More

    ಬೆಟ್ಟಿಂಗ್ ಭರಾಟೆ ಜೋರು..!

    ಚಡಚಣ: ಸ್ಥಳೀಯ ಪಪಂನ 16 ವಾರ್ಡ್‌ಗಳ ಚುನಾವಣೆಯ ಮತದಾನ ಬುಧವಾರ ಅಂತ್ಯವಾಗಿದ್ದು, ಎಲ್ಲರ ಚಿತ್ತ ಶನಿವಾರ ಹೊರಬೀಳುವ ಫಲಿತಾಂಶದತ್ತ ನೆಟ್ಟಿದೆ. ಇದರ ಮಧ್ಯೆದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ.

    ಡಿ. 30ರಂದು ಪಟ್ಟಣದ ಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಎಲ್ಲ ಪಕ್ಷಗಳಲ್ಲಿ ಜೋರಾಗಿದೆ. ಜತೆಗೆ ನಮ್ಮವರ ಗೆಲುವು ಖಚಿತ ಎಂದು ಬಾಜಿ (ಬೆಟ್ಟಿಂಗ್) ಕೂಡಾ ಜೋರಾಗಿ ನಡೆಯುತ್ತಿದೆ. ಶೇ. 74ರಷ್ಟು ಮತದಾನವಾಗಿದ್ದು, ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ 41 ಅಭ್ಯರ್ಥಿಗಳು ತಮ್ಮ ಪರವಾಗಿದ್ದ ಮತದಾರರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸಿದ್ದಾರೆ. ಆದರೆ ಮತಪೆಟ್ಟಿಗೆಯಲ್ಲಿ ಭದ್ರವಾಗಿರುವ ಭವಿಷ್ಯದ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ.

    ಪಟ್ಟಣದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ಕಾಂಚಾಣವು ಈ ಚುನಾವಣೆಯಲ್ಲಿ ಸದ್ದು ಮಾಡಿದೆ ಎನ್ನಲಾಗುತ್ತಿದೆ. ಕತ್ತಲ ರಾತ್ರಿಯ ದಿನ ಕುರುಡ ಕಾಂಚಾಣ ಯಾರಿಗೆ ಎಲ್ಲಿ ಸೇರಿಸಬೇಕೋ ಅಲ್ಲೆಲ್ಲಾ ಅಚ್ಚುಕಟ್ಟಾಗಿ ಸೇರಿದ್ದು, ಮತದಾನವೂ ಭರ್ಜರಿಯಾಗಿ ನಡೆದಿದೆ. ಆದರೆ ದುಡ್ಡು ಪಡೆದವರು ಅದೇ ಅಭ್ಯರ್ಥಿಗೆ ಮತ ಹಾಕಿದ್ದಾರೆಯೇ ಎಂಬುದು ಶನಿವಾರ ಬಯಲಾಗಲಿದೆ.

    ಈ ಚುನಾವಣೆಯಲ್ಲಿ ಕೆಲ ಬುದ್ಧಿವಂತ ಮತದಾರರು ಅಭ್ಯರ್ಥಿಗಳಿಂದ ಸಿಕ್ಕಷ್ಟು ಬಾಚಿಕೊಂಡಿದ್ದಾರೆ. ಅತಿಹೆಚ್ಚು ದುಡ್ಡು ಕೊಟ್ಟವರು ಗೆಲ್ಲುತ್ತಾರೋ ಅಥವಾ ಪಕ್ಷನಿಷ್ಠೆ ಗೆಲ್ಲುವುದೋ ಎಂಬುದು ಶನಿವಾರ ತಿಳಿದು ಬರಲಿದೆ. ಮತದಾನದ ನಂತರ ಎಲ್ಲ ಪಕ್ಷಗಳ ಮುಖಂಡರನ್ನು ಕರೆಯಿಸಿ ವಾರ್ಡ್ ಮಟ್ಟದಲ್ಲಿ ಆಗಿರುವ ಮತ ಚಲಾವಣೆಯ ಬಗ್ಗೆ ಅಭ್ಯರ್ಥಿಗಳು ಲೆಕ್ಕಾಚಾರ ನಡೆಸುತ್ತಿದ್ದಾರೆ. ನಮಗೆ ಯಾರು ಮತ ಹಾಕಿದ್ದಾರೆ ಎಂಬುದನ್ನು ಲೆಕ್ಕಹಾಕಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪಟ್ಟಣದ ಅತ್ಯಂತ ಹೈವೋಲ್ಟೇಜ್ ವಾರ್ಡ್‌ಗಳೆಂದು ಬಿಂಬಿತವಾಗಿದ್ದ ವಾರ್ಡ್ ನಂ. 4, 7, 9, 11, ಹಾಗೂ 12ರ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಲಕ್ಷದ ಲೆಕ್ಕದಲ್ಲಿ ಬಾಜಿ (ಬೆಟ್ಟಿಂಗ್) ಕೂಡ ಜೋರಾಗಿ ನಡೆಯುತ್ತಿದೆ. ಈ ವಾರ್ಡ್‌ಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿರುವುದರಿಂದ ಬೆಟ್ಟಿಂಗ್ ಸಹ ಚುರುಕಾಗಿದೆ. ಎಲ್ಲರ ಲೆಕ್ಕಾಚಾರಗಳಿಗೆ ಶನಿವಾರ ಮಧ್ಯಾಹ್ನದ ವೇಳೆಗೆ ಉತ್ತರ ದೊರೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts