More

    ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ಕಾನೂನುಬದ್ಧವಾಗಿ ವಹಿಸಿಲ್ಲ; ಸಿದ್ದರಾಮಯ್ಯ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಅಂದಿನ ಸರ್ಕಾರ ಕಾನೂನುಬದ್ಧವಾಗಿ ವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ತಿಳಿಸಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಭಯ ಯೋಜನೆಯಡಿ ಅಲಿ ಅಸ್ಕರ್ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಕಮಾಂಡ್ ಮತ್ತು ಇಂಟಿಗ್ರೇಟೆಡ್ ಕಂಟ್ರೋಲ್ ಸೆಂಟರ್ ಕಟ್ಟಡವನ್ನು ಶುಕ್ರವಾರ ಮುಖ್ಯಮಂತ್ರಿ ಉದ್ಘಾಟನೆ ಮಾಡಿದರು.

    ಆನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ಸಿಬಿಐಗೆ ಅಂದಿನ ಸರ್ಕಾರ ಕಾನೂನುಬದ್ಧವಾಗಿ ವಹಿಸಿಲ್ಲ. ಸರ್ಕಾರಿ ಸೇವೆಯಲ್ಲಿ ಇರುವವರ ವಿರುದ್ಧದ ತನಿಖೆಗೆ ಕಾನೂನಾತ್ಮಕ ಮಾನದಂಡಗಳಿವೆ.
    ಅಂದು ಶಿವಕುಮಾರ್ ಶಾಸಕರು ಆಗಿದ್ದರು. ಅವರ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವ ಮುನ್ನ ಸ್ಪೀಕರ್‌ಅನುಮತಿ ಪಡೆಯಬೇಕಿತ್ತು. ಆದರೆ, ಸರ್ಕಾರ ಸ್ಪೀಕರ್ ಅನುಮತಿ ಪಡೆಯುವುದಿಲ್ಲ. ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಪಡೆಯಬೇಕಿತ್ತು. ಅವರು 2019ರ ಸೆ.25ಕ್ಕೆ ಅಡ್ವೊಕೇಟ್ ಜನರಲ್ ಲಿಖಿತವಾಗಿ ಅಭಿಪ್ರಾಯ ಸಲ್ಲಿಸಿದ್ದರು.

    ಅದಕ್ಕೂ ಮುನ್ನವೇ ಅಂದಿನ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಮೌಖಿಕವಾಗಿ ಆದೇಶಿಸಿದ್ದರು. ಆ ಮೌಖಿಕ ಆದೇಶದ ಅನುಸಾರ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ಲಿಖಿತವಾಗಿ ಸಮ್ಮತಿ ನೀಡಿದ್ದಾರೆ. ಇದು ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಹೇಳಿದರು.
    ಇದೇ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಒಪ್ಪಿಗೆ ಸೂಚಿಸಿದೆ. ದ್ವಿಸದಸ್ಯ ಪೀಠದಲ್ಲಿ ತೀರ್ಪು ಬರಬೇಕಿದೆ.

    ಅದರ ನಡುವೆ ಸಚಿವ ಸಂಪುಟದಲ್ಲಿ ಅನುಮತಿ ವಾಪಸ್ ಪಡೆದಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಕಾನೂನು ಬಾಹಿರವಾಗಿ ಮಂಜೂರಾತಿ ನೀಡಿರುವುದು ಸರಿಯಲ್ಲ. ಅದನ್ನು ವಾಪಸ್ಸು ತೆಗೆದುಕೊಳ್ಳುತ್ತೇವೆ. ನ್ಯಾಯಾಲಯದ ತೀರ್ಮಾನಗಳಿಗೆ ನಾವು ಮಧ್ಯ ಪ್ರವೇಶಿಸುವಂತಿಲ್ಲ. ಕೋರ್ಟ್ ತೀರ್ಪು ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts