More

    ಉರುಳದ ಟಾಂಗಾವಾಲಾಗಳ ಬದುಕಿನ ಬಂಡಿ

    ದಸರೆ ಸಮೀಪಿಸುತ್ತಿದ್ದರೂ ಬೀದಿಗಿಳಿಯದ ಟಾಂಗಾಗಳು


    ಅವಿನಾಶ್ ಜೈನಹಳ್ಳಿ ಮೈಸೂರು
    ಅನೇಕ ವರ್ಷಗಳಿಂದ ನಿರ್ಲಕ್ಷೃಕ್ಕೆ ಒಳಗಾಗಿರುವ ಸಾಂಸ್ಕೃತಿಕ ನಗರಿಯ ಟಾಂಗಾವಾಲಾಗಳಿಗೆ ಈ ಬಾರಿಯ ದಸರಾ, ಬದುಕಿನ ಬಂಡಿ ಎಳೆಯಲು ನೆರವಾಗುವುದೇ ಎಂಬ ಪ್ರಶ್ನೆ ಕಾಡತೊಡಗಿದೆ…!


    ಕೋವಿಡ್ ಕಾರಣಕ್ಕೆ ಅದ್ದೂರಿಯಿಂದ ಮರೆಯಾಗಿದ್ದ ನಾಡಹಬ್ಬ ದಸರಾ ಮಹೋತ್ಸವ ಈ ವರ್ಷ ಮತ್ತೆ ವೈಭವ ತುಂಬಿಕೊಂಡು ರಸದೌತಣ ನೀಡಲು ಸಿದ್ಧತೆ ನಡೆದಿದೆ. ಏತನ್ಮಧ್ಯೆ, ಟಾಂಗಾವಾಲಾಗಳ ಬದುಕು ಸಹ ಕೋವಿಡ್ ಕಾರಣಕ್ಕೆ ಕಮರಿಹೋಗಿತ್ತು. ಇದೀಗ ಅದ್ದೂರಿ ದಸರಾ ಆಚರಣೆಗೆ ಸಿದ್ಧತೆ ನಡೆದಿದ್ದರೂ ಬಡ ಟಾಂಗಾವಾಲಾಗಳ ಬದುಕಿನಲ್ಲಿ ಇನ್ನೂ ಭರವಸೆಯ ಬೆಳಕು ಮೂಡಿಲ್ಲ.


    ಒಂದು ಕಾಲದಲ್ಲಿ ಮೈಸೂರು ನಗರದ ಸಂಚಾರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾವಾಲಾಗಳಿಂದು ಸರ್ಕಾರದ ಪ್ರೋತ್ಸಾಹ ಮತ್ತು ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದಾರೆ. ದಸರಾ ಸಂಭ್ರಮದಲ್ಲಿರುವ ಸಚಿವರು, ಅಧಿಕಾರಿಗಳು ಈ ಬಾರಿಯಾದರೂ ಟಾಂಗಾವಾಲಾಗಳ ಕೈ ಹಿಡಿಯಬೇಕಾಗಿದೆ. ಮೈಸೂರಿಗೆ ಪಾರಂಪರಿಕ ನಗರ ಪಟ್ಟ ತಂದುಕೊಡುವಲ್ಲಿ ಟಾಂಗಾವಾಲಾಗಳ ಪಾತ್ರವೂ ದೊಡ್ಡದು. ಆದರೀಗ ಸರ್ಕಾರದ ಪ್ರೋತ್ಸಾಹವಿಲ್ಲದೆ, ಸಂಪಾದನೆ ಕೊರತೆಯಿಂದ ಜೀವನ ನಡೆಸಲು ಪರದಾಡುತ್ತಿದ್ದಾರೆ.


    ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನಗರದ 50 ಟಾಂಗಾವಾಲಾಗಳಿಗೆ ಎರಡು ಜೊತೆ ಸಾಂಪ್ರದಾಯಿಕ ಉಡುಗೆ, ಪೇಟ ನೀಡಿದ್ದು ಬಿಟ್ಟರೆ ಅನೇಕ ವರ್ಷಗಳಿಂದಲೂ ಜಿಲ್ಲಾಡಳಿತ ದಸರಾ ಸಂದರ್ಭದಲ್ಲಿ ಇವರನ್ನು ಮರೆಯುತ್ತ ಬಂದಿದ್ದು, ಈ ಬಾರಿಯೂ ಮರೆತಂತೆ ಕಾಣುತ್ತಿದೆ. ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರತಿಯೊಬ್ಬರಿಗೂ ಎರಡು ಸಾವಿರ ರೂ. ಮತ್ತು ಸರ್ಕಾರಿ ವೆಚ್ಚದಲ್ಲಿ ಟಾಂಗಾಗಳಿಗೆ ಬಣ್ಣ ಬಳಿಸಲಾಗುತ್ತಿತ್ತು. ದಸರಾದಲ್ಲಿ ಕೇವಲ ಗೌರವಧನವೆಂದು 500 ರೂ. ಅಥವಾ 1000 ರೂ. ಕೊಡಲಾಗುತ್ತಿತ್ತು. ಆದರೆ, ನಂತರದ ವರ್ಷಗಳಿಂದ ಯಾವುದೇ ಗೌರವಧನವಾಗಲಿ, ಇತರ ಸೌಲಭ್ಯವಾಗಲಿ ದೊರೆತಿಲ್ಲ. ಟಾಂಗಾವಾಲಾಗಳ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಬೇಕು. ಟಾಂಗಾಗಳ ನೋಂದಣಿ ಮಾಡಿಸಿ, ಸಮವಸ್ತ್ರ ವಿತರಿಸುವ ಜತೆಗೆ, ಗೌರವಧನ ನೀಡಿದರೆ ಅನುಕೂಲವಾಗಲಿದೆ. ದಸರೆಗೆ ಟಾಂಗಾಗಳು ಮೆರುಗು ನೀಡುವುದರಿಂದ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅಥವಾ ಪಾಲಿಕೆ ಇವರ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗಾದರೆ ಮಾತ್ರ ಟಾಂಗಾಗಳು ಮರುಜೀವ ಪಡೆಯುತ್ತವೆ.

    ಕಡಿಮೆಯಾದ ಟಾಂಗಾವಾಲಗಳ ಸಂಖ್ಯೆ:
    ಈ ಹಿಂದೆ ನಗರದಲ್ಲಿ ಸಾವಿರಕ್ಕೂ ಹೆಚ್ಚಿನ ಟಾಂಗಾ ಗಾಡಿಗಳಿದ್ದವು. ದಸರಾ ಸಮಯದಲ್ಲಿ ಟಾಂಗಾಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತಲ್ಲದೆ, ದಸರಾ ಮೆರವಣಿಗೆಯಲ್ಲಿಯೂ ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಈ ಹಿಂದೆ ನಗರದಲ್ಲಿ ಸಾವಿರಕ್ಕೂ ಹೆಚ್ಚಿನ ಟಾಂಗಾ ಇದ್ದವು. ಆದರೆ ಸದ್ಯ 100ರಿಂದ 110 ಟಾಂಗಾಗಳಿದ್ದು, ಇದನ್ನು ನಂಬಿ 80-100 ಟಾಂಗಾವಾಲಾಗಳು ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಪ್ರೋತ್ಸಾಹ ಇಲ್ಲದೆ ಮತ್ತು ಸಂಪಾದನೆ ಕೊರತೆಯಿಂದ ಜೀವನ ನಡೆಸಲು ಮೊದಲೇ ಪರದಾಡುತ್ತಿದ್ದರು. ಈ ನಡುವೆ, ಎರಡು ವರ್ಷಗಳ ಕಾಲ ಆರ್ಭಟಿಸಿದ ಮಹಾಮಾರಿ ಕರೊನಾ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಹಿಂದೆ ಪ್ರತಿಯೊಬ್ಬ ಟಾಂಗಾವಾಲಾ ದಿನಕ್ಕೆ ಸಾವಿರ ರೂ.ಗಳಿಗೂ ಹೆಚ್ಚು ಸಂಪಾದಿಸುತ್ತಿದ್ದರು. ಅಷ್ಟು ಹಣದಲ್ಲಿ ಕುದುರೆ ಸಾಕುವ ಜತೆಗೆ, ತಮ್ಮ ಕುಟುಂಬ ನಿರ್ವಹಣೆಯನ್ನೂ ಮಾಡುತ್ತಿದ್ದರು. ಆದರೆ ಈಗ ದಿನಕ್ಕೆ 400-500 ರೂ. ಸಂಪಾದಿಸುತ್ತಿದ್ದಾರೆ. ಪ್ರತಿದಿನ ಕುದುರೆ ನಿರ್ವಹಣೆಗೆ 200 ರೂ. ಅವಶ್ಯಕತೆ ಇದ್ದು, ಉಳಿದ ಹಣದಲ್ಲಿ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಹೀಗಾಗಿ, ಕಷ್ಟದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಟಾಂಗಾವಾಲಾ ಫಯಾಜ್ ಅಹಮದ್.


    ಟಾಂಗಾ ಶೃಂಗಾರಗೊಂಡಿಲ್ಲ, ಕುದುರೆ ಮಿಂಚುತ್ತಿಲ್ಲ:
    ಅನೇಕ ವರ್ಷಗಳಿಂದ ಜಿಲ್ಲಾಡಳಿತ ಗೌರವಧನ ನೀಡದೆ ಸತಾಯಿಸುತ್ತಿದೆ. ಈ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳನ್ನು ಟಾಂಗಾ ಗಾಡಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಟಾಂಗಾವಾಲಾಗಳಿಗೆ ನೆರವಾಗುತ್ತಿತ್ತು. ಆದರೆ, ಈಗ ಅದನ್ನೂ ನಿಲ್ಲಿಸಲಾಗಿದೆ. ದಸರಾ ಬಂದರೆ ಸಾಕು ಟಾಂಗಾವಾಲಾಗಳು ಪ್ರವಾಸಿಗರನ್ನು ಸೆಳೆಯಲು ವಿವಿಧ ರೀತಿಯಲ್ಲಿ ತಮ್ಮ ಗಾಡಿಗಳನ್ನು ಪೈಪೋಟಿಗೆ ಬಿದ್ದು ಸಿಂಗರಿಸಿ ಅಣಿಗೊಳಿಸುತ್ತಿದ್ದರು. ಆದರೆ, ಈ ಬಾರಿ ದಸರಾ ಚಟುವಟಿಕೆಗಳು ಶುರುವಾದರೂ ಟಾಂಗಾಗಳು ಶೃಂಗಾರಗೊಂಡಿಲ್ಲ, ಕುದುರೆಗಳು ಮಿಂಚುತ್ತಿಲ್ಲ.


    ಟಾಂಗಾ ತಿಹಾಸ ದೊಡ್ಡದು:
    ಸಾಂಸ್ಕೃತಿಕ ನಗರಿಯಲ್ಲಿ ಟಾಂಗಾ ಗಾಡಿಗಳ ಇತಿಹಾಸ ಬಹಳ ದೊಡ್ಡದು. ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿಯೇ ಜನರು ಸಾಗುತ್ತಿದ್ದರು. ಟಾಂಗಾ ಬಂದಿದ್ದು 1897ರಲ್ಲಿ. ಅಂದಿನ ದಿನಗಳಲ್ಲಿ ಟಾಂಗಾ ಹೆಚ್ಚಿನ ಜನಪ್ರಿಯತೆ ಪಡೆದಿದ್ದವು. ಅವುಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯಾಗಿತ್ತು. ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು.
    ಹಿಂದೆ ಮೈಸೂರು ನಗರದ ಜತೆಗೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರದಲ್ಲಿಯೂ ಟಾಂಗಾ ಜನಪ್ರಿಯತೆ ಗಳಿಸಿದ್ದವು. ಬಾಂಬೆಯ ವಿಕ್ಟೋರಿಯಾ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಆದರೆ, ಈಗ ಮೈಸೂರು ಹೊರತಾಗಿ ಉಳಿದ ಕಡೆ ಟಾಂಗಾ ಮರೆಯಾಗಿವೆ. 2010ರಲ್ಲಿ ಜೆ-ನರ್ಮ್ ಯೋಜನೆಯಡಿ ಟಾಂಗಾವಾಲಾಗಳಿಗೆ 20 ಹೊಸ ಸಾರೋಟು ಹಾಗೂ 20 ಕುದುರೆ ಮಂಜೂರು ಮಾಡಲಾಗಿತ್ತು. ಆದರೆ, ಈ ಪೈಕಿ 10 ಸಾರೋಟು ಹಾಗೂ 10 ಕುದುರೆಗಳನ್ನು ಮಾತ್ರ ಟಾಂಗಾವಾಲಾಗಳ ಸಂಘಕ್ಕೆ ನೀಡಲಾಗಿದೆ. ಉಳಿದವುಗಳನ್ನು ಇನ್ನೂ ನೀಡಿಲ್ಲ ಎನ್ನುತ್ತಾರೆ ಸಂಘದ ಅಧ್ಯಕ್ಷ ಫಯಾಜ್ ಅಹಮದ್.

    ಜಿಲ್ಲಾಡಳಿತ ಟಾಂಗಾವಾಲಾಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಬೇಕು. ಅಗ್ರಹಾರ, ಕುಕ್ಕರಹಳ್ಳಿಕೆರೆ, ಸಯ್ಯಜಿರಾವ್ ರಸ್ತೆ ಸೇರಿದಂತೆ ಟಾಂಗಾ ನಿಲ್ದಾಣಗಳಲ್ಲಿ ಕುದುರೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ದೊಡ್ಡ ಚರ್ಚ್, ರೈಲ್ವೆ ನಿಲ್ದಾಣ, ಮಂಡಿ ಮೊಹಲ್ಲಾದಲ್ಲಿ ಹೊಸದಾಗಿ ಟಾಂಗಾ ನಿಲ್ದಾಣ ನಿರ್ಮಿಸಬೇಕು.
    ಫಯಾಜ್ ಅಹಮದ್
    ಮೈಸೂರು ಟಾಂಗಾವಾಲಗಳ ಸಂಘದ ಅಧ್ಯಕ್ಷ

    ಟಾಂಗಾವಾಲಾಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸಲು ನಮ್ಮ ಇಲಾಖೆ ವತಿಯಿಂದ ಯಾವುದೇ ಸೂಚನೆ ಬಂದಿಲ್ಲ.
    ರಾಘವೇಂದ್ರ
    ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts