More

    ಹಾನಿ ಭರಿಸಲು ತುರ್ತು ಕ್ರಮ ಕೈಗೊಳ್ಳಿ

    ದೇವರಹಿಪ್ಪರಗಿ: ಎರಡು ದಿನಗಳಿಂದ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ಮನೆಗಳು, ಡೋಣಿ ನದಿ ಪಕ್ಕದ ಜಮೀನುಗಳ ಹಾನಿ ಭರಿಸಲು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೂಚಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿ ಈ ವಿಷಯ ತಿಳಿಸಿದರು. ನಂತರ ತಾಲೂಕಿನಾದ್ಯಂತ ಹಾನಿಗೊಳಗಾದ ದೇವೂರ, ಸಾತಿಹಾಳ, ಯಾಳವಾರ, ಭೈರವಾಡಗಿ ಹಾಗೂ ಡೋಣಿ ನದಿ ಪ್ರವಾಹ ವೀಕ್ಷಿಸಿದ ಅವರು ರಾಜ್ಯಾದ್ಯಂತ ಭಾರಿ ಮಳೆಯಾಗಿದೆ. ನನ್ನ ಕ್ಷೇತ್ರದಲ್ಲಿ ಡೋಣಿ ನದಿ ಹಾಯ್ದು ಹೋಗಿರುವ ಪರಿಣಾಮ ಕೆಲವು ಊರುಗಳ ಸಂಪರ್ಕ ಕಡಿತಗೊಂಡಿದೆ. ಡೋಣಿ ನದಿ ಪಕ್ಕದ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಕೆಲವು ಗ್ರಾಮಗಳಲ್ಲಿ ಮನೆಗಳು ಬಿದ್ದಿವೆ.

    ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೆ ಮಾಡಲು ತಲಾಟಿಗಳಿಗೆ ಸೂಚಿಸಲಾಗಿದೆ. ಡೋಣಿ ನದಿ ಪಕ್ಕದ ಗ್ರಾಮಗಳಿಗೆ ಯಾವುದೇ ತರಹದ ಹಾನಿ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ಉನ್ನತಾಧಿಕಾರಿಗಳ ಪ್ರಕೃತಿ ವಿಕೋಪ ನಿರ್ವಹಣಾ ತಂಡ ರಚನೆ ಮಾಡಿ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಆದರೂ ವಿಪರೀತ ಮಳೆಯಾಗಿದ್ದು, ಹಳ್ಳ ಕೆರೆಗಳಿಗೆ ಭಾರಿ ನೀರು ಹರಿದು ಬಂದು ಹೊಲದ ಒಡ್ಡುಗಳು ಒಡೆದು ಬೆಳೆಹಾನಿಯಾಗಿದೆ. ಹಳ್ಳದ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ.
    ಇನ್ನೂ ಒಂದೆರಡು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದಕ್ಕಾಗಿ ಯಾರೂ ಹುಚ್ಚು ಸಾಹಸ ಮಾಡದೆ ಕೆರೆ ಹಳ್ಳದ ನೀರಲ್ಲಿ ಹೋಗದೆ ಡೋಣಿ ನದಿ ಹಾಗೂ ಹಳ್ಳದಲ್ಲಿ ನೀರು ಕಡಿಮೆ ಆಗುವವರೆಗೆ ಎಲ್ಲ ರೈತ ಬಾಂಧವರು ಹಾಗೂ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ವಿನಂತಿಸಿದರು.

    ಪ್ರಕೃತಿ ವಿಕೋಪ ನಿರ್ವಹಣಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಮಲ್ಲಿಕಾರ್ಜುನ ಭಜಂತ್ರಿ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡೆದ, ತಹಸೀಲ್ದಾರ್ ಸಿ.ಎ.ಗುಡದಿನ್ನಿ, ಕೃಷಿ ಇಲಾಖೆ ಅಧಿಕಾರಿ ಎಚ್.ವೈ.ಸಿಂಗೆಗೋಳ, ಸೋಮನಗೌಡ ಬಿರಾದಾರ, ಶಿರಸ್ತೇದಾರ ಮಹಿಪತಿ ದೇಸಾಯಿ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ತಾಪಂ ಎಡಿ ಎಸ್.ಎಸ್.ನ್ಯಾಮಣ್ಣವರ, ಪಪಂ ಸದಸ್ಯ ರಮೇಶ ಮಸಿಬಿನಾಳ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರಡ್ಡಿ, ಜಿಪಂ ಮಾಜಿ ಸದಸ್ಯ ರಾಜುಗೌಡ ನಾಡಗೌಡ, ಪಿಡಿಒಗಳು, ಪೊಲೀಸ್ ಸಿಬ್ಬಂದಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts