More

    ಗೋಡೆ ಬರಹಗಾರರಿಗೆ ಉಗ್ರ ನಂಟು

    ಮಂಗಳೂರು: ನಗರದಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣ ಸಂಬಂಧ ಬಂಧಿತ ಇಬ್ಬರು ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ದೇಶದ್ರೋಹಿ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳಾದ ಮಹಮ್ಮದ್ ಶಾರೀಕ್(22) ಹಾಗೂ ಮಾಝ್ ಮುನೀರ್ ಅಹಮ್ಮದ್(21) ಎಂಬುವರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಇವರು ದೇಶದ್ರೋಹಿ ಸಂಘಟನೆಯೊಂದಿಗೆ ನಂಟು ಹೊಂದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮಾದರಿಯ ಗೋಡೆ ಬರಹಗಳು ಮತ್ತು ಅದಕ್ಕೆ ಸಿಗುತ್ತಿದ್ದ ಸ್ಪಂದನೆ ಗಮನಿಸಿ ಆರೋಪಿಗಳು ಮಂಗಳೂರಿನಲ್ಲಿ ಕೃತ್ಯ ನಡೆಸಿದ್ದರು.

    ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚೆ: ಮಹಾರಾಷ್ಟ್ರದ ಪುಣೆಯಲ್ಲಿರುವ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ವ್ಯಕ್ತಿ ಅಡ್ಮಿನ್ ಆಗಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಆರೋಪಿಗಳು ಸದಸ್ಯರು. ಅದರಲ್ಲಿ ವಿವಿಧ ರಾಜ್ಯಗಳ ನೂರಾರು ಸದಸ್ಯರಿದ್ದಾರೆ. ದೇಶದ್ರೋಹಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಗ್ರೂಪ್‌ನಲ್ಲಿ ನಿರಂತರ ಚರ್ಚೆ ನಡೆಯುತ್ತಿತ್ತು. ಇವರು ಕೂಡ ಚರ್ಚೆಯಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು. ಇದರಿಂದ ಪ್ರೇರಣೆ ಪಡೆದ ಆರೋಪಿಗಳಿಬ್ಬರು ಮಂಗಳೂರಿನಲ್ಲಿ ದೇಶದ್ರೋಹಿ ಗೋಡೆ ಬರಹದ ಮೂಲಕ ಜನರಲ್ಲಿ ಭಯದ ವಾತಾವರಣ ಬಿತ್ತಿದ್ದರು.

    ಕರಾವಳಿಯಲ್ಲೂ ವ್ಯವಸ್ಥಿತ ಜಾಲ!: ಕರಾವಳಿಯ ಹಲವು ಮಂದಿ ಈ ಗ್ರೂಪ್‌ನಲ್ಲಿ ಸದಸ್ಯರಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಉಳಿದವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಇದೊಂದು ವ್ಯವಸ್ಥಿತ ಉಗ್ರ ಜಾಲ. ಮಾಝ್ ಮುನೀರ್ ಅಹಮ್ಮದ್ ಮಂಗಳೂರಿನಲ್ಲಿ ಫುಡ್ ಡೆಲಿವರಿ ಕೆಲಸ ಮಾಡಿಕೊಂಡು ಇಲ್ಲಿನ ಮಾಹಿತಿಗಳನ್ನು ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾದ ಕಾರಣ ಶಿವಮೊಗ್ಗ ಜಿಲ್ಲೆ ಕೈಬಿಟ್ಟು ದೇಶದ್ರೋಹಿ ಬರಹ ಬರೆಯಲು ಮಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನ.27ರಂದು ಸರ್ಕ್ಯೂಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ರಸ್ತೆಯಲ್ಲಿ ಕದ್ರಿ ಕಂಬಳ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟೊಂದರ ಆವರಣ ಗೋಡೆಯಲ್ಲಿ ಹಾಗೂ 29ರಂದು ಮಂಗಳೂರು ಕೋರ್ಟ್ ಆವರಣದಲ್ಲಿರುವ ಪೊಲೀಸ್ ಹೊರ ಠಾಣೆಯ ಹಳೇ ಕಟ್ಟಡದ ಗೋಡೆಯಲ್ಲಿ ಉರ್ದು ಭಾಷೆಯಲ್ಲಿ ದೇಶದ್ರೋಹಿ ಬರಹ ಬರೆದಿರುವುದು ಗಮನಕ್ಕೆ ಬಂದಿತ್ತು. ಪೊಲೀಸರು ನಾಲ್ಕು ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.

    ಐಸಿಸ್ ಸಂಘಟನೆ ಬಗ್ಗೆ ಅಧ್ಯಯನ: ಆರೋಪಿಗಳು ಉಗ್ರ ಸಂಘಟನೆ ಐಸಿಸ್ ಬಗ್ಗೆ ಅಂತರ್ಜಾಲದಲ್ಲಿ ಗೂಗಲ್, ಯೂಟ್ಯೂಬ್‌ನಲ್ಲಿ ಜಾಲಾಡಿ ಅಧ್ಯಯನ ನಡೆಸುತ್ತಿದ್ದರು. ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿ ಅವರು ಸಂಗ್ರಹಿಸಿಟ್ಟಿದ್ದ ಸಾಹಿತ್ಯಗಳನ್ನು ಪೊಲೀಸರು ಆರೋಪಿಗಳ ಮನೆಗಳಿಂದ ವಶಕ್ಕೆ ಪಡೆದಿದ್ದಾರೆ. ಮಹಮ್ಮದ್ ಶಾರೀಕ್ ಬಿ.ಕಾಂ ಪದವೀಧರನಾಗಿದ್ದು, ಮಾಝ್ ಮುನೀರ್ ಅಹಮ್ಮದ್ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಉತ್ತಮ ಶಿಕ್ಷಣ ಪಡೆದು ಅದನ್ನು ಉಗ್ರ ಚಟುವಟಿಕೆಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಮೂಲಕ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದ್ದವರೊಂದಿಗೆ ನಂಟು ಹೊಂದಿರುವುದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.

    ಪೊಲೀಸ್ ಕಸ್ಟಡಿಗೆ: ಆರೋಪಿಗಳನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎರಡು ದಿನ ಕೋವಿಡ್ ಪರೀಕ್ಷೆ ನಡೆಸಲು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೋವಿಡ್ ವರದಿ ಬಂದ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲು ಮತ್ತೆ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದ್ದಾರೆ.

    ತನಿಖಾಧಿಕಾರಿ ಎಸಿಪಿ ಜಗದೀಶ್: ಆರೋಪಿಗಳ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅವರ ವಿರುದ್ಧ ಉಗ್ರ ಪರ, ದೇಶದ್ರೋಹ ಚಟುವಟಿಕೆಗಳು ಭಾರತೀಯ ದಂಡ ಸಂಹಿತೆ ಪ್ರಕಾರ ‘ಕಾನೂನು ಬಾಹಿರ ಸಂಘಟಿತ ಅಪರಾಧದಡಿ’ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಜಗದೀಶ್ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts