More

    ಸದ್ದಿಲ್ಲದೆ ಸಮೀಪಿಸುತಿದೆ ಮಕ್ಕಳ ಸಾವು

    ಕೋಲಾರದ ಶಾಲೆಯೊಂದರಲ್ಲಿ ಈಚೆಗೆ ನೃತ್ಯಾಭ್ಯಾಸ ಮಾಡುತ್ತಿರುವಾಗಲೇ ಬಾಲಕಿ ಕುಸಿದು ಬಿದ್ದು ಮೃತಳಾದಳು. ಇದರ ಬೆನ್ನಲ್ಲೇ ಸಾಗರದ ಬಾಲಕನೊಬ್ಬ ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಸ್ಥಳದಲ್ಲಿಯೇ ಅಸುನೀಗಿದ. ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಏಕೆ ಹೀಗೆ? ಒಂದೊಂದು ಪ್ರಕರಣದಲ್ಲಿನ ಕಾರಣ ಭಿನ್ನ ಭಿನ್ನವಾಗಿದ್ದರೂ ಚಿಕ್ಕವಯಸ್ಸಿನಲ್ಲಿ ಪ್ರಾಣಕ್ಕೆ ಎರವಾಗುವಂಥ ಸಾಮಾನ್ಯ ಕಾರಣಗಳೇನು? ಈ ಕುರಿತು ಆಯುರ್ವೇದ ತಜ್ಞರಾದ ಡಾ.ವಸುಂಧರಾ ಭೂಪತಿ ಮತ್ತು ಇತರೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

    ಆರೋಗ್ಯವಂತ ಮಕ್ಕಳ ಸಾವಿನ ಪ್ರಕರಣ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಕೇಳಿಬರುತ್ತಿದೆ. ಇಂಥ ಪ್ರಕರಣಗಳು ಘಟಿಸಿದಾಗಲೆಲ್ಲಾ ಕಡಿಮೆ ರಕ್ತದೊತ್ತಡದಿಂದ (ಲೋ ಬಿ.ಪಿ) ಹೀಗಾಯಿತು ಎಂದೇ ಹೇಳಲಾಗುತ್ತದೆ. ಆದರೆ ಮಕ್ಕಳಲ್ಲಿ ದಿಢೀರ್ ಸಾವಿಗೆ ಇದೊಂದೇ ಪ್ರಮುಖ ಕಾರಣವಾಗಿರುವುದಿಲ್ಲ.

    ನಮ್ಮ ಹೃದಯ ಶುದ್ಧ ರಕ್ತವನ್ನು ಪಂಪ್ ಮಾಡಿ ದೇಹದ ಎಲ್ಲಾ ಭಾಗಗಳಿಗೂ ಕಳುಹಿಸುತ್ತದೆ. ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡವೇ (ಪ್ರತಿಭಾಗಕ್ಕೆ ರಕ್ತ ಹರಿಯುವ ವೇಗ) ರಕ್ತದ ಒತ್ತಡ. ಇದು ಜೈವಿಕಕ್ರಿಯೆಯ ಪ್ರಧಾನ ಗುಣ. ಈ ಒತ್ತಡ ಜಾಸ್ತಿಯಾದಾಗ ಅಧಿಕ ರಕ್ತದೊತ್ತಡ (Hypertension) ಮತ್ತು ಕಡಿಮೆಯಾದಾಗ ಕಡಿಮೆ ರಕ್ತದೊತ್ತಡ (Hypotension) ಉಂಟಾಗುತ್ತದೆ. ಮಕ್ಕಳೂ ಇದಕ್ಕೆ ಹೊರತಲ್ಲ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲೀಕರಣವಾದಾಗ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಆಗ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ ಮತ್ತು ಅದರ ಒತ್ತಡವೂ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಸಾಮಾನ್ಯ ರಕ್ತದ ಒತ್ತಡದ ಪರಿಮಿತಿಗಳು ವಯಸ್ಕರಿಗಿಂತ ಕಡಿಮೆಯಿರುತ್ತವೆ.

    ಮಕ್ಕಳಲ್ಲಿ ಹಠಾತ್ ಸಾವಿನ ಪ್ರಕರಣ ವಯಸ್ಕರಿಗಿಂತ ತೀರಾ ಅಪರೂಪ. ಅರ್ಧಕ್ಕಿಂತ ಹೆಚ್ಚು ಸಾವಿನ ಪ್ರಕರಣಗಳು ಮೊದಲೇ ಕಂಡುಹಿಡಿಯಲಾಗದ ಹೃದಯದ ರೋಗ ಅಥವಾ ಮಿದುಳಿನ ರೋಗವಾದ ಅಪಸ್ಮಾರಕ್ಕೆ ಸಂಬಂಧಿಸಿದ್ದು. ಈ ಸಮಸ್ಯೆಯನ್ನು ಮಕ್ಕಳಲ್ಲಿ Sudden Death in Children (SDC) ಎಂದು ಕರೆಯಲಾಗಿದೆ. ಈ ಸಮಸ್ಯೆಯ ಪ್ರಮಾಣ ಲಕ್ಷದಲ್ಲಿ ಏಳು ಮಕ್ಕಳವರೆಗೆ ಕಂಡುಬರುತ್ತದೆ. ಅನೇಕ ಬಾರಿ ಈ ಸಮಸ್ಯೆ ಮೊದಲೇ ಕಂಡುಬರುತ್ತದೆ.

    ಹೃದಯದ ತೊಂದರೆಗಳು: ಸಾಮಾನ್ಯವಾಗಿ ಈ ಕೆಳಕಂಡ ಕಾರಣಗಳಿಂದ ಮಕ್ಕಳಲ್ಲಿ ಹಠಾತ್ ಸಾವು ಸಂಭವಿಸುತ್ತದೆ.

    01 ಅರಿತ್ಮಿಯಾ (Arrythmia) – ವೆಂಟ್ರಿಕುಲಾರ್ ಟಕೆಕಾರ್ಡಿಯಾ (ಅಂದರೆ ಅತಿವೇಗದ/ಅತಿನಿಧಾನ ಹೃದಯ ಬಡಿತ) ಮತ್ತು ವೆಂಟ್ರಿಕುಲಾರ್ ಫೈಬ್ರಿಲೇಷನ್ (ಹೃದಯ ಅತಿವೇಗವಾಗಿ ಬಡಿದುಕೊಂಡಾಗ ರಕ್ತ ಪಂಪ್ ಮಾಡುವ ಬದಲು ಕಂಪಿಸುತ್ತದೆ). ಈ ಎರಡೂ ಸಮಸ್ಯೆಗಳು ಇದ್ದಾಗ ಹೃದಯ ದೇಹದ ಇತರ ಭಾಗಗಳಿಗೆ ಸರಿಯಾಗಿ ರಕ್ತ ಪೂರೈಕೆ ಮಾಡುವುದಿಲ್ಲ. ಈ ರೀತಿಯ ಸಮಸ್ಯೆ ಕುಟುಂಬದಲ್ಲಿ ಯಾರಿಗಾದರೂ ಇದ್ದಲ್ಲಿ ಇತರರಿಗೂ ಬರಬಹುದು.

    02 HOCM (Hypotrophic obstructive cardio myopathy – ಈ ಸಮಸ್ಯೆ ಇರುವವರಲ್ಲಿ ಅಯೋರ್ಟಾದ ರಕ್ತ ಹರಿಯುವ ಮುಖ್ಯ ದ್ವಾರ ಚಿಕ್ಕದಾಗಿಬಿಟ್ಟಿರುತ್ತದೆ. ಆದ್ದರಿಂದ ರಕ್ತ ದೇಹದ ಇತರ ಭಾಗಗಳಿಗೆ ಸರಿಯಾಗಿ ಹರಿಯುವುದಿಲ್ಲ. ಉದಾಹರಣೆಗೆ ನೂರು ಮಿಲಿ ಲೀಟರ್ ರಕ್ತ ಹರಿಯುವ ಬದಲು 50 ಮಿಲಿ ಲೀಟರ್ ಹರಿಯುತ್ತದೆ. ಇಂತಹ ಸಮಸ್ಯೆಯೂ ಕುಟುಂಬದವರಲ್ಲಿ ಯಾರಿಗಾದರೂ ಇದ್ದರೆ ಇತರರಿಗೂ ಬರಬಹುದಾಗಿದೆ.

    03ಅಯೋರ್ಟಾದಲ್ಲಿ ಬಲ ಮತ್ತು ಎಡ ಭಾಗದಿಂದ ಬರುವ ಕರೊನರಿ ರಕ್ತನಾಳಗಳು ಸಹಜವಾಗಿ ಇರುವೆಡೆ ಇಲ್ಲವೇ ಬೇರೆ ಮೂಲಗಳಿಂದ ಹುಟ್ಟುವುದರಿಂದ ಅಯೋರ್ಟಾ ಹಿಗ್ಗಿದಾಗ ರಕ್ತನಾಳಗಳು ಕುಗ್ಗಿ ರಕ್ತ ಸರಾಗವಾಗಿ ಹರಿಯುವುದಿಲ್ಲ. ಹೃದಯದಿಂದ ರಕ್ತ ಪರಿಚಲನೆ ಸರಿಯಾಗಿ ಆಗದೇ ಇದ್ದರೆ ತೊಂದರೆಯಾಗುವುದು.

    04 ಮಿದುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಅನ್ಯೂರಿ ಸಮ್ ಆಗಿ ಪುಟ್ಟ ಬಟಾಣಿ ಗಾತ್ರದ ಗುಳ್ಳೆಯಾಗಿದ್ದು ಅದು ಒಡೆದು ಹೋದಲ್ಲಿ ಅಂದರೆ 20 ಮಿಲಿ ಲೀಟರ್ ರಕ್ತಸ್ರಾವವಾದರೂ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಅಂದರೆ ಗುರುತಿಸಲು ಸಾಧ್ಯವಾಗುವ ಯಾವ ತೊಂದರೆಯೂ ಅಲ್ಲ. ಈಚಿನ ದಿನಗಳಲ್ಲಿ ಶಿಶುವಿದ್ದಾಗ ಮತ್ತು ಶಾಲಾ ದಿನಗಳಲ್ಲಿ ಮಕ್ಕಳ ಹೃದಯ ಪರೀಕ್ಷೆ ಮಾಡಲಾಗುತ್ತದೆ. ಆದರೆ ಆ ಪರೀಕ್ಷೆಗಳು ಈ ರೋಗ ತಡೆಗಟ್ಟಲು ಎಷ್ಟು ಸಹಾಯಕ ಎಂದು ಹೇಳಲು ಸಾಧ್ಯವಾಗಿಲ್ಲ ಅಥವಾ ಆ ಪರೀಕ್ಷೆಗಳು ಇಂದು ಉಪಯುಕ್ತವಲ್ಲ ಎನ್ನಲೂ ಆಗಿಲ್ಲ.

    12 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಹಠಾತ್ ಸಾವು ಉಂಟಾಗುತ್ತದೆ. ಅದಕ್ಕೆSudden Unexplained Death in Children (SUDC) ಎನ್ನುತ್ತಾರೆ. ಆದರೆ ಇದಕ್ಕೆ ನಿಖರ ಕಾರಣ ತಿಳಿದಿಲ್ಲ. ಶವಪರೀಕ್ಷೆಯ ನಂತರ, ಘಟನೆಯ ಸ್ಥಳ ಮತ್ತು ಮಗುವಿನ ವೈದ್ಯಕೀಯ ಇತಿಹಾಸದ ವಿವರವಾದ ಅಧ್ಯಯನ ನಡೆಸಿದರೆ ಸಾವಿಗೆ ಕಾರಣವನ್ನು ಗುರುತಿಸಲು ಸಾಧ್ಯ.

    ಸಾವಿಗೆ ಕಾರಣಗಳೇನು?

    ಮಕ್ಕಳು ಆಹಾರ ಸೇವನೆ ಸರಿಯಾಗಿ ಮಾಡದಿರುವುದು, ನೀರು ಕುಡಿಯದಿರುವುದು ಅಂದರೆ ನಿರ್ಜಲೀಕರಣ (ಈಛಿಜಢಛ್ಟಚಠಿಜಿಟ್ಞ) ಆಗಿ ಸುಸ್ತಾದ ಸಂದರ್ಭದಲ್ಲಿ ಬಿಸಿಲಿನಲ್ಲಿ ಆಟ ಆಡುವುದರಿಂದ ಇಲ್ಲವೇ ದೇಹಕ್ಕೆ ಶ್ರಮವಾಗುವ ನೃತ್ಯ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾಂಸಖಂಡಗಳು ಮತ್ತು ಸ್ನಾಯುಗಳು ಮತ್ತಷ್ಟು ಸೋತು ಮಿದುಳಿಗೆ ಆಮ್ಲಜನಕ ಪೂರೈಕೆಯಾಗದೇ ಹಠಾತ್ ಸಾವು ಸಂಭವಿಸಬಹುದು.

    ಮುನ್ನೆಚ್ಚರಿಕಾ ಕ್ರಮಗಳೇನು?

    ಮಕ್ಕಳಲ್ಲಿ ಎದುರಾಗಬಹುದಾದ ಹಠಾತ್ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆಗಾಗ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಮಕ್ಕಳು ಸ್ವಲ್ಪ ಆಟವಾಡಿದರೂ ಪದೇ ಪದೇ ಸುಸ್ತಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

    ಮಕ್ಕಳು ಸೇವಿಸುವ ಆಹಾರ, ನೀರು ಅವರ ಚಟುವಟಿಕೆಗಳು ಎಲ್ಲದರ ಕಡೆಗೂ ಗಮನ ನೀಡುವುದು ಬಹಳ ಮುಖ್ಯ.

    ಮಕ್ಕಳಿಗೆ ಹಸಿರು ಸೊಪ್ಪು, ತರಕಾರಿ, ಹಣ್ಣುಗಳು, ಮೊಟ್ಟೆ, ಹಾಲು ಮತ್ತು ತುಪ್ಪ ನೀಡಬೇಕು. ಬೆಳೆಯುತ್ತಿರುವ ಮಕ್ಕಳಿಗೆ ಕಾಬೋಹೈಡ್ರೇಟ್ಸ್, ಪ್ರೊಟೀನ್, ಕೊಬ್ಬು, ನಾರಿನಂಶ, ವಿಟಮಿನ್ ಮತ್ತು ಖನಿಜಾಂಶಭರಿತ ಆಹಾರ ಇರಲೇಬೇಕು.

    ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರು ಕುಡಿಯಲು ಮಕ್ಕಳಿಗೆ ಹೇಳಿ.

    ಬಿಸಿಲಲ್ಲಿ ಆಟವಾಡುವಾಗ ತಲೆಗೆ ಕ್ಯಾಪ್ ಹಾಕಿಕೊಳ್ಳುವುದು, ಆಗಾಗ ತಣ್ಣೀರು ಬಟ್ಟೆಯಿಂದ ಮುಖ ಮತ್ತು ಮೈ ಒರೆಸಿಕೊಳ್ಳಲು ಹೇಳಬೇಕು.

    ಜ್ವರ ಇಲ್ಲವೇ ಮತ್ತಿತರ ಸೋಂಕುಗಳಿದ್ದ ಸಂದರ್ಭದಲ್ಲಿ ತರಗತಿಯ ಶಿಕ್ಷಕರಿಗೆ ಮಗುವಿನ ಆರೋಗ್ಯ ವಿಷಯ ತಿಳಿಸಬೇಕಾದುದು ಬಹಳ ಮುಖ್ಯ.

    ಮಕ್ಕಳನ್ನು ದಂತದ ಬೊಂಬೆಯಂತೆ ಸಾಕಬೇಡಿ

    ಶಾಲೆ ಸಮೀಪವಿದ್ದರೂ ಮಕ್ಕಳನ್ನು ನಡೆದುಹೋಗಲು ಪಾಲಕರು ಬಿಡುವುದಿಲ್ಲ, 2-3 ಫ್ಲೋರ್​ಗಳಿದ್ದರೂ ಲಿಫ್ಟೇ ಬೇಕು. ಎಲ್ಲಿ ಮಕ್ಕಳಿಗೆ ಸುಸ್ತಾಗಿ ಬಿಡುತ್ತದೋ ಎಂಬ ಆತಂಕ ಪಾಲಕರದ್ದು. ಹಿಂದೆ ಅಡುತ್ತಿದ್ದ ಚಿನ್ನಿದಾಂಡು, ಮರಕೋತಿ, ಗೋಲಿ ಆಟ ಈಗಿನ ಹೆಚ್ಚಿನ ಮಕ್ಕಳಿಗೆ ತಿಳಿದೇ ಇಲ್ಲ. ಎಳೆಬಿಸಿಲು ಮೈ ಸೋಕದಂತೆ, ಮಕ್ಕಳನ್ನು ದಂತದ ಬೊಂಬೆಯ ಹಾಗೆ ಸಾಕಿಬಿಟ್ಟರೆ, ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಮಸ್ಯೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ರಕ್ತಹೀನತೆ, ಕಬ್ಬಿಣಾಂಶದ ಕೊರತೆ ಅಧಿಕವಾಗುತ್ತಿದೆ. ಕಬ್ಬಿಣಾಂಶ ಇರುವ ಹಣ್ಣು, ತರಕಾರಿಗಳು ರಾಸಾಯನಿಕದಿಂದಾಗಿ ವಿಷಮುಕ್ತವಾಗಿಬಿಟ್ಟಿವೆ. ಆದ್ದರಿಂದ ಸಾಧ್ಯವಿದ್ದಲ್ಲಿ ಮನೆಯಲ್ಲಿಯೇ ತರಕಾರಿ ಬೆಳೆದು ಮಕ್ಕಳಿಗೆ ನೀಡಿ. ಬೆಳಗ್ಗೆ ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಬ್ರೇಕ್​ಫಾಸ್ಟ್ ಸ್ಕಿಪ್ ಮಾಡುವ ಮಕ್ಕಳಿಗೆ ಅಮ್ಮಂದಿರು ಬಾಕ್ಸ್​ನಲ್ಲಿ ಚಿಪ್ಸ್ ಹಾಕಿ ಕೊಡುತ್ತಾರೆ. ಇದು ಮಕ್ಕಳ ಹಸಿವನ್ನು ನೀಗಿಸಬಹುದು, ಆದರೆ ದೇಹದಲ್ಲಿ ವಿಷ ತುಂಬಿಸುತ್ತವೆ. ಜತೆಗೆ ಮನೆಯಲ್ಲಿ ಮೈಕ್ರೋವೋವನ್​ನಲ್ಲಿ ಅಡುಗೆ ಮಾಡುವುದು, ವಿಪರೀತ ಪ್ಲಾಸ್ಟಿಕ್ ಬಳಸುವುದು ಕೂಡ ಮಕ್ಕಳ ಆಯಸ್ಸನ್ನು ಕಡಿಮೆ ಮಾಡುತ್ತಿವೆ. | ಡಾ. ರಾಮದಾಸ ಮಲ್ಯ ಜನರಲ್ ಪ್ರಾಕ್ಟೀಷನರ್

    ತಜ್ಞ ವೈದ್ಯರ ಅಭಿಮತ

    ಸಾಮರ್ಥ್ಯ ಮೀರಿ ಕೆಲಸ ಮಾಡಿದಾಗ

    ಪ್ರತಿಯೊಂದು ಸಾವಿಗೂ ನಿಖರವಾಗಿ ಇದೇ ರೀತಿಯ ಕಾರಣ ಎಂದು ಹೇಳಲಾಗದು. ಆದರೆ ಸಾಮಾನ್ಯವಾಗಿ ಹೇಳುವುದಾದರೆ ಇವು ಹೃದ್ರೋಗದಿಂದ ಉಂಟಾದ ಸಾವಲ್ಲ, ಬದಲಿಗೆ ಇದು ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್). ಸ್ವಲ್ಪವೂ ದೈಹಿಕ ಚಟುವಟಿಕೆಯಿಲ್ಲದ ಮಗುವೊಂದು ಏಕಾಏಕಿ ತನ್ನ ಸಾಮರ್ಥ್ಯಮೀರಿ ಯಾವುದಾದರೊಂದು ಚಟುವಟಿಕೆ ಮಾಡಿದಾಗ ಈ ಸಮಸ್ಯೆ ಉಂಟಾಗುತ್ತದೆ. ಅರ್ಧ ಕಿಲೋಮೀಟರ್ ಕೂಡ ವಾಕ್ ಮಾಡದ ಮಕ್ಕಳಿಗೆ ಒಂದೇ ಸಲಕ್ಕೆ ನಾಲ್ಕೈದು ಕಿ.ಮೀ ಓಡಿಸಿದರೆ ಅಥವಾ ಒಂದೇ ಒಂದು ಫ್ಲೋರ್ ಹತ್ತದ ಮಕ್ಕಳಿಗೆ ಬೆಟ್ಟ ಹತ್ತಿಸಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ಹೃದಯಕ್ಕೆ ಇಲ್ಲದೇ ಇಂಥ ಅನಾಹುತ ಘಟಿಸುತ್ತದೆ.

    | ಡಾ. ಧನಂಜಯ ಟಿ.ಎಸ್, ತಾಲೂಕು ಆರೋಗ್ಯಾಧಿಕಾರಿ, ನಾಗಮಂಗಲ, ಮಂಡ್ಯ

    ಕಫ ಮತ್ತು ಪಿತ್ತ ದೋಷ

    ದೊಡ್ಡವರಂತೆಯೇ ಮಕ್ಕಳಲ್ಲಿಯೂ ಕೆಲವೊಮ್ಮೆ ಹೃದಯ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಮಕ್ಕಳಿಗೆ ಏನು ಸಮಸ್ಯೆ ಬರಲು ಸಾಧ್ಯ ಎಂದುಕೊಂಡು ಪಾಲಕರು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಇದರ ಜತೆಗೆ, ಕಫ ಮತ್ತು ಪಿತ್ತ ದೋಷ ಹೆಚ್ಚಿದ್ದರೆ, ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ (ಅನಿಮಿಕ್) ಹೃದಯಕ್ಕೆ ರಕ್ತ ಮತ್ತು ಆಕ್ಸಿಜನ್ ಪೂರೈಕೆ ಸರಿಯಾಗಿ ಆಗದೇ ಈ ಸಮಸ್ಯೆ ಉಂಟಾಗುತ್ತದೆ. ಚಿಕ್ಕ ಸಮಸ್ಯೆ ಎದುರಾದರೂ ಪಾಲಕರು ಎಚ್ಚರಿಕೆ ತೆಗೆದುಕೊಳ್ಳಬೇಕು.

    | ಡಾ. ಜಿ. ವಿಶ್ವನಾಥ್ ಆಯುರ್ವೆದ ತಜ್ಞರು

    ತುಪ್ಪ ತಿನ್ನಿಸಿ ನೋಡಿ…

    ಮಕ್ಕಳ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಸ್ಮಾರ್ಟ್​ಫೋನ್ ಬಳಕೆ ಪ್ರಮುಖ ಕಾರಣವಾಗಿದೆ. ಫೋನ್ ಹೊರಸೂಸುವ ವಿಕಿರಣ ಮಕ್ಕಳ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ ಎಳವೆಯಲ್ಲಿಯೇ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಮನೆ ಮತ್ತು ಶಾಲೆಗಳಲ್ಲಿ ಮಕ್ಕಳ ಮೇಲೆ ವಿಪರೀತ ಒತ್ತಡ ಹೇರುತ್ತಿರುವುದು ಕೂಡ ಇನ್ನೊಂದು ಕಾರಣ. ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಫಾಸ್ಟ್ ಫುಡ್ ತಿಂಡಿ ಕಡಿಮೆ ಮಾಡಿ. ತುಪ್ಪದ ಬಗ್ಗೆ ತಪು್ಪ ಕಲ್ಪನೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಆದರೆ ತುಪ್ಪವನ್ನು ಮಕ್ಕಳಿಗೆ ತಿನ್ನಿಸುತ್ತ ಬನ್ನಿ. ಇದರ ಪ್ರಯೋಜನ ತಿಳಿಯುತ್ತದೆ.

    | ಡಾ. ಸಾವಿತ್ರಿ ಎಸ್.ಜಿ ಮಕ್ಕಳ ತಜ್ಞೆ, ಕನ್​ಸಲ್ಟಿಂಗ್ ಫಿಸೀಷಿಯನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts