More

    ನಕ್ಕು ನಗಿಸಿದ ‘ಸೂಪರ್‌ ಸಂಸಾರ’

    ಹೊಂದಿಕೊಂಡು ಬಾಳಿದರೆ ಸ್ವರ್ಗಸುಖ ಎಂಬುದೇ ನಾಟಕದ ಸಂದೇಶ

    ಗದಗ: ಗುರು ಇನ್‌ಸ್ಟಿಟ್ಯೂಟ್‌ ಹುಬ್ಬಳ್ಳಿ ತಂಡವು ನಗರದ ವಿದ್ಯಾದಾನ ಸಮಿತಿಯ ಶಾಲಾ ಆವರಣದಲ್ಲಿ ಪ್ರದರ್ಶಿಸಿದ ‘ಸೂಪರ್ ಸಂಸಾರ’ ನಾಟಕ ರಂಗರಸಿಕರಿಗೆ ನಗೆಯ ರಸದೌತಣ ಉಣಬಡಿಸಿತು.

    ಎರಡು ಗಂಟೆ ಇಪ್ಪತ್ತು ನಿಮಿಷದ ಈ ನಾಟಕದಲ್ಲಿ ಬರುವ ಸಂಭಾಷಣೆಗಳು ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದವು. ನಾಟಕದ ಒಂದೊಂದು ಪಾತ್ರವೂ ಜೀವಂತವಾಗಿದ್ದಷ್ಟೇ ಅಲ್ಲ, ಪ್ರತಿ ಪ್ರೇಕ್ಷಕನ ಹೃದಯ ಮುಟ್ಟಿದವು. ಸುಸಜ್ಜಿತ ರಂಗಸಜ್ಜಿಕೆ, ಕರಾರುವಾಕ್‌ ಆದ ಬೆಳಕಿನ ಬಳಕೆ ಮತ್ತು ಧ್ವನಿ ವ್ಯವಸ್ಥೆ ನಾಟಕವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು.

    ನಾಟಕ ಆರಂಭವಾಗುವುದು ಮೂವರು ಅಣ್ಣ ತಮ್ಮಂದಿರನ್ನು ಸಂಭಾಳಿಸುವ ವೈನಿಯ ದೃಶ್ಯದಿಂದ. ಧಾರವಾಡದ ಶಿಲ್ಪಾ ಪಾಂಡೆ ಎಲ್ಲರಿಗೂ ಮೆಚ್ಚಿನ ವೈನಿ ಆಗಿ ಗೆದ್ದರು. ಈ ವೈನಿಗೆ ಸಾಥ್ ನೀಡುವ ಭಾವಾಜೀಗಳು ಇಬ್ಬರು, ಒಬ್ಬ ನಯನಭಾವಾಜೀ (ಪ್ರದೀಪ ಮುಧೋಳ), ಇನ್ನೊಬ್ಬ ಮುಕೇಶಭಾವಾಜೀ (ಕೃಷ್ಣಮೂರ್ತಿ ಗಾಂವಕರ್). ಇಬ್ಬರೂ ಅಪ್ರತಿಮ ನಟರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

    ನಾಟಕದ ಉದ್ದಕ್ಕೂ ಪೂರ್ಣ ಮಾತನಾಡಲು ಬಾರದ ಯುವಕನಾಗಿ ಗಾಂವಕರ್, ರಾತ್ರಿ ದೃಷ್ಟಿ ಕಳೆದುಕೊಳ್ಳುವ ಗಂಡನಾಗಿ ಪ್ರದೀಪ ಮಿಂಚಿದರು. ಎದುರು ಮನೆಯ ಸುಂದರಿಯಾಗಿ ಹೆಗ್ಗೋಡಿನ ಹತ್ತಿರದ ಹಳ್ಳಿ ಪುರಪ್ಪೆಮನೆಯ ಪ್ರತಿಭೆ ಅರ್ಪಿತಾ ಬಿ. ನಾಟಕ, ಯಕ್ಷಗಾನ ಹಾಗೂ ಕಿರುತೆರೆ ಕಲಾವಿದೆ. ಈಗಾಗಲೇ ಹತ್ತು ಹಲವು ಧಾರಾವಾಹಿಗಳಲ್ಲಿ ನಟಿಸಿದ ಇವರು ಕನ್ನಡಿಗರಿಗೆ ಪರಿಚಿತ ಕಲಾವಿದೆ. ನಾಟಕದಲ್ಲಿ ಇವರಿಗೆ ದಿನದಲ್ಲಿ ಏನೇನು ಕಾಣುವುದಿಲ್ಲ, ಹಗಲು ಕಣ್ಣು ಕಳೆದು ಕೊಳ್ಳುವ ಹುಡುಗಿಯ ಪಾತ್ರದಲ್ಲಿ ಇವರೂ ಮಿಂಚಿದರು.

    ವಕೀಲ ರವಿ ಕುಲಕರ್ಣಿ ಮರೆಗುಳಿ ಗಂಡನಾಗಿ ಮತ್ತು ಸುನೇತ್ರಾಳ ತಂದೆಯಾಗಿ ಗಮನಾರ್ಹ ಅಭಿನಯ ನೀಡಿದರು. ಇವರ ಮಡದಿ ಲಕ್ಷ್ಮಿಯಾಗಿ ಹುಬ್ಬಳ್ಳಿಯ ಪ್ರಿಯಾ ಕುಲಕರ್ಣಿ ಅಭಿನಯಿಸಿದರು. ಎಂಬಿಎ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರ ಸಹಜ ಅಭಿನಯವೇ ನಾಟಕಕ್ಕೊಂದು ಶಕ್ತಿ. ಮರೆಯುವ ರೋಗದ ಗಂಡ, ಹಗಲು ಕಣ್ಣುಕಾಣದ ಮಗಳನ್ನು ಸಂಭಾಳಿಸುವ ಗೃಹಿಣಿಯ ಪಾತ್ರದಲ್ಲಿ ಪ್ರಿಯಾ ಅವರು ತಮ್ಮ ಸಹಜ ಅಭಿನಯದಿಂದ ಮನಸೂರೆಗೊಂಡರು.

    ಇಡೀ ನಾಟಕಕ್ಕೆ ಕಳಶವಿಟ್ಟಂತೆ ಪ್ರತ್ಯಕ್ಷವಾಗುತ್ತಾರೆ ಕಿವಿ ಕೇಳದ ದಾದಾ ಪಾತ್ರದಲ್ಲಿ ಯಶವಂತ ಸರದೇಶಪಾಂಡೆ. ತುಸು ದಪ್ಪ ಎನಿಸಿದರೂ ರಂಗದ ಮೇಲೆ ಅವರು ಪಾದರಸ. ಇವರು ವೇದಿಕೆಗೆ ಬಂದರೆ ಎಲ್ಲೆಲ್ಲೂ ಹಾಸ್ಯರಸ. ಸಂಭಾಷಣೆ ಸ್ಪಷ್ಟ ಮತ್ತು ಭಾವಪೂರಿತ, ಅಭಿನಯ ಅಮೋಘ ಎನಿಸುವಂತಿತ್ತು.

    ‘ಸೂಪರ್‌ ಸಂಸಾರ’ ನಾಟಕದಲ್ಲಿ ಒಟ್ಟು ಏಳು ಪಾತ್ರಗಳಿದ್ದವು. ನಾಟಕಕ್ಕೆ ಸಂಗೀತ ಪ್ರವೀಣ ಡಿ. ರಾವ್ ಅವರದ್ದು. ಪ್ರಚಾರ, ಪ್ರಸಾರ ನಾಗರಾಜ ಪಾಟೀಲ, ಮೇಲ್ವಿಚಾರಣೆ ಹೊಣೆಯನ್ನು ಜೀವನ್ ಫರ್ನಾಂಡಿಸ್ ಹೊತ್ತಿದ್ದರು. ‘ಸೂಪರ್ ಸಂಸಾರ’ ಮುಂಬೈನ ಸಂತೋಷ ಪವಾರ ಮರಾಠಿಯಲ್ಲಿ ಬರೆದದ್ದನ್ನು ಹುಬ್ಬಳ್ಳಿ ಧಾರವಾಡ ನೆಲದ ಸೊಗಡಿಗೆ ಅಳವಡಿಸಿ ಅನುವಾದಿಸಿದ್ದರಲ್ಲಿ ಸರದೇಶಪಾಂಡೆಯವರ ಭಾಷಾ ಪ್ರಭುತ್ವ ಮತ್ತು ಸಂಭಾಷಣೆ ಬರೆಯುವ ಚಾತುರ್ಯ ಎದ್ದು ಕಾಣುತ್ತದೆ. ನಾಟಕದ ಕಥಾಹಂದರವು ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ. ಹೊಂದಿಕೊಂಡು ಬಾಳಿದರೆ ಸ್ವರ್ಗಸುಖ ಎಂಬ ಸತ್ಯವನ್ನು ನಗಿಸುತ್ತಲೇ ಪ್ರೇಕ್ಷಕರಿಗೆ ದಾಟಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts