More

    ಮತದಾರ ಪಟ್ಟಿ ಪರಿಷ್ಕರಣೆ ನಿರ್ಲಕ್ಷಿಸಿದರೆ ಅಮಾನತು

    ಹಾವೇರಿ: ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಮರಣ ಹೊಂದಿದವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕುರಿತು ವಿಶೇಷ ಗಮನಹರಿಸಬೇಕು. ಜಿಲ್ಲೆಯಲ್ಲಿ ಈ ಕಾರ್ಯ ನಿರಾಶಾದಯಕವಾಗಿದ್ದು, ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕ ಮನೋಜ್ ಜೈನ್ ಎಚ್ಚರಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್​ಗಳ ಸಭೆ ನಡೆಸಿ ಮಾತನಾಡಿದ ಅವರು, ಹಿಂದಿನ ಸಭೆಯಲ್ಲಿ ಹೊಸ ಮತದಾರರ ಸೇರ್ಪಡೆ, ಮಾರ್ಪಾಡು, ತಿದ್ದುಪಡಿ ಹಾಗೂ ಮರಣ ಹೊಂದಿದವರನ್ನು ದೃಢಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ಕೈಬಿಡಲು ಮತಗಟ್ಟೆವಾರು ಸಭೆ ನಡೆಸಲು ಸೂಚಿಸಲಾಗಿತ್ತು. ಆದರೂ ಈವರೆಗೂ ನಿರೀಕ್ಷಿತ ಸಾಧನೆಯಾಗಿಲ್ಲ. ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಉಪವಿಭಾಗಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಗ್ರಾಮದ ಜನನ ಹಾಗೂ ಮರಣ ನೋಂದಣಿ ಅಧಿಕಾರಿ ಗ್ರಾಮ ಲೆಕ್ಕಾಧಿಕಾರಿಯಾಗಿರುತ್ತಾನೆ. ಆ ಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲಿ ಮರಣ ಹೊಂದಿದವರು ಯಾರು ಎಂಬ ಮಾಹಿತಿ ಈ ಅಧಿಕಾರಿಗಿರುತ್ತದೆ. ಆದರೂ ಹೆಸರು ತೆಗೆದು ಹಾಕಲು ಇರುವ ತೊಡಕೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಕುರಿತು ಮತಗಟ್ಟೆವಾರು ಖುದ್ದಾಗಿ ಪರಿಶೀಲನೆ ನಡೆಸಿ ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ 1,470 ಮತಗಟ್ಟೆಗಳ ಪೈಕಿ 245 ಮತಗಟ್ಟೆಗಳಲ್ಲಿ ಸೇರ್ಪಡೆಗೆ ಹಾಗೂ 942 ಮತಗಟ್ಟೆಗಲ್ಲಿ ಕೈಬಿಡುವ ಕುರಿತು ಯಾವುದೇ ಅರ್ಜಿಗಳು ಸ್ವೀಕೃತವಾಗಿಲ್ಲ. 80 ವರ್ಷ ವಯೋಮಾನ ಮೇಲ್ಪಟ್ಟವರು ಜಿಲ್ಲೆಯಲ್ಲಿ 32,058 ಮತದಾರರಿದ್ದಾರೆ. ಈ ಕುರಿತು ಮತಗಟ್ಟೆವಾರು ಪರಿಶೀಲನೆ ನಡೆಸಿ ಎಂದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮಾತನಾಡಿ, ಮತದಾರರ ಪರಿಷ್ಕರಣೆ ಕುರಿತು ಎಲ್ಲ ತಹಸೀಲ್ದಾರ್​ಗಳು ವೈಯಕ್ತಿಕವಾಗಿ ಗಮನಹರಿಸಬೇಕು. ಬಿಎಲ್​ಒಗಳೊಂದಿಗೆ ಪ್ರತಿದಿನ ಮಾತನಾಡಿ, ಮತಗಟ್ಟೆವಾರು ಮತದಾರರ ಪರಿಷ್ಕರಣೆ ಕುರಿತು ಮಾಹಿತಿ ಪಡೆಯಬೇಕು. ಪ್ರಗತಿ ಕಡಿಮೆಯಿರುವ ಮತಗಟ್ಟೆಗೆ ಭೇಟಿ ನೀಡಿ ಕ್ರಮವಹಿಸಬೇಕು ಎಂದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಸ್​ಪಿ ಕೆ.ಜಿ. ದೇವರಾಜ್, ಉಪವಿಭಾಗಾಧಿಕಾರಿಗಳಾದ ಡಾ. ದಿಲೀಪ ಶಶಿ, ಅನ್ನಪೂರ್ಣ ಮುದಕಮ್ಮನವರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಚುನಾವಣಾ ತಹಸೀಲ್ದಾರ್ ಪ್ರಶಾಂತ ನಾಲವಾರ, ತಹಸೀಲ್ದಾರ್​ಗಳಾದ ಶಂಕರ ಜಿ.ಎಸ್., ರವಿ ಕೊರವರ, ಬಸವನಗೌಡ ಕೋಟೂರ, ಮಲ್ಲಿಕಾರ್ಜುನ ಹೆಗ್ಗಣ್ಣನವರ, ಪಿ.ಎಸ್. ಎರಿಸ್ವಾಮಿ, ಪ್ರಕಾಶ ಕುದರಿ, ಉಮಾ ಕೆ.ಎ., ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts