪುಣ್ಯಕ್ಷೇತ್ರದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಲು ಕೂಡ ನೀರಿಲ್ಲದಂತೆ ಆಗಿದೆ.

    ಕೊಡಗಿನಲ್ಲಿ ವಾರ್ಷಿಕವಾಗಿ ವಾಡಿಕೆಯ ೨,೭೨೭.೬ ಮಿಮೀ ಮಳೆಯಾಗಬೇಕಿದ್ದಲ್ಲಿ ೧,೬೮೯.೯ ಮಿಮೀ ಮಾತ್ರ ಮಳೆ ಬಂದಿದೆ. ಇದರಿಂದಾಗಿ ಶೇ. ೩೮ರಷ್ಟು ಮಳೆಯ ಕೊರತೆ ಆಗಿದೆ. ಮಳೆಯ ತಿಂಗಳು ಎಂದೇ ಗುರುತಿಸಲಾಗುವ ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಕೂಡ ನಿರೀಕ್ಷಿತ ಮಳೆ ಆಗಲಿಲ್ಲ.
    ಜೂನ್‌ನಲ್ಲಿ ೫೩೪ ಮಿಮೀ ವಾಡಿಕೆಯ ಮಳೆ ಆಗಬೇಕಿದ್ದಲ್ಲಿ ಕೇವಲ ೧೦೫ ಮಿಮೀ ಮಾತ್ರ ಮಳೆಯಾಗಿದ್ದು, ಶೇ. ೮೦.೩ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಜುಲೈನಲ್ಲಿ ವಾಡಿಕೆಯ ೮೫೯.೫ ಮಿಮೀ ಮಳೆ ಬರಬೇಕಿದ್ದಲ್ಲಿ ೮೨೧.೦೬ ಮಿಮೀ ಮಳೆ ಸುರಿದಿದ್ದು, ಶೇ. ೫.೭ರಷ್ಟು ಕಡಿಮೆ ಮಳೆ ಬಂದಿತ್ತು. ಆಗಸ್ಟ್‌ನಲ್ಲಿ ೫೭೧.೨ ಮಿಮೀ ವಾಡಿಕೆಯ ಮಳೆ ಬರಬೇಕಿದ್ದಲ್ಲಿ ಕೇವಲ ೯೮.೧ ಮಿಮೀ ಮಾತ್ರ ಮಳೆಯಾಗಿ ಶೇ. ೮೨.೯ರಷ್ಟು ಪ್ರಮಾಣದಲ್ಲಿ ಮಳೆ ಕಡಿಮೆ ಸುರಿದಿತ್ತು.

    ವಾಡಿಕೆಯಂತೆ ಬಾರದ ಮಳೆ ಮತ್ತು ಸಹಜವಾಗಿ ಮಳೆಗಾಲದಲ್ಲಿ ಹುಟ್ಟಿಕೊಳ್ಳುತ್ತಿದ್ದ ಜಲಮೂಲಗಳು ಈ ಮುಂಗಾರಿನಲ್ಲಿ ಕೈ ಕೊಟ್ಟ ಪರಿಣಾಮ ಈಗ ಕಂಡು ಬರುತ್ತಿದೆ. ಮಾರ್ಚ್ ಮಧ್ಯಭಾಗದಲ್ಲೇ ಕಾವೇರಿ ಸೇರಿ ಪ್ರಮುಖ ನದಿಗಳು ಬತ್ತಿ ಹೋಗಿವೆ. ಕೊಡಗಿನ ಜಲಾಶಯಗಳಲ್ಲಿ ಒಂದಾದ ಚಿಕ್ಲಿಹೊಳೆಯಲ್ಲಿ ಡಿಸೆಂಬರ್‌ನಲ್ಲೇ ನೀರು ಆರಿ ಹೋಗಿತ್ತು. ಈಗ ನದಿಗಳ ಸರದಿ. ಗರಗಂದೂರು ಬಳಿ ಹಾರಂಗಿ ನದಿ ನದಿಯಲ್ಲಿ ನೀರಿನ ಹರಿವು ಕೀಣವಾಗಿದೆ. ಜಲಾಶಯದ ಹಿನ್ನೀರು ಎನ್ನುವುದನ್ನು ನಂಬಲು ಸಾಧ್ಯವಾಗದ ಮಟ್ಟಿಗೆ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿದೆ.

    ಕಾವೇರಿ ನದಿಯ ಹರಿವು ಕುಶಾಲನಗರ ಬಳಿ ಸಂಪೂರ್ಣ ನಿಂತುಹೋಗಿದೆ. ಅಲ್ಲಲ್ಲಿ ದೊಡ್ಡ ಗುಂಡಿಗಳಲ್ಲಿ ಮಾತ್ರ ನೀರು ಕಾಣಬಹುದಾಗಿದೆ. ನೀರಿನೊಳಗೆ ಇದ್ದ ಬಂಡೆಗಳು ಈಗ ಮೇಲೆ ಬಂದಿದ್ದು, ನದಿಗಳು ಒಣಗಿ ಬಯಲಿನಂತೆ ಕಂಡು ಬರುತ್ತಿದೆ. ಕುಶಾಲನಗರ ಪಟ್ಟಣಕ್ಕೆ ನದಿಯಿಂದ ನೀರೆತ್ತುವುದನ್ನು ನಿಲ್ಲಿಸಿ ೧೦ ದಿನಗಳು ಕಳೆದಿವೆ. ಬೋರ್‌ವೆಲ್‌ಗಳಿಂದ ತೆಗೆದ ನೀರನ್ನು ಟ್ಯಾಂಕರ್‌ಗಳ ಮೂಲಕ ಮನೆ ಮನೆಗೆ ಪೂರೈಸಲಾಗುತ್ತಿದೆ. ಕೊಡಗಿನಲ್ಲಿ ಹುಟ್ಟಿ ದಕ್ಷಿಣ ಭಾರತದ ಉದ್ದಗಲಕ್ಕೂ ಹರಿದು ರೈತರ ಪಾಲಿಗೆ ವರದಾನವಾಗಿರುವ ಕಾವೇರಿ ನದಿ ಈಗ ಕೊಡಗಿನಲ್ಲಿಯೇ ಬರಿದಾಗುತ್ತಿದೆ. ವರ್ಷದ ೪ ತಿಂಗಳು ತುಂಬಿ ಹರಿಯುವ ನದಿಯಲ್ಲಿ ಈಗ ನೀರಿನ ಹರಿವಿನ ಕೊರತೆ ಎದ್ದು ಕಾಣುತ್ತಿದೆ.

    ಇನ್ನು ೧-೨ ದಿನಗಳಲ್ಲಿ ಮಳೆ ಬಾರದಿದ್ದರೆ ನದಿಯಲ್ಲಿನ ಜಲಚರಗಳ ಮಾರಣ ಹೋಮವೇ ಸಂಭವಿಸುವ ಸಾಧ್ಯತೆ ಇದೆ. ಗುಂಡಿಗಳಲ್ಲಿ ಇರುವ ನೀರು ಕೂಡ ಬತ್ತಿದರೆ ಜಲಚರಗಳು ಜೀವ ಉಳಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಕಾವೇರಿ ನದಿ ನೀರನ್ನು ಪಂಪ್ ಮೂಲಕ ಎತ್ತುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಇದಕ್ಕೆ ತೀವ್ರ ವಿರೋಧ ಇರುವ ಕಾರಣ ಈ ಆಜ್ಞೆ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಇದರಿಂದಲೂ ಅಪರೂಪದ ಮಹಶೀರ ಮೀನು ಸೇರಿದಂತೆ ನದಿಯಲ್ಲಿನ ಅಪರೂಪದ ಜಲಚರಗಳು ಅಪಾಯದಲ್ಲಿವೆ. ಕಾವೇರಿ ನದಿಯ ಒಟ್ಟು ಚಿತ್ರಣ ಈಗ ೨೦೧೮ರ ಮಾರ್ಚ್ ತಿಂಗಳ ಬಿರು ಬೇಸಿಗೆ ಕಾಲವನ್ನು ನೆನಪಿಸುವಂತಿದೆ.

    ದಕ್ಷಿಣ ಭಾರತದ ಪ್ರಮುಖ ನದಿಯಾಗಿರುವ ಕಾವೇರಿ ಉಗಮ ಸ್ಥಾನದಿಂದ ಪೂರ್ವಾಭಿಮುಖವಾಗಿ ಹರಿದು ತಮಿಳುನಾಡಿನಲ್ಲಿ ಬಂಗಾಳ ಕೊಲ್ಲಿ ಸೇರುತ್ತದೆ. ನದಿಯ ಉಗಮಸ್ಥಾನ ಸಮುದ್ರಮಟ್ಟದಿಂದ ಸುಮಾರು ೧೩೪೧ ಮೀ. ಎತ್ತರದಲ್ಲಿದೆ. ಕಾವೇರಿ ನದಿ ಒಟ್ಟು ೮೧೩೫೫ ಚ.ಕಿ.ಮೀ ಜಲಾನಯನ ಪ್ರದೇಶ ಹೊಂದಿದೆ. ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಕಬಿನಿ, ಶಿಂಷಾ, ಅರ್ಕಾವತಿ ಹಾಗೂ ಸುವರ್ಣಾವತಿ ಕಾವೇರಿಯ ಪ್ರಮುಖ ಉಪನದಿಗಳು. ತಲಕಾವೇರಿಯಿಂದ ಶಿರಂಗಾಲ ತನಕ ಕೊಡಗಿನಲ್ಲಿ ಹರಿಯುವ ಕಾವೇರಿ ನದಿ ನೀರನ್ನು ಕುಶಾಲನಗರ ಪುರಸಭೆ ಹಾಗೂ ಈ ಭಾಗದಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯಲು ಬಳಸಲಾಗುತ್ತದೆ. ಆದರೆ ಈಗ ಇಲ್ಲಿ ಕೊಳವೆಬಾವಿ ಅವಲಂಬನೆ ಅನಿವಾರ್ಯವಾಗಿದೆ.

    ಕಾವೇರಿ ನದಿ ಈ ವರ್ಷ ಮಾರ್ಚ್ ಮಧ್ಯಭಾಗದಲ್ಲೇ ಬರಿದಾಗಿದೆ. ಇದರ ಪರಿಣಾಮ ನದಿ ತೀರದ ಕುಶಾಲನಗರ ಮತ್ತು ಇತರ ಗ್ರಾಮ ಪಂಚಾಯತಿಗಳ ಮೇಲೆ ಆಗುತ್ತಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ನದಿಯ ನೀರು ಹರಿಯುವುದು ನಿಂತು ಸಾಕಷ್ಟು ದಿನಗಳಾಗಿವೆ. ಇಲ್ಲಿ ನದಿಯಲ್ಲಿರುವುದು ಮನೆ, ಹೊಟೇಲ್‌ಗಳಿಂದ ಹೊರಬರುವ ತ್ಯಾಜ್ಯ ನೀರು. ಕುಶಾಲನಗರದಲ್ಲಿ ಈಗ ಕಾವೇರಿ ನದಿ ಹುಣಸೂರಿನಲ್ಲಿ ಲಕ್ಷ್ಮಣತೀರ್ಥ ನದಿ ಕಂಡುಬರುವಂತೆ ಗೋಚರವಾಗುತ್ತಿದೆ.
    ಎಂ.ಎನ್. ಚಂದ್ರಮೋಹನ್, ಸಂಚಾಲಕ, ಕಾವೇರಿ ನದಿ ಸ್ವಚ್ಛತಾ ಆಂದೋಲನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts