More

    ಬಿಎಸ್‌ವೈರಿಂದ ಚೈತನ್ಯಪೂರ್ಣ ಆಡಳಿತ ; ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಅಭಿಮತ

    ಗುಬ್ಬಿ : ಚೈತನ್ಯಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಲವು ಕಾಣದ ಕೈಗಳು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿರುವುದು ತರವಲ್ಲ ಎಂದು ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

    ಹೇರೂರಿನ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದೇಪದೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದರೆ ಅಧಿಕಾರ ನಡೆಸುವವರ ನೈತಿಕ ಸ್ಥೈರ್ಯ ಕುಸಿದು, ರಾಜ್ಯದ ಆಡಳಿತ ಯಂತ್ರಾಂಗ ಕುಂಠಿತಗೊಳ್ಳುತ್ತದೆ. ಒಂದು ವೇಳೆ ಬಿಎಸ್‌ವೈ ಏನಾದರೂ ತಪ್ಪು ಮಾಡಿದ್ದರೆ ಅದನ್ನು ಮನ್ನಿಸಿ ಪೂರ್ಣಾವಧಿವರೆಗೆ ಸಿಎಂ ಆಗಿರಲು ಅವಕಾಶ ನೀಡಬೇಕು ಎಂದರು.

    ಯಡಿಯೂರಪ್ಪ ಇಳಿವಯಸ್ಸಿನಲ್ಲಿಯೂ ಜನ ಒಪ್ಪುವ ರೀತಿ ಕಾರ್ಯನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾರೆ. ರೈತ, ದೀನ ದಲಿತರ ಪರ ಕಾಳಜಿ ಹೊಂದಿರುವ ಅವರು ಉತ್ತಮ ಆಡಳಿತ ನೀಡುತ್ತಿರುವಾಗ ಅಧಿಕಾರದಿಂದ ಇಳಿಸುವುದು ಸೂಕ್ತವಲ್ಲ. ಹಾಗಾಗಿ ಪೂರ್ಣಾವಧಿಗೆ ಅಧಿಕಾರ ನಡೆಸಲು ಹೈಕಮಾಡ್ ಅವಕಾಶ ಮಾಡಿಕೊಡಬೇಕು ಎಂದು ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಒತ್ತಾಯಿಸಿದರು.

    ಕರೊನಾ ಸಂಕಷ್ಟವನ್ನು ಬಿಎಸ್‌ವೈ ಉತ್ತಮವಾಗಿ ನಿರ್ವಹಿಸಿದ್ದಾರೆ. ಹೀಗಿದ್ದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಅದರ ಪರಿಣಾಮವನ್ನು ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ದೊಡ್ಡಗುಣಿ ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ರಾಜ್ಯದ ಅಲೆವಾರಿ ಹಾಗೂ ಅರೆ ಅಲೆವಾರಿ ಜನಾಂಗದ ಅಭಿವೃದ್ಧಿಗೆ ಯಡಿಯೂರಪ್ಪ ಹೆಚ್ಚಿನ ಅನುದಾನ ನೀಡಿದ್ದಾರೆ. ಎಲ್ಲ ಜಾತಿ, ಧರ್ಮಗಳನ್ನು ಒಟ್ಟುಗೂಡಿಸಿಕೊಂಡು ಜಾತ್ಯತೀತವಾಗಿ ಮುಖ್ಯಮಂತ್ರಿ ಗಾದಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಮಠಗಳು ಬೆಂಬಲಿಸುವುದರಲ್ಲಿ ತಪ್ಪೇನಿಲ್ಲ ಎಂದು ಕೋಡಿಹಳ್ಳಿ ಮಠದ ಬಸವ ಬೃಂಗೇಶ್ವರ ಸ್ವಾಮೀಜಿ ಹೇಳಿದರು.

    ಬಸವ ಬೃಂಗೇಶ್ವರ ಸ್ವಾಮೀಜಿ ಹಾಗೂ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಪಪಂ ಸದಸ್ಯ ಶಿವಕುವಾರ್, ಗ್ರಾಪಂ ಸದಸ್ಯರಾದ ರೇಣುಕಾಪ್ರಸಾದ್, ಲೋಕೇಶ್, ವಿಎಸ್ಸೆಸ್ಸೆನ್ ನಿರ್ದೇಶಕ ಗುರುಪ್ರಸಾದ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಹೇರೂರು ರಮೇಶ್, ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿದ್ದಲಿಂಗಮೂರ್ತಿ, ನಿರ್ದೇಶಕರಾದ ಬಸವಲಿಂಗಯ್ಯ, ಶಶಿಭೂಷಣ್, ಶಿವಕುವಾರ್, ದಿವ್ಯಾಪ್ರಕಾಶ್, ಕುವಾರ್, ವಕೀಲ ಹೇಮಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಣ್ಣ, ನೊಳಂಬ ವೀರಶೈವ ಸಂದ ಪದಾಧಿಕಾರಿ ಗಂಗಾಧರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts