More

    ಎಂಎಸ್ ಧೋನಿ ಬಳಗದ ಟಿ20 ವಿಶ್ವಕಪ್ ಗೆಲುವಿಗೆ ಇಂದು 14 ವರ್ಷಗಳ ಸಂಭ್ರಮ

    ಬೆಂಗಳೂರು: ಚುಟುಕು ಕ್ರಿಕೆಟ್ ಇನ್ನೂ ಅಂಬೆಗಾಲಿಡುತ್ತಿದ್ದ ಸಮಯದಲ್ಲಿ ಎಂಎಸ್ ಧೋನಿ ಸಾರಥ್ಯದ ಯುವ ಆಟಗಾರರನ್ನು ಒಳಗೊಂಡ ಭಾರತ ತಂಡ ಟಿ20 ಕ್ರಿಕೆಟ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಕ್ಷಣಕ್ಕೆ ಶುಕ್ರವಾರ 14 ವರ್ಷಗಳು ತುಂಬಿವೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ಬಳಗ ಎಲ್ಲರ ನಿರೀಕ್ಷೆಗಳನ್ನು ಮೀರಿ ಪ್ರಶಸ್ತಿ ಗೆದ್ದು ಬೀಗಿತ್ತು. ಆ ಅಮೋಘ ಗೆಲುವಿನ ಹಾದಿಯ ಸಂಕ್ಷಿಪ್ತ ಮೆಲುಕು ಇಲ್ಲಿದೆ.

    ಭಾರತ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್
    ಒಟ್ಟು 12 ತಂಡಗಳು ಭಾಗವಹಿಸಿದ ಮತ್ತು 27 ಪಂದ್ಯಗಳು ನಡೆಯಲ್ಪಟ್ಟ 2007ರ ಚೊಚ್ಚಲ ಟಿ20 ವಿಶ್ವಕಪ್ ಭಾರತೀಯರ ಪಾಲಿಗೆ ರೋಚಕ ಮತ್ತು ಸ್ಮರಣೀಯ ಅನುಭವ. ಮೊದಲ ಮತ್ತು ಕೊನೆಯ ಮುಖಾಮುಖಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿದ್ದು ಮತ್ತೊಂದು ಥ್ರಿಲ್ಲಿಂಗ್ ಪಾಯಿಂಟ್. ಯುವ ಪಡೆಯೊಂದಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿದ್ದು ಕೂಡ ಅಮೋಘ ಸಾಧನೆ. ಭಾರತ ಆಡಬೇಕಾಗಿದ್ದ ಸ್ಕಾಟ್ಲೆಂಡ್ ವಿರುದ್ಧದ ಗ್ರೂಪ್ ಹಂತದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಭಾರತಕ್ಕೆ ನೀರಸವಾಗಿಯೇ ವಿಶ್ವಕಪ್ ಆರಂಭಗೊಂಡಿತ್ತು. ಪಾಕಿಸ್ತಾನ ವಿರುದ್ಧದ ಮುಂದಿನ ಪಂದ್ಯ ಟೈ ಆದರೂ ಬೌಲ್‌ಔಟ್‌ನಲ್ಲಿ ಭಾರತ ಗೆದ್ದು ಬೀಗಿತು. ಮುಂದೆ ಸೂಪರ್-8ರ ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋತಾಗ ಮತ್ತೆ ಒತ್ತಡ. ಸೆಮಿಫೈನಲ್‌ಗೇರಲು ಮುಂದಿನ ಎರಡೂ ಪಂದ್ಯ ಗೆಲ್ಲಬೇಕಾದ ಒತ್ತಡ. ಒತ್ತಡವನ್ನೂ ಮೀರಿ ನಿಂತ ಭಾರತ ತಂಡ ಇಂಗ್ಲೆಂಡ್ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಸೆಮಿಫೈನಲ್‌ನಲ್ಲಿ ಆಗಿನ ಏಕದಿನ ವಿಶ್ವಚಾಂಪಿಯನ್ ಆಸೀಸ್‌ಗೆ ಚಳ್ಳೆಹಣ್ಣು. 2007ರ ಸೆಪ್ಟೆಂಬರ್ 24ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಫೈನಲ್‌ನಲ್ಲಿ ಮತ್ತೆ ಪಾಕಿಸ್ತಾನ ವಿರುದ್ಧ 5 ರನ್‌ಗಳಿಂದ ರೋಚಕವಾಗಿ ಗೆದ್ದ ಭಾರತ ಟಿ20 ಕ್ರಿಕೆಟ್‌ನಲ್ಲಿನ್ನು ತನ್ನದೇ ಜಮಾನ ಎಂದು ಸಾರಿತ್ತು.

    ಭಾರತದ ಚಾಂಪಿಯನ್ ಹಾದಿ
    ಹಂತ, ಎದುರಾಳಿ, ಫಲಿತಾಂಶ,
    ಗ್ರೂಪ್, ಸ್ಕಾಟ್ಲೆಂಡ್, ಮಳೆಯಿಂದ ರದ್ದು
    ಗ್ರೂಪ್, ಪಾಕಿಸ್ತಾನ, ಟೈ, ಬೌಲ್‌ಔಟ್‌ನಲ್ಲಿ ಜಯ
    ಸೂಪರ್-8, ನ್ಯೂಜಿಲೆಂಡ್, 10 ರನ್ ಸೋಲು
    ಸೂಪರ್-8, ಇಂಗ್ಲೆಂಡ್, 18 ರನ್ ಜಯ
    ಸೂಪರ್-8, ದಕ್ಷಿಣ ಆಫ್ರಿಕಾ, 37 ರನ್ ಜಯ
    ಸೆಮಿಫೈನಲ್, ಆಸ್ಟ್ರೇಲಿಯಾ, 15 ರನ್ ಜಯ
    ಫೈನಲ್, ಪಾಕಿಸ್ತಾನ, 5 ರನ್ ಜಯ

    ಬೌಲ್ ಔಟ್ ಮಜಾ
    ಭಾರತ ಗಳಿಸಿದ 141 ರನ್‌ಗೆ ಪ್ರತಿಯಾಗಿ ಪಾಕ್ ಕೂಡ ಇಷ್ಟೇ ರನ್ ಗಳಿಸಿದ್ದರಿಂದ ಪಂದ್ಯ ಟೈ. ಆದರೆ, ಆಗ ಈಗಿನಂತೆ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಇರಲಿಲ್ಲ. ಬದಲಾಗಿ ಬೌಲ್‌ಔಟ್ ಇತ್ತು. ಅಂದರೆ ಐವರು ಆಟಗಾರರು ವಿಕೆಟ್‌ಗೆ ಚೆಂಡೆಸೆಯಬೇಕಾಗಿತ್ತು. ಹೆಚ್ಚು ಬಾರಿ ವಿಕೆಟ್ ಉರುಳಿಸಿದವರಿಗೆ ಗೆಲುವು ಒಲಿಯುತಿತ್ತು. ಇದರಲ್ಲಿ ಭಾರತದ ಪರ ಹರ್ಭಜನ್ ಮಾತ್ರವಲ್ಲದೆ, ಪಾರ್ಟ್‌ಟೈಮ್ ಬೌಲರ್ ಸೆಹ್ವಾಗ್ ಮತ್ತು ಬೌಲರೇ ಅಲ್ಲದೆ ರಾಬಿನ್ ಉತ್ತಪ್ಪ ವಿಕೆಟ್ ಉರುಳಿಸುವಲ್ಲಿ ಸಫಲವಾದರೆ, ಪಾಕ್ ಪರ ಬೌಲರ್‌ಗಳೇ ಆದ ಅರಾಫತ್, ಅಫ್ರಿದಿ, ಗುಲ್ ಎಲ್ಲರೂ ವಿಕೆಟ್‌ಗೆ ಚೆಂಡೆಸೆಯಲು ವಿಫಲರಾದರು. ಈ ಮೂಲಕ ಭಾರತ ಫುಟ್‌ಬಾಲ್ ಶೈಲಿಯಲ್ಲಿ 3-0ರಿಂದ ಗೆದ್ದಿತು!

    ಯುವಿ ಆರಕ್ಕೆ ಆರು
    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ವೇಗಿ ಸ್ಟುವರ್ಟ್ ಬ್ರಾಡ್‌ರ ಓವರ್‌ನ ಎಲ್ಲಾ 6 ಎಸೆತಗಳನ್ನು ಸಿಕ್ಸರ್‌ಗಟ್ಟಿ ಹೊಸ ಇತಿಹಾಸ ರಚಿಸಿದರು. ಅಲ್ಲದೆ ಹನ್ನೆರಡೇ ಎಸೆತಗಳಲ್ಲಿ 50 ರನ್ ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತಿವೇಗದ ಅರ್ಧಶತಕ ಸಾಧನೆ ಮೆರೆದರು. ಪಂದ್ಯದ ನಡುವೆ ಯುವರಾಜ್‌ರನ್ನು ಮಾತಿನಿಂದ ಕೆಣಕಿದ್ದು ಫ್ಲಿಂಟಾಫ್, ಆದರೆ ಅದಕ್ಕೆ ಬೆಲೆ ತೆತ್ತದ್ದು ಬ್ರಾಡ್!

    ಮಿಸ್ಬಾ ಜೀರೋ, ಜೋಗಿಂದರ್ ಹೀರೋ!
    ಭಾರತ-ಪಾಕ್ ನಡುವೆ ಫೈನಲ್ ಏರ್ಪಟ್ಟದ್ದೇ ಒಂದು ರೋಚಕ ಅನುಭವ. ಗಂಭೀರ್‌ರ (75) ಅರ್ಧಶತಕದ ಸಹಾಯದಿಂದ ಭಾರತ 5 ವಿಕೆಟ್‌ಗೆ 157 ರನ್ ಪೇರಿಸಿದರೆ, ಪಾಕಿಸ್ತಾನ ಮಿಸ್ಬಾ ಉಲ್ ಹಕ್‌ರ ಸಾಹಸದಿಂದ ಯಶಸ್ವಿ ಚೇಸಿಂಗ್‌ನತ್ತ ಮುನ್ನಡೆದಿತ್ತು. ಅದರಲ್ಲೂ ಕೊನೆಯ ಓವರ್‌ನಲ್ಲಿ ಪಾಕ್‌ಗೆ 13 ರನ್ ಬೇಕಿದ್ದಾಗ ಎಲ್ಲರೂ ತುದಿಗಾಲಲ್ಲಿ ನಿಲ್ಲಬೇಕಾದ ಪ್ರಸಂಗ. ಜೋಗಿಂದರ್ ಶರ್ಮ ಎಂಬ ಅನನುಭವಿ ಬೌಲರ್ ಎಸೆದ ಕೊನೆಯ ಓವರ್‌ನ ಮೊದಲ 2 ಎಸೆತಗಳಲ್ಲಿ ಮಿಸ್ಬಾ 1 ಸಿಕ್ಸರ್ ಸಹಿತ 7 ರನ್ ಕಸಿದಾಗ ಪಂದ್ಯ ಭಾರತದ ಕೈಜಾರುವ ಅಪಾಯ ಎದುರಾಯಿತು. ಆದರೆ, 3ನೇ ಎಸೆತದಲ್ಲಿ ಮಿಸ್ಬಾ ಎಡವಟ್ಟು ಮಾಡಿಕೊಂಡರು ಮತ್ತು ಭಾರತಕ್ಕೆ ಅದೃಷ್ಟ ಒಲಿಯಿತು. 4 ಎಸೆತಗಳಲ್ಲಿ 6 ರನ್ ಬೇಕಾಗಿದ್ದಾಗ ಸ್ಕೂಪ್ ಶಾಟ್‌ಗೆ ಕೈ ಹಾಕಿದ ಮಿಸ್ಬಾ, ಶ್ರೀಶಾಂತ್‌ಗೆ ಕ್ಯಾಚ್ ನೀಡಿದರು. ಆಗ ಶ್ರೀಶಾಂತ್ ಹಿಡಿದದ್ದು ಕೇವಲ ಕ್ಯಾಚ್ ಆಗಿರಲಿಲ್ಲ. ಬದಲಾಗಿ ಚೊಚ್ಚಲ ಟಿ20 ವಿಶ್ವಕಪ್ ಆಗಿತ್ತು!

    ಇನ್ನು ಬ್ಯಾಟ್ಸ್‌ಮನ್ ಅಲ್ಲ, ಬ್ಯಾಟರ್! ಲಿಂಗ ಸಮಾನತೆಗಾಗಿ ಬದಲಾದ ಕ್ರಿಕೆಟ್ ಪರಿಭಾಷೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts