More

    ಪಿಂಚಣಿದಾರರ ಮೇಲಿರಲಿ ಸಹಾನುಭೂತಿ ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಿವಿಮಾತು

    ಬೆಂಗಳೂರು : ಕನ್ನಡ ಮಾಧ್ಯಮ ಹಾಗೂ ‘ಕನ್ನಡ’ವನ್ನು ಒಂದು ಭಾಷೆಯಾಗಿ ಎಸ್‌ಎಸ್‌ಎಲ್‌ಸಿವರೆಗೂ ಅಧ್ಯಯನ ಮಾಡಿರುವ ಸರ್ಕಾರಿ ನೌಕರರಿಗೆ ಒಂದು ಬಾರಿಯ ಇನ್ಕ್ರಿಮೆಂಟ್ ನಿರಾಕರಿಸಿದ್ದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಿಂಚಣಿದಾರರನ್ನು ರಾಜ್ಯ ಸರ್ಕಾರ ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

    ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ಸೀತಾಲಕ್ಷ್ಮಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಅರ್ಜಿದಾರರ ಪರ ವಕೀಲರು, ಶೈಕ್ಷಣಿಕ ಅರ್ಹತೆ ಕಾರಣದಿಂದ ಕಕ್ಷಿದಾರರಿಗೆ ಇನ್ಕ್ರಿಮೆಂಟ್ ನೀಡಬೇಕಾಗಿತ್ತು ಮತ್ತು ಅಂತಹ ಸೌಲಭ್ಯ ನಿರಾಕರಿಸಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಿದರು.

    ಅಲ್ಲದೆ, ಸಂಬಳ ಮತ್ತು ವೇತನವಾಗಿ ಪಾವತಿಸಬೇಕಾದ ಹಣವು ಉದ್ಯೋಗಿಯ ಆಸ್ತಿಯಾಗಿರಲಿದೆ. ಆದ್ದರಿಂದ ಈ ಮೊತ್ತ ಪಾವತಿಸದಿರುವುದು ಸಂವಿಧಾನದ 300ನೇ ಎ ವಿಧಿಯಡಿ ಸಾಂವಿಧಾನಿಕ ಖಾತರಿ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರ ವಕೀಲರು, ಅರ್ಜಿದಾರರು ಸಾಕಷ್ಟು ವಿಳಂಬವಾಗಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ನ್ಯಾಯಮಂಡಳಿ ತೀರ್ಪು ಸರಿಯಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

    ವಿಚಾರಣೆ ಆಲಿಸಿದ ನ್ಯಾಯಪೀಠ, 2018ರಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ 3 ತಿಂಗಳ ಒಳಗಾಗಿ ಇನ್ಕ್ರಿಮೆಂಟ್ ಮಂಜೂರು ಮಾಡುವಂತೆ ಮತ್ತು ಹೆಚ್ಚಳದ ಬಾಕಿ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತು. ಜತೆಗೆ, ಈ ಆದೇಶ ಜಾರಿ ವಿಫಲವಾದಲ್ಲಿ, ವಿಳಂಬವಾದ ಪ್ರತಿ ತಿಂಗಳಿಗೆ ಶೇ.2 ದರದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕು. ಆ ಬಡ್ಡಿ ಮೊತ್ತವನ್ನು ತಕ್ಷಣಕ್ಕೆ ಸರ್ಕಾರ ಪಾವತಿ ಮಾಡಬೇಕು. ಬಳಿಕ ಇದಕ್ಕೆ ಕಾರಣವಾದ ಅಧಿಕಾರಿಯಿಂದ ಸರ್ಕಾರ ವಸೂಲಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿತು.

    ಅರ್ಜಿದಾರರು 1980ರ ಸೆ.24ರಿಂದ 2019ರ ಅ.31ರವರೆಗೆ ಕಳಂಕರಹಿತವಾಗಿ ಕೆಲಸ ಮಾಡಿದ್ದಾರೆ. ಸುಮಾರು ಮೂರು ದಶಕಗಳಿಂದ ಕಡಿಮೆ ಸಂಬಳದಲ್ಲಿ ರಾಜ್ಯಕ್ಕೆ ಸೇವೆ ಸಲ್ಲಿಸಿದ ಬಡ ಮಹಿಳೆ ಎಂಬ ಅಂಶವನ್ನು ನಾವು ಮರೆಯಲು ಸಾಧ್ಯವಿಲ್ಲ. ಅವರು ಪ್ರಾಥಮಿಕ ಶಾಲಾ ಶಿಕ್ಷಕಿ ಎಂಬ ಅತ್ಯಂತ ವಿನಮ್ರವಾಗಿ ಸೇವೆ ಮಾಡಿದ್ದಾರೆ. ಬಹುಶಃ ಅವರು ಸರ್ಕಾರಿ ಶಾಲೆಯಲ್ಲಿ ತಾಯಿಯಾಗಿಯೂ ಅನೇಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಇದೀಗ ಅವರು ಸೇವೆಯಿಂದ ನಿವೃತ್ತರಾಗಿದ್ದು, ಹೆಚ್ಚು ಪಿಂಚಣಿ ಪಡೆಯದಂತಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts