More

    ಲೈಂಗಿಕ ದೌರ್ಜನ್ಯ ಅಪರಾಧಿಗಳಿಗಿದೆ ಗಲ್ಲು ಸಜೆ

    ದಾವಣಗೆರೆ: ಹನ್ನೆರಡು ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಘೋರ ಅಪರಾಧವಾಗಿದ್ದು, ಇದಕ್ಕೆ ಕಾನೂನಿನಡಿ ಮರಣ ದಂಡನೆ ವಿಧಿಸಲೂ ಅವಕಾಶವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಉತ್ತರ ವಲಯ ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಲಯನ್ಸ್ ಭವನದಲ್ಲಿ ಪೋಕ್ಸೋ ಅರಿವು ಹಾಗೂ ಮಕ್ಕಳ ಹಕ್ಕುಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಲಿಂಗ ಭೇದವಿಲ್ಲದೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಲ್ಲಿ, ಶೋಷಣೆ ಮಾಡುವುದು ಕಂಡುಬಂದರೆ ತಕ್ಷಣವೇ ಸಂಬಂಧಿಸಿದ ಕಾನೂನು ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.

    ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಲೇವಾರಿಗೆ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ ರಚಿಸಲಾಗಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾದ ವರು ಎಂಥಹ ಪ್ರಭಾವಿಯಾಗಿದ್ದರೂ ಶಿಕ್ಷೆ ಖಚಿತ. ಇದಕ್ಕೆ ಪ್ರೋತ್ಸಾಹ ನೀಡುವವರಿಗೂ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

    ಮಕ್ಕಳ ರಕ್ಷಣೆ ಕೇವಲ ಪೊಲೀಸರು, ನ್ಯಾಯಾಲಯ ಹಾಗೂ ಅಧಿಕಾರಿಗಳ ಕೆಲಸವಲ್ಲ. ಸಾರ್ವಜನಿಕರ ಜವಾಬ್ದಾರಿಯೂ ಇದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ, ನಾಳಿನ ಉತ್ತಮ ಸಮಾಜಕ್ಕಾಗಿ ಮಕ್ಕಳನ್ನು ಕಾಪಾಡಬೇಕು. ಯೂಟೂಬ್, ಸಾಮಾಜಿಕ ಜಾಲತಾಣಗಳಲ್ಲಿಯೂ ಲೈಂಗಿಕ ದೌರ್ಜನ್ಯದ ಪ್ರಚೋದನೆ ಕಂಡುಬರುತ್ತಿದೆ. ಇದರ ಬಗ್ಗೆ ಪಾಲಕರು ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಕಿರಿಯ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಕಾಯ್ದೆ ಇದೆ. ಎಲ್ಲಿಯೇ ಇಂತಹ ಪ್ರಕರಣಗಳು ನಡೆದರೆ ನಾಚಿಕೆ, ಹಿಂಜರಿಕೆ, ಸಂಕೋಚ, ಹೆದರಿಕೆ ಇಲ್ಲದೇ ಇವುಗಳ ವಿರುದ್ಧ ಧ್ವನಿ ಎತ್ತಬೇಕು. ರಾಜಕೀಯ ವ್ಯಕ್ತಿ ಅಥವಾ ಧಾರ್ಮಿಕ ಗುರುವಿರಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ನಿಸ್ಸಂಶಯ ಎಂದು ಹೇಳಿದರು.

    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ಒಳಿತಿಗಾಗಿ ಮಕ್ಕಳನ್ನು ರಕ್ಷಿಸುವುದು, ಅವರ ಅವಶ್ಯಕತೆಗಳನ್ನು ಪೂರೈಸಿ ಅಭಿವೃದ್ಧಿಗೊಳಿಸುವುದು ಪ್ರತಿ ನಾಗರಿಕರು ಹಾಗೂ ಸರ್ಕಾರಗಳ ಕರ್ತವ್ಯ ಎಂದು ತಿಳಿಸಿದರು.

    ವಿಶ್ವಸಂಸ್ಥೆಯು ಮುಂದಿಟ್ಟ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ಸಹಿ ಮಾಡಿವೆ. ಪರಸ್ಪರ ಅವಲಂಬಿತವಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದರು.

    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್. ತಿಪ್ಪೇಶಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದರು. ವಿದ್ಯಾರ್ಥಿನಿ ವೇದಾ ಪ್ರಾರ್ಥಿಸಿದರೆ, ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಅಂಬಣ್ಣ ಸ್ವಾಗತಿಸಿದರು. ಇಸಿಒ ಡಿ. ನಾಗರಾಜ್, ಬಿಆರ್‌ಪಿ ರವಿಕುಮಾರ್, ಮುಖ್ಯ ಶಿಕ್ಷಕರಾದ ನಿರಂಜನ್, ಶಾಂತಾ ವೀರಣ್ಣ, ರೆಹನಾಬಾನು, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts