More

    ಹಕ್ಕುಪತ್ರ ನೀಡಲು ಸೂಕ್ತ ಕ್ರಮಕೈಗೊಳ್ಳಿ

    ಶೃಂಗೇರಿ: ರೈತರು ಹಾಗೂ ಕಾರ್ಮಿಕರು ಬಿಡುವಿಲ್ಲದಷ್ಟು ಕೆಲಸದ ನಡುವೆಯೂ ತಮ್ಮ ಸಮಸ್ಯೆಗೆ ಪರಿಹಾರ ದೊರಕಬಹುದು ಎಂಬ ಆಶಯದಿಂದ ಜನಸಂಪರ್ಕ ಸಭೆಗೆ ಬಂದಿದ್ದಾರೆ. ಅಧಿಕಾರಿಗಳು ಸಬೂಬು ಹೇಳದೆ ಜನ ಸಾಮಾನ್ಯರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
    ಮೆಣಸೆ ಗ್ರಾಪಂನ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಶಾಸಕರ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ನಿವೇಶನ ರಹಿತರು ತಮ್ಮ ಮನೆ ಹಕ್ಕುಪತ್ರ ಮತ್ತು ಇ-ಸ್ವತ್ತು ಮಾಡಿಸಲು ಹರಸಾಹಸ ಪಡುತ್ತಿದ್ದಾರೆ. ಹಾಲಿ ಇರುವ ಜಾಗಕ್ಕೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
    ಮಳೆಗಾಲ ಮುಗಿಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿ, ರಸ್ತೆ ಇಕ್ಕಲಗಳಲ್ಲಿ ಕಳೆ ತೆಗೆಯಲಾಗಿದೆ. ಟೆಂಡರ್ ಹಾಕಿ ರಸ್ತೆ ಕಾಮಗಾರಿ ಮಾಡದಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಮಂಜೂರಾಗಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
    ಗ್ರಾಮದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಾಗದ ಬಗ್ಗೆ ಗೊಂದಲವಿದ್ದು, 2004 ಇಸವಿಗಿಂತ ಮೊದಲು ಒತ್ತುವರಿ ಮಾಡಿರುವ ರೈತರ ಜಮೀನನ್ನು 4/1ನಿಂದ ಕೈಬಿಡಲು ಜಂಟಿ ಸರ್ವೇ ಮಾಡಲಾಗುತ್ತದೆ. ಅಲ್ಲದೇ ಒತ್ತುವರಿ ಮಾಡಿರುವ ರೈತರ ಕೃಷಿ ಭೂಮಿಯನ್ನು 25 ಎಕರೆಯವರೆಗೂ ಲೀಸ್ ಮೇಲೆ ನೀಡಲು ನಿರ್ಧರಿಸಲಾಗಿದ್ದರೂ ತಾಲೂಕಿನಲ್ಲಿ ಕಂದಾಯ ಇಲಾಖೆ ಜಾಗ ಕಡಿಮೆ ಇದೆ. ಭೂಮಿ ಇಲ್ಲದೇ ರೈತರಿಗೆ ಲೀಸ್ ಕೊಡುವುದು ಹೇಗೆ? ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆ ಈ ಹಿಂದೆ ಅವೈಜ್ಞಾನಿಕವಾಗಿ 4(1) ಮಾಡಿದ್ದರಿಂದ ಜನಸಾಮಾನ್ಯರು ಹಾಗೂ ರೈತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರಿಗೆ ಶಾಶ್ವತ ಪರಿಹಾರ ನೀಡಲು ಜಂಟಿ ಸರ್ವೇ ಮಾಡಲಾಗುವುದು ಎಂದರು.
    ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸುದೀಪ್, ಅರಣ್ಯ ಸಂರಕ್ಷಣಾ ವ್ಯವಸ್ಥಾಪನಾ ಅಧಿಕಾರಿ ರಾಮಕೃಷ್ಣ, ಹಾಲಂದೂರು ಪಿಎಸಿಎಸ್ ಅಧ್ಯಕ್ಷ ರಾಜೇಶ್, ವಿವಿಧ ಇಲಾಖೆ ಅಧಿಕಾರಿಗಳು, ಮೆಣಸೆ ಗ್ರಾಪಂ ಸದಸ್ಯರಾದ ಮಂಜುನಾಥ್, ತ್ರಿಮೂರ್ತಿ,ಅಜಿತ್ ಶೆಟ್ಟಿ, ರಾಜು ಶೂನ್ಯ, ಸುಷ್ಮಾ ಸುರೇಂದ್ರ ಮೆಣಸೆ ಗ್ರಾಪಂ ಪಿಡಿಒ ನಾಗಭೂಷಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts