More

    ಹೃದಯದ ಕಾಳಜಿ ವಹಿಸಿ; ಪ್ರತಿ ವರ್ಷ ಆರೋಗ್ಯ ತಪಾಸಣೆ ಅಗತ್ಯ..

    ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಕಳವಳಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣಗಳೇನು, ಪರಿಹಾರದ ದಾರಿಗಳೇನು, ಹೃದಯದ ಆರೋಗ್ಯ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತ ಆಹಾರಪದ್ಧತಿ, ಆರೋಗ್ಯಕರ ಜೀವನಶೈಲಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್. ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಸಾರ ಇಲ್ಲಿದೆ.

    ನಮ್ಮ ದೇಶದಲ್ಲಿ ಹೃದಯಸಂಬಂಧಿ ಕಾಯಿಲೆ, ಹೃದಯಾಘಾತ ಚಿಕ್ಕವಯಸ್ಸಿಗೆ ಕಾಡುತ್ತಿರುವುದರಿಂದ 35 ವರ್ಷ ಮೀರಿದ ಪುರುಷರು ಮತ್ತು 45 ವರ್ಷ ದಾಟಿದ ಮಹಿಳೆಯರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಯನ್ನು (ಹೃದಯ ತಪಾಸಣೆಯನ್ನೂ) (ಮೆಡಿಕಲ್ ಚೆಕಪ್ ಆನಿವರ್ಸರಿ) ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ, ಕೊಬ್ಬು, ಇಸಿಜಿ ಮತ್ತು ಟ್ರೆಡ್​ವಿುಲ್ ಇಸಿಜಿಯನ್ನೂ ಮಾಡಿಸಿಕೊಳ್ಳಬೇಕು. ಬದಲಾದ ಜೀವನಶೈಲಿ, ಸ್ಪರ್ಧಾತ್ಮಕ ಬದುಕು, ಹೆಚ್ಚಿದ ಅಪೇಕ್ಷೆ ಮತ್ತು ನಿರೀಕ್ಷೆಗಳಿಂದಾಗಿ ಹೃದಯಾಘಾತ ಸಂಭವಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹೃದಯಾಘಾತ ಸಂಭವ ಹೆಚ್ಚು. ಆದರೆ, ಭಾರತದಲ್ಲಿ 40 ವರ್ಷ ದಾಟಿದವರಿಗೆ ಹೃದಯಾಘಾತ ಕಾಡುತ್ತಿದೆ. ಈ ಪೈಕಿ ಶೇ.30 ಪ್ರಮಾಣ ಯುವಕರಲ್ಲಿ ಕಂಡುಬರುತ್ತಿದೆ. ದೇಶದಲ್ಲಿನ ಸಾವುಗಳ ಪೈಕಿ ಶೇ.25 ಹೃದಯಾಘಾತದಿಂದಲೇ ಆಗುತ್ತಿವೆ. ಇದೇ ಮಾದರಿಯಲ್ಲಿ ಮುಂದುವರಿದರೆ 2025ಕ್ಕೆ ಭಾರತ ಹೃದಯಾಘಾತದ ರಾಜಧಾನಿ ಆಗಲಿದೆ. ಹೃದಯಾಘಾತದಿಂದ ಸಾವನ್ನಪ್ಪುವವರ ಪ್ರಮಾಣದಲ್ಲಿ ಶೇ.55 ಹೃದ್ರೋಗಿಗಳಿಗೆ ಆನುವಂಶಿಕ ಹಿನ್ನೆಲೆಯಿದೆ. ಅಲ್ಲದೆ, ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು. ಯುವತಿಯರೂ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಮಹಿಳೆಯರು ಪುರುಷರಷ್ಟೇ ಸರಿಸಮನಾಗಿ ಕೆಲಸ ಮಾಡುತ್ತಿದ್ದು, ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸಾರದ ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕು.

    ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 4 ವರ್ಷದಲ್ಲಿ 3,800 ಜನರ ಹೃದ್ರೋಗ ತಪಾಸಣೆ ಮಾಡಿ ಚಿಕಿತ್ಸೆ ಕೊಟ್ಟಿದ್ದೇವೆ. ಇದರಲ್ಲಿ ಶೇ.55 ಧೂಮಪಾನಿಗಳು. ವಯಸ್ಸಾದವರಲ್ಲಿ ಮಧುಮೇಹ ಕಾಯಿಲೆ ಜಾಸ್ತಿ. ಮಾದಕ ವ್ಯಸನಿಗಳಿಗೂ ಹೃದಯಾಘಾತ ಸಂಭವ ಹೆಚ್ಚಾಗಿರುತ್ತದೆ.

    | ಡಾ.ಸಿ.ಎನ್.ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

    ಹೈಪ್ರೋಟೀನ್ ಡಯಟ್ ಬೇಡ

    ಸ್ನಾಯು ಬೆಳವಣಿಗೆ ಮಾಡಬೇಕು, ಆಕರ್ಷಣೀಯವಾಗಿ ಕಾಣಬೇಕು ಎಂದು ಹೈಪ್ರೋಟೀನ್ ಡಯಟ್ ಮಾಡಿದಲ್ಲಿ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅಲ್ಸರ್ ಬೆಳೆಯುತ್ತದೆ. ರಾಸಾಯನಿಕ ಆಹಾರಕ್ಕಿಂತ ಸಾವಯವ ಆಹಾರ ಸೇವಿಸಬೇಕು. ಯೋಗ ಮಾಡುವುದಕ್ಕೂ ಮಿತಿ ಇರಬೇಕು. ಜಿಮ್ೆ ಸೇರುವ ಮೊದಲು ಕಾರ್ಡಿಯಾಲಜಿಸ್ಟ್ ಅವರಿಂದ ಹೃದಯ ಪರೀಕ್ಷೆಗೆ ಒಳಪಡಬೇಕು. ಹೃದಯದ ತೂಕ ಮತ್ತು ಬೊಜ್ಜು ಹೆಚ್ಚಾದರೆ ಅಪಾಯ. ದೊಡ್ಡ ದೊಡ್ಡ ಜಿಮ್ಳಲ್ಲಿ ತುರ್ತು ಆರೊಗ್ಯ ತಪಾಸಣೆ ಕೇಂದ್ರ ತೆರೆದು ಯಾವುದೇ ಅನಾರೋಗ್ಯಕ್ಕೂ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ದೇಶದಲ್ಲಿ 1960ರಲ್ಲಿ ಹೃದ್ರೋಗಿಗಳ ಪ್ರಮಾಣ ಶೇ.2 ಇದ್ದು 2020ರಲ್ಲಿ ಶೇ.8ಕ್ಕೆ ತಲುಪಿದೆ. ಈ ಹಿಂದೆ ಹೃದ್ರೋಗವನ್ನು ನಗರವಾಸಿಗಳ ಕಾಯಿಲೆ ಎನ್ನುತ್ತಿದ್ದರು. ಈಗ ಎಲ್ಲ ಹಳ್ಳಿಗಳಿಗೂ ತಲುಪಿದೆ. ಹೃದಯದ ರಕ್ತನಾಳಗಳು ಶೇ.100 ಬ್ಲಾಕ್ ಆದಾಗ ಹೃದಯಕ್ಕೆ ರಕ್ತಚಲನೆ ನಿಂತು ಕೆಲಸ ಸ್ಥಗಿತಗೊಳಿಸುತ್ತದೆ. ಆಗ ಹೃದಯಾಘಾತದ ನಂತರದ ಹಂತ ಹೃದಯಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಸಂಭವಿಸಿದಲ್ಲಿ ಜೀವ ಹೋಗುತ್ತದೆ.

    ತೂಕಕ್ಕೂ ಕೊಬ್ಬಿಗೂ ಸಂಬಂಧವಿಲ್ಲ

    ಶರೀರದ ತೂಕದ ಪ್ರಮಾಣಕ್ಕಿಂತಲೂ ಕೊಬ್ಬು ಜಾಸ್ತಿ ಇರುತ್ತದೆ. ‘ತುಂಬ ಸಣ್ಣಗಿದ್ದೇನೆ ನನಗೇನೂ ಆಗಲ್ಲ’ ಎಂಬುದು ತಪು್ಪಕಲ್ಪನೆ. ದೇಹದ ಶೇ.65 ಭಾಗದಲ್ಲಿ ಕೊಬ್ಬು ಉತ್ಪತ್ತಿ ಆಗುತ್ತದೆ. ಆಹಾರ ಪದ್ಧತಿಯಂತೆ ಉಳಿದ ಶೇ.35 ಭಾಗದಲ್ಲಿ ಕೊಬ್ಬು ಶೇಖರಣೆ ಆಗುತ್ತದೆ. ಹೀಗಾಗಿ, ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ಒತ್ತಡ, ಉದ್ವೇಗ, ಅತಿಯಾದ ಕೋಪ, ರೇಗಾಡುವುದು, ನಕಾರಾತ್ಮಕ ಚಿಂತನೆ, ಅಸೂಯೆ, ಅನುಮಾನ, ಅಹಂಕಾರ ಎಲ್ಲವೂ ಹೃದಯಾಘಾತಕ್ಕೆ ಕಾರಣವಾಗುತ್ತವೆ.

    ಸೂಕ್ತ ತಪಾಸಣೆ ಅವಶ್ಯ

    ಆನುವಂಶಿಕವಾಗಿ ಹೃದಯಾಘಾತ ಬಂದು ಮೃತಪಟ್ಟಿದ್ದಲ್ಲಿ ಅಂತಹ ಕುಟುಂಬದ ಸದಸ್ಯರು ವಾರ್ಷಿಕವಾಗಿ ಟ್ರೆಡ್​ವಿುಲ್ ಇಸಿಜಿ ಮಾಡಿಸಿಕೊಂಡರೆ ಹೃದಯಾಘಾತ ಸಾವು ನಿಯಂತ್ರಿಸಬಹುದು. ಚಿಕ್ಕವಯಸ್ಸಿಗೆ ಹೃದಯಾಘಾತ ಬರುತ್ತಿದ್ದರೆ ಇಖ ್ಚ್ಟ್ಞ್ಟ ಚ್ಞಜಜಿಟಜ್ಟಚಞ ಮಾಡಿಸಿಕೊಳ್ಳಬೇಕು. ಇದನ್ನು ಪ್ರತಿ ವರ್ಷ ಮಾಡಿಸಿಕೊಳ್ಳದೆ ಇಸಿಜಿಗೆ ಒಳಪಡಬೇಕು. ರಕ್ತನಾಳದಲ್ಲಿ ಕ್ಯಾಲ್ಸಿಯಂ ಸಂಗ್ರಹ ಆಗುತ್ತಿದ್ದರೆ ಕಾಯಿಲೆ ಆರಂಭವಾಗಿದೆ ಎಂದು ಅರ್ಥ. ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ಹೃದಯಾಘಾತದಿಂದ ಆಗುತ್ತಿರುವ ಶೇಕಡ 90ರಷ್ಟು ಸಾವು ತಡೆಗಟ್ಟಬಹುದು. ವಿದ್ಯಾರ್ಥಿಗಳು ಅಥವಾ ಯುವಕರು ಹೆಚ್ಚಿನ ಒತ್ತಡ, ಅತಿಯಾಸೆ ಮತ್ತು ನಿರೀಕ್ಷೆ ಇಟ್ಟುಕೊಳ್ಳದೆ ಹಂತ-ಹಂತವಾಗಿ ಮೇಲೆ ಬರಬೇಕು. ಆರಂಭದ ಹಂತದಲ್ಲಿಯೇ ಎಲ್ಲ ಸಾಧನೆ ಆಗಬೇಕು ಎಂದುಕೊಳ್ಳಬಾರದು. ನಮ್ಮ ಶಿಕ್ಷಣದಲ್ಲಿ ಕೇವಲ ಯಶಸ್ಸಿನ ಕಥೆಗಳನ್ನು ಅಳವಡಿ ಸಲಾಗಿದ್ದು, ಅಪಜಯ ಮತ್ತು ಅದರಿಂದ ಜಯದತ್ತ ಸಾಗುವ ಕಥೆಗಳನ್ನೂ ಮಕ್ಕಳಿಗೆ ತಿಳಿಸಬೇಕು.

    ಕಾಯಿಲೆ ಲಕ್ಷಣಗಳು

    ಯುವಕರು ಮತ್ತು ಚಿಕ್ಕಮಕ್ಕಳು ಎದೆನೋವು ಎಂದು ಆಸ್ಪತ್ರೆಗೆ ಬಂದರೆ ಆ ರೋಗಿಯ ಕಾಯಿಲೆ ಹಿಸ್ಟರಿ ತಿಳಿದುಕೊಳ್ಳಬೇಕು. ನಡೆಯುವಾಗ, ಭಾರ ಎತ್ತುವಾಗ, ಮೆಟ್ಟಿಲು ಹತ್ತಿದಾಗ ಎದೆಉರಿ, ಎದೆನೋವು ಬಂದರೆ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಆಗಿರುವ ಸಾಧ್ಯತೆ ಹೆಚ್ಚು. ಕುಳಿತಾಗ ಮತ್ತು ಮಲಗಿದಾಗ ಎದೆನೋವು, ಭುಜನೋವು ಇದ್ದು ನಡೆಯುವಾಗ ನೋವಿಲ್ಲದಿದ್ದರೆ ಅದು ಹೃದ್ರೋಗ ಅಲ್ಲ. ನಡೆಯುವಾಗ, ಓಡಾಡುವಾಗ ಎದೆನೋವು ಮತ್ತು ಎದೆಭಾರ ಕಂಡುಬಂದಲ್ಲಿ ಅದು ಹೃದಯದ ರಕ್ತನಾಳದ ಸಮಸ್ಯೆ ಆಗಿರಬಹುದು. ಇಂಥ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರಲ್ಲಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.

    ವ್ಯಾಯಾಮ ಮಾಡಿದ ತಕ್ಷಣ ನೀರು ಕುಡಿದರೆ, ಹೃದಯದ ಮೇಲೆ ಒತ್ತಡವೇ?

    -ಆ ರೀತಿ ಏನೂ ಇಲ್ಲ. ತಕ್ಷಣ ಅತಿಯಾದ ತಣ್ಣೀರು ಕುಡಿಯಬಾರದು ಅಷ್ಟೇ. ಕರೊನಾ ಬಂದವರಿಗೆ ಹೃದಯಾಘಾತದ ಸಾಧ್ಯತೆ ಉಂಟು. ಈ ವೇಳೆ ರಕ್ತ ಹೆಪು್ಪಗಟ್ಟುವಿಕೆ ಪ್ರಮಾಣ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ರಕ್ತ ಹೆಪು್ಪಗಟ್ಟುವಿಕೆ ತಡೆಯುವ ಮಾತ್ರೆಯನ್ನು 6ರಿಂದ 8 ವಾರ ತೆಗೆದುಕೊಳ್ಳಬೇಕು.

    ಟ್ರೆಡ್ ಮಿಲ್ ವ್ಯಾಯಾಮ ಎಷ್ಟು ಗಂಟೆ ಮಾಡಬೇಕು?

    -ಟ್ರೆಡ್ ಮಿಲ್ ವ್ಯಾಯಾಮ ಆರಂಭಿಸುವ ಮೊದಲು ಆಸ್ಪತ್ರೆಗೆ ಬಂದು ಚೆಕ್ ಮಾಡಿಸಿಕೊಳ್ಳಬೇಕು. ತುಂಬ ವೇಗದಲ್ಲಿ ಮಾಡಬಾರದು. 4ರಿಂದ 5 ಕಿ.ಮೀ. ಸ್ಪೀಡ್​ನಲ್ಲೇ ಹೆಚ್ಚು ಸಮಯ ಮಾಡಬೇಕು. ಇದಕ್ಕೂ ಮೊದಲು 3ರಿಂದ 4 ಕಿ.ಮೀ. ಸ್ಪೀಡ್ ಇರಬೇಕು. ಅತಿಯಾದ ಸ್ಪೀಡ್​ಗೆ ಹೋಗಬಾರದು.

    ಬಾಡಿಬಿಲ್ಡಿಂಗ್ ಮಾಡುವುದು ಸರಿಯೇ? ಹೃದಯಾಘಾತದ ಮುನ್ನ ಗೋಚರಿಸುವ ಲಕ್ಷಣಗಳೇನು?

    -ಜಿಮ್ಲ್ಲಿ ಬಾಡಿಬಿಲ್ಡಿಂಗ್ ಮಾಡುವುದರಿಂದ ತೊಂದರೆ ಇಲ್ಲ. ಪ್ರೋಟಿನ್ ಪೌಡರ್ ಬದಲು ನೈಸರ್ಗಿಕ ಆಹಾರ ತೆಗೆದುಕೊಳ್ಳಬೇಕು. ಹೃದಯಾಘಾತಕ್ಕೆ ಮುನ್ನ ಎದೆಭಾರ, ಊಟ ಮಾಡುವಾಗ ಸುಸ್ತು, ಹೊಟ್ಟೆ ಮೇಲ್ಭಾಗದಲ್ಲೂ ನೋವು ಕಾಣಿಸಬಹುದು. ತಡಮಾಡದೆ ವೈದ್ಯರನ್ನು ಕಾಣಬೇಕು.

    ಉತ್ತಮ ಆರೋಗ್ಯಕ್ಕಾಗಿ ಜಿಮ್

    ಹೃದಯದ ಕಾಳಜಿ ವಹಿಸಿ; ಪ್ರತಿ ವರ್ಷ ಆರೋಗ್ಯ ತಪಾಸಣೆ ಅಗತ್ಯ..

    | ಜಿಮ್ ರವಿ ಬಾಡಿ ಬಿಲ್ಡರ್

    ಯುವಕರ ಒತ್ತಡದ ಜೀವನಶೈಲಿ ಮತ್ತು ಅತಿ ಯಾಸೆ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆ ಬಂದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಜಿಮ್ ಮಾಡಿದರೆ ಅಡ್ಡಪರಿಣಾಮಗಳು ಸಂಭವಿಸುತ್ತವೆ ಎಂಬುದು ಸುಳ್ಳು. ದೇಹ ಬಲಿಷ್ಠವಾಗಿಟ್ಟುಕೊಳ್ಳಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ಮಾಡಬೇಕು. ಪುನೀತ್ ರಾಜಕುಮಾರ್ ಸಾವಿಗೆ ದೈಹಿಕ ಕಸರತ್ತು, ಜಿಮ್ ಕಾರಣವಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts